ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ: ರೈತರನ್ನು ಭೇಟಿ ಮಾಡಿದ ಕೇಂದ್ರ ಸಚಿವರು, ಮಾತುಕತೆಯತ್ತ ಎಲ್ಲರ ಚಿತ್ತ
ಕೇಂದ್ರ ಸರ್ಕಾರ ಜಾರಿಗೊಳಸಿರುವ ಕೃಷಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರ 40ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಜತೆಗಿನ 7ನೇ ಸುತ್ತಿನ ಮಾತುಕತೆ ಆರಂಭವಾಗಿದೆ.
Published: 04th January 2021 04:12 PM | Last Updated: 04th January 2021 04:12 PM | A+A A-

ಸಭೆಯಲ್ಲಿ ಕೇಂದ್ರ ಸಚಿವರು
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಸಿರುವ ಕೃಷಿ ಕಾಯ್ದೆ ವಿರುದ್ಧ ರಾಷ್ಟ್ರ ರಾಜಧಾನಿಯ ಸಿಂಘು ಗಡಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಸೋಮವಾರ 40ನೇ ದಿನಕ್ಕೆ ಕಾಲಿಟ್ಟಿದ್ದು, ಸರ್ಕಾರದ ಜತೆಗಿನ 7ನೇ ಸುತ್ತಿನ ಮಾತುಕತೆ ಆರಂಭವಾಗಿದೆ.
ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ರೈಲ್ವೆ, ವಾಣಿಜ್ಯ ಮತ್ತು ಆಹಾರ ಸಚಿವ ಪಿಯೂಷ್ ಗೋಯಲ್ ಮತ್ತು ಪಂಜಾಬ್ ಸಂಸದರಾಗಿರುವ ವಾಣಿಜ್ಯ ಖಾತೆ ರಾಜ್ಯ ಸಚಿವ ಸೋಮ್ ಪ್ರಕಾಶ್ ಅವರು ದೆಹಲಿಯ ವಿಜ್ಞಾನ ಭವನದಲ್ಲಿ 40 ರೈತ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ.
ಪ್ರತಿಭಟನೆ ವೇಳೆ ಪ್ರಾಣ ಕಳೆದುಕೊಂಡ ರೈತರಿಗೆ ಗೌರವ ಸಲ್ಲಿಸುವ ಮೂಲಕ ಮಾತುಕತೆ ಆರಂಭವಾಗಿದೆ.
ಡಿಸೆಂಬರ್ 30ರಂದು, ಸರ್ಕಾರ ಮತ್ತು ರೈತ ಸಂಘಗಳ ನಡುವೆ ನಡೆದ ಆರನೇ ಸುತ್ತಿನ ಮಾತುಕತೆ ವಿಫಲವಾಗಿತ್ತು. ಆದರೆ ಎರಡು ಸಾಮಾನ್ಯ ಬೇಡಿಕೆಗಳಾದ ಕೃಷಿ ತ್ಯಾಜ್ಯ ಸುಡುವುದು ಅಪರಾಧವಲ್ಲ ಮತ್ತು ವಿದ್ಯುತ್ ಸಬ್ಸಿಡಿಗಳ ಮುಂದುವರಿಕೆ ಸರ್ಕಾರ ಸ್ಪಂದಿಸಿತ್ತು.
ಕಳೆದ ಒಂದೆರಡು ದಿನಗಳಿಂದ ದೆಹಲಿಯಲ್ಲಿ ವಿಪರೀತ ಚಳಿ ಮತ್ತು ಮಳೆಯಿದ್ದಾಗ್ಯೂ, ಬೇಡಿಕೆಗಳನ್ನು ಈಡೇರಿಸುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ರೈತರು ಹೇಳಿದ್ದಾರೆ.
ಏತನ್ಮಧ್ಯೆ, ವಿವಿಧ ವರ್ಗದ ಜನರು, ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸಿಂಘು ಗಡಿಯಲ್ಲಿ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.