ದುರ್ಬಲಗೊಳ್ಳುತ್ತಿರುವ ಕಾಂಗ್ರೆಸ್ ಬಲಪಡಿಸಲು 'ಜಿ-23' ಒಗ್ಗಟ್ಟು ಪ್ರದರ್ಶನ: ಜಮ್ಮುವಿನಲ್ಲಿ ಭಿನ್ನಮತೀಯರ ಸಭೆ 

ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಹಾಗೂ ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ತರುವಂತೆ ಒತ್ತಾಯಿಸುತ್ತಿರುವ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್ ಸೇರಿದಂತೆ ಜಿ-23  ಮುಖಂಡರು ಶನಿವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು.  

Published: 27th February 2021 11:47 PM  |   Last Updated: 27th February 2021 11:54 PM   |  A+A-


Gulab_nabi_azad_kabil_sibal_other_Congress_leaders1

ಗುಲಾಂ ನಬಿ ಅಜಾದ್, ಕಪಿಲ್ ಸಿಬಲ್ ಮತ್ತಿತರ ಕಾಂಗ್ರೆಸ್ ಮುಖಂಡರು

Posted By : Nagaraja AB
Source : The New Indian Express

ಜಮ್ಮು: ಕಾಂಗ್ರೆಸ್ ಪಕ್ಷದಲ್ಲಿ ನಾಯಕತ್ವ ಬದಲಾವಣೆ ಹಾಗೂ ಪಕ್ಷದ ಪ್ರತಿ ಹಂತದಲ್ಲೂ ಬದಲಾವಣೆ ತರುವಂತೆ ಒತ್ತಾಯಿಸುತ್ತಿರುವ ಗುಲಾಂ ನಬಿ ಅಜಾದ್, ಆನಂದ್ ಶರ್ಮಾ, ಕಪಿಲ್ ಸಿಬಲ್ ಸೇರಿದಂತೆ ಜಿ-23  ಮುಖಂಡರು ಶನಿವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಕಾಂಗ್ರೆಸ್ ಪಕ್ಷ ದುರ್ಬಲಗೊಳ್ಳುತ್ತಿದ್ದು, ಅದನ್ನು ಬಲಪಡಿಸಲು ಒಟ್ಟಾಗಿ ಬಂದಿರುವುದಾಗಿ ಭಿನ್ನಮತೀಯ ಮುಖಂಡರು ತಿಳಿಸಿದರು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಕಪಿಲ್ ಸಿಬಲ್, ಇದು ಸತ್ಯವನ್ನು ಮಾತನಾಡುವ ಸಂದರ್ಭವಾಗಿದೆ. ನಾನು ಸತ್ಯವನ್ನು ಮಾತನಾಡುತ್ತೇನೆ. ಕಾಂಗ್ರೆಸ್ ದುರ್ಬಲಗೊಳ್ಳುತ್ತಿರುವುದನ್ನು ನಾವೆಲ್ಲ ನೋಡುತ್ತಿದ್ದೇವೆ. ಅದನ್ನು ಬಲಪಡಿಸಲು ನಾವೆಲ್ಲ ಒಗ್ಗೂಡಿದ್ದೇವೆ ಎಂದು ಹೇಳಿದರು.

ಭೂಪೀಂದರ್ ಸಿಂಗ್ ಹೂಡಾ, ಮನಿಷ್ ತಿವಾರಿ, ವಿವೇಕಾ ಟಂಕಾ ಮತ್ತು ರಾಜ್ ಬಬ್ಬರ್ ಮತ್ತಿತರ ಕಾಂಗ್ರೆಸ್ ಪಕ್ಷದ ಅನೇಕ ಮುಖಂಡರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾಂಗ್ರೆಸ್ ಪಕ್ಷದ ಕಾರ್ಯನಿರ್ವಹಣೆ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿ, ಪೂರ್ಣವಧಿಯ ಅಧ್ಯಕ್ಷರಿಗಾಗಿ ಆಗ್ರಹಿಸಿ ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರಿಗೆ ಕಳೆದ ವರ್ಷ ಪತ್ರ ಬರೆದಿದ್ದ ಕಾಂಗ್ರೆಸ್ ಮುಖಂಡರ ಗುಂಪು ಇದೀಗ ಜಿ-23 ಎಂದು ಹೆಸರಾಗಿದೆ.

ನನಗೆ ಹೇಳಲು ಹಿಂಜರಿಕೆ ಇಲ್ಲ, ಪದಾಧಿಕಾರಿ ಆದ ಮಾತ್ರಕ್ಕೆ ಎಲ್ಲರೂ ಮುಖಂಡರಾಗಲು ಸಾಧ್ಯವಿಲ್ಲ. ಜನರಿಂದ ಗುರುತಿಸಲ್ಪಟ್ಟ ಕೆಲವೇ ಮಂದಿ ಮಾತ್ರ ಮುಖಂಡರಾಗುತ್ತಾರೆ. ಕೇವಲ ಒಂದು ರಾಜ್ಯ ಮಾತ್ರವಲ್ಲ, ಕೇರಳ, ಮಹಾರಾಷ್ಟ್ರ, ಪಂಜಾಬ್, ಉತ್ತರ ಪ್ರದೇಶ ಮತ್ತು ಕರ್ನಾಟಕದಲ್ಲಿ ಗುರುತಿಸಲ್ಪಟ್ಟವರು ಮಾತ್ರ ಮುಖಂಡರಾಗುತ್ತಾರೆ ಎಂದು ಆನಂದ್ ಶರ್ಮಾ ಹೇಳಿದರು.

ದೇಶದ ಪ್ರತಿಯೊಂದು ಜಿಲ್ಲೆಗಳಲ್ಲೂ ಕಾಂಗ್ರೆಸ್ ಪಕ್ಷವನ್ನು ಬಲಪಡಿಸಬೇಕಾಗಿದೆ. ಕಾಂಗ್ರೆಸ್ ದುರ್ಬಲಗೊಳ್ಳಲು ನಾವು ಬಿಡುವುದಿಲ್ಲ. ಕಾಂಗ್ರೆಸ್ ದುರ್ಬಲವಾದರೆ ದೇಶ ದುರ್ಬಲಗೊಳ್ಳಲಿದೆ. ಪಕ್ಷ ಹಾಗೂ ದೇಶವನ್ನು ಸದೃಢಗೊಳಿಸಲು ಅಗತ್ಯವಾದದ್ದನ್ನು ತ್ಯಾಗ ಮಾಡುತ್ತೇವೆ ಎಂದು ರಾಜ್ ಬಬ್ಬರ್ ತಿಳಿಸಿದರು.

ಪಂಚ ರಾಜ್ಯಗಳ ಚುನಾವಣೆ ದಿನಾಂಕ ಘೋಷಣೆಯಾದ ಬಳಿಕ ಕಾಂಗ್ರೆಸ್ ಪಕ್ಷದಲ್ಲಿನ ಭಿನ್ನಮತೀಯ ಮುಖಂಡರು ಸಭೆ ಸೇರಿರುವುದರಿಂದ  ಪಕ್ಷದಲ್ಲಿನ ಮುಂದಿನ ವಿದ್ಯಮಾನಗಳು ತೀವ್ರ ಕುತೂಹಲಕ್ಕೆ ಕಾರಣವಾಗಿವೆ.

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp