ಕೃಷಿ ಕಾಯ್ದೆ ವಿರೋಧಿಸಿ ಕಿಸಾನ್ ಪರೇಡ್ ಗೆ ಸಜ್ಜು: ಮಹಿಳಾ ರೈತರಿಗೆ ಟ್ರಾಕ್ಟರ್ ಚಾಲನಾ ತರಬೇತಿ!

ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸದ ಕಾರಣ ರೈತರು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಸಜ್ಜುಗೊಳ್ಳುತ್ತಿದ್ದಾರೆ.

Published: 05th January 2021 07:46 PM  |   Last Updated: 05th January 2021 07:46 PM   |  A+A-


women1

ಟ್ರಾಕ್ಟರ್ ಚಾಲನಾ ತರಬೇತಿx

UNI

ಜಿಂದ್: ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸಬೇಕೆಂಬ ತಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರ ಅಂಗೀಕರಿಸದ ಕಾರಣ ರೈತರು ತಮ್ಮ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸಲು ಸಜ್ಜುಗೊಳ್ಳುತ್ತಿದ್ದಾರೆ.

ಈ ಭಾಗವಾಗಿ ಗಣರಾಜ್ಯೋತ್ಸವದಂದು ರಾಷ್ಟ್ರ ರಾಜಧಾನಿಯಲ್ಲಿ 'ಕಿಸಾನ್ ಪೆರೇಡ್' ಹೆಸರಿನಲ್ಲಿ ಬೃಹತ್ ಟ್ರಾಕ್ಟರ್ ಮೆರವಣಿಗೆ ನಡೆಸಲು ನಿರ್ಧರಿಸಿದ್ದಾರೆ. ಈ ಪೆರೆಡ್ ನಲ್ಲಿ ಮಹಿಳೆಯರು ಸಹ ಭಾಗವಹಿಸಲಿದ್ದಾರೆ. ಇದಕ್ಕಾಗಿ ಅವರು ಟ್ರ್ಯಾಕ್ಟರ್ ಡ್ರೈವಿಂಗ್ ಕಲಿಯುತ್ತಿದ್ದಾರೆ.

ಹರಿಯಾಣದ ಜಿಂದ್‌ನಲ್ಲಿರುವ ಭಾರತೀಯ ಕಿಸಾನ್ ಯೂನಿಯನ್ ಆಶ್ರಯದಲ್ಲಿ 500ಕ್ಕೂ ಹೆಚ್ಚು ಮಹಿಳೆಯರು ಟ್ರಾಕ್ಟರ್ ಚಾಲನೆ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಇವರೆಲ್ಲ ಬುಧವಾರ ಕುಂಡ್ಲಿ-ಮನೇಸರ್-ಪಾಲ್ವಾಲ್ ಎಕ್ಸ್‌ಪ್ರೆಸ್ ವೇನಲ್ಲಿ ಮೆರವಣಿಗೆ ನಡೆಸಲಿದ್ದಾರೆ.

ಜನವರಿ 26 ರಂದು ದೆಹಲಿಯಲ್ಲಿ ನಡೆಯುವ ಕಿಸಾನ್ ಪೆರೇಡ್ ನಲ್ಲಿ ಇವರೆಲ್ಲರೂ ಟ್ರಾಕ್ಟರ್ ಗಳನ್ನು ಓಡಿಸಲಿದ್ದಾರೆ ಎಂದು ಕಿಸಾನ್ ಯೂನಿಯನ್ ಜಿಲ್ಲಾ ಮುಖಂಡರು ತಿಳಿಸಿದ್ದಾರೆ. 

ಸೋಷಿಯಲ್ ಮೀಡಿಯಾದಲ್ಲಿ ಮಹಿಳೆಯರು ಟ್ರಾಕ್ಟರ್ ಚಾಲನೆ ಮಾಡುವ ಫೋಟೋಗಳು ಹಾಗೂ ವಿಡಿಯೋಗಳು ವೈರಲ್ ಆಗಿವೆ. ದೆಹಲಿಯ ಹೊರ ವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಹಲವು ಮಹಿಳೆಯರು ಭಾಗಿಯಾಗಿದ್ದಾರೆ. ಯಾವುದೇ ಪರಿಸ್ಥಿತಿ ಎದುರಾದರೂ ಪ್ರತಿಭಟನೆಯಿಂದ ಮಾತ್ರ ಹಿಂದೆ ಸರಿಯುವುದಿಲ್ಲ ಎಂದು ಹೇಳಿರುವ ಮಹಿಳಾ ರೈತರು, ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವವರೆಗೂ ದೆಹಲಿ ಗಡಿಯಿಂದ ತೆರಳುವುದಿಲ್ಲ ಎಂದು ಹೇಳಿದ್ದಾರೆ.

ಅತ್ತ ಕೃಷಿ ಕಾನೂನುಗಳ ಕುರಿತು ಕೇಂದ್ರ ಹಾಗೂ ರೈತ ಸಂಘಗಳ ಪ್ರತಿನಿಧಿಗಳ ನಡುವೆ ಸೋಮವಾರ ನಡೆದ ಏಳನೇ ಸುತ್ತಿನ ಮಾತುಕತೆ ವಿಫಲವಾಗಿದೆ. ಕಾನೂನುಗಳನ್ನು ರದ್ದುಗೊಳಿಸಲು ಸಾಧ್ಯವಿಲ್ಲ, ಆದರೆ ತಿದ್ದುಪಡಿ ಮಾಡಲಾಗುವುದು ಎಂದು ಕೇಂದ್ರ ಸಚಿವರು ವಿವರವಾಗಿ ಹೇಳಿದರು. ಆದರೆ ರೈತ ಮುಖಂಡರು ಇದಕ್ಕೆ ಒಪ್ಪಲಿಲ್ಲ. ಕಾಯ್ದೆಗಳನ್ನು ರದ್ದುಗೊಳಿಸಬೇಕು ಎಂದು ಬಿಗಿಪಟ್ಟುಹಿಡಿದರು. ಮಾತುಕತೆಯಲ್ಲಿ ಯಾವುದೇ ಪ್ರಗತಿ ಸಾಧಿಸದ ಕಾರಣ ಮುಂದಿನ ಮಾತುಕತೆಯನ್ನು ಜನವರಿ 8ಕ್ಕೆ ಮುಂದೂಡಲಾಯಿತು.