ಘಾಜಿಯಾಬಾದ್: ಪ್ರತಿಭಟನಾ ಸ್ಥಳದಲ್ಲಿದ್ದ ಮೊಬೈಲ್ ಶೌಚಾಲಯದಲ್ಲೇ ನೇಣಿಗೆ ಶರಣಾದ ರೈತ
ಕೇಂದ್ರ ಸರ್ಕಾದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಒಂದು ತಿಂಗಳಿಂದ ಗಾಜಿಯಾಬಾದ್ನ ಯುಪಿ ಗೇಟ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರೊಬ್ಬರು,...
Published: 02nd January 2021 03:01 PM | Last Updated: 02nd January 2021 03:01 PM | A+A A-

ಘಾಜಿಯಾಬಾದ್
ಲಖನೌ: ಕೇಂದ್ರ ಸರ್ಕಾದ ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ಒಂದು ತಿಂಗಳಿಂದ ಗಾಜಿಯಾಬಾದ್ನ ಯುಪಿ ಗೇಟ್ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ರೈತರೊಬ್ಬರು, ಸ್ಥಳದಲ್ಲಿದ್ದ ಮೊಬೈಲ್ ಶೌಚಾಲಯದಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶನಿವಾರ ನಡೆದಿದೆ.
ಸಾವಿಗೆ ಶರಣಾದ ರೈತ ಉತ್ತರ ಪ್ರದೇಶದ ರಾಂಪುರ್ ಜಿಲ್ಲೆಯ ಬಿಲಾಸ್ಪುರ್ ಗ್ರಾಮದ 75 ವರ್ಷದ ಕಾಶ್ಮಿರ ಸಿಂಗ್ ಎಂದು ಗುರುತಿಸಲಾಗಿದೆ. ರೈತ ಸಾವಿಗೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದು, ಸದ್ಯ ಪ್ರತಿಭಟನೆ ನಡೆಯುತ್ತಿರುವ ಯುಪಿ ಗೇಟ್ನಲ್ಲಿಯೇ ತನ್ನ ಅಂತ್ಯ ಸಂಸ್ಕಾರ ನಡೆಸಬೇಕು ಮತ್ತು ತನ್ನ ಮೊಮ್ಮಗನಿಂದ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಬೇಕೆಂದು ಕೇಳಿಕೊಂಡಿದ್ದಾರೆ.
ಕಾಶ್ಮಿರ ಸಿಂಗ್ ಅವರು ಕೇಂದ್ರ ಸರ್ಕಾರ ಕೃಷಿ ಕ್ಷೇತ್ರವನ್ನು ಉದಾರೀಕರಣಗೊಳಿಸಲು ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಜಾರಿಗೆ ತಂದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ಕಳೆದ ನವೆಂಬರ್ 28ರಿಂದ ಈ ಸ್ಥಳದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಇಂದು ಬೆಳಗ್ಗೆ ಶೌಚಾಲಯದಲ್ಲಿ ನೇಣಿಗೆ ಶರಣಾಗಿದ್ದಾರೆ.
ಕಾಶ್ಮಿರ ಸಿಂಗ್ ಅವರು ಪ್ರತಿಭಟನಾ ಸ್ಥಳದಲ್ಲಿ ಮೊಬೈಲ್ ಶೌಚಾಲಯವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಗುರುಮುಖಿಯಲ್ಲಿ ಡೆತ್ ನೋಟ್ ಬರೆಯಲಾಗಿದೆ. “ರೈತರ ಸಮಿತಿ ಶವಪರೀಕ್ಷೆ ನಡೆಸದಿರಲು ನಿರ್ಧರಿಸಿದೆ. ಮೊದಲಿಗೆ, ಇದು ಆತ್ಮಹತ್ಯೆ ಪ್ರಕರಣವೆಂದು ತೋರುತ್ತದೆ ಮತ್ತು ಯಾರೂ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿಲ್ಲ. ಡೆತ್ ನೋಟ್ ಅನ್ನು ಪರಿಶೀಲಿಸಲಾಗುವುದು” ಎಂದು ಪೊಲೀಸ್ ಸರ್ಕಲ್ ಅಧಿಕಾರಿ ಅನ್ಶು ಜೈನ್ ಅವರು ಹೇಳಿದ್ದಾರೆ.
ಏತನ್ಮಧ್ಯೆ, ಕಾಶ್ಮಿರ ಸಿಂಗ್ ತನ್ನ ಡೆತ್ ನೋಟ್ ನಲ್ಲಿ, ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸುತ್ತಿಲ್ಲ ಎಂದು ದೂಷಿಸಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ರಾಷ್ಟ್ರೀಯ ಮಾಧ್ಯಮ ಸಂಯೋಜಕ ಶಂಶೆರ್ ರಾಣಾ ಅವರು ಹೇಳಿದ್ದಾರೆ.
"ಮೃತ ರೈತ ತನ್ನ ಅಂತ್ಯಕ್ರಿಯೆಯನ್ನು ಯುಪಿ ಗೇಟ್ [ಪ್ರತಿಭಟನಾ ಸ್ಥಳದಲ್ಲಿ] ನಡೆಸಬೇಕೆಂದು ಉಲ್ಲೇಖಿಸಿದ್ದಾರೆ. ಆದಾಗ್ಯೂ, ಅವರ ಶವವನ್ನು ಅವರ ಊರಿಗೆ ಕಳುಹಿಸಿ ಅವರ ಕುಟುಂಬಕ್ಕೆ ಹಸ್ತಾಂತರಿಸುವ ಸಾಧ್ಯತೆಯಿದೆ” ಎಂದು ರಾಣಾ ತಿಳಿಸಿದ್ದಾರೆ.