ಜನವರಿ 29ರಿಂದ ಬಜೆಟ್ ಅಧಿವೇಶನ, ಪ್ರಮುಖ ಮಸೂದೆಗಳು ಮೊದಲ ಹಂತದಲ್ಲಿ ಮಂಡನೆ: ಪ್ರಹ್ಲಾದ್ ಜೋಷಿ
ಯಾವುದೇ ಅಡೆತಡೆಗಳಿಲ್ಲದೆ ಬಜೆಟ್ ಅಧಿವೇಶನವನ್ನು ಸಂಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
Published: 06th January 2021 08:09 AM | Last Updated: 06th January 2021 11:32 AM | A+A A-

ಪ್ರಹ್ಲಾದ್ ಜೋಷಿ
ನವದೆಹಲಿ: ಯಾವುದೇ ಅಡೆತಡೆಗಳಿಲ್ಲದೆ ಬಜೆಟ್ ಅಧಿವೇಶನವನ್ನು ಸಂಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಅವರು ನಿನ್ನೆ ಬಜೆಟ್ ಅಧಿವೇಶನ ದಿನಾಂಕವನ್ನು ಘೋಷಿಸಿದ ಬಳಿಕ ಎಎನ್ ಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿ, ಬಜೆಟ್ ಅಧಿವೇಶನದ ಮೊದಲ ಹಂತ ಜನವರಿ 29 ರಿಂದ ಆರಂಭವಾಗಲಿದ್ದು ಫೆಬ್ರವರಿ 15ರಂದು ಮುಕ್ತಾಯವಾಗಲಿದೆ ಎಂದು ತಿಳಿಸಿದರು.
ಬಜೆಟ್ ಅಧಿವೇಶನದ ಮೊದಲಾರ್ಧ ಜನವರಿ 29ರಂದು ರಾಷ್ಟ್ರಪತಿಗಳು ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆಗಳು ನಡೆಯಲಿದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಾಗುತ್ತದೆ.
ಯಾವುದಾದರೂ ತುರ್ತು ಮಸೂದೆ ಅಥವಾ ವಿದೇಯಕವನ್ನು ತರಬೇಕೆಂದಿದ್ದರೆ ಮೊದಲ ಹಂತದಲ್ಲಿ ಅದಕ್ಕೆ ಆದ್ಯತೆ ನೀಡುತ್ತೇವೆ. ಅಗತ್ಯವಿರುವ ಮಸೂದೆಗಳನ್ನು ಕೈಗೆತ್ತಿಕೊಳ್ಳಲಾಗುವುದು. ಪ್ರಶ್ನೋತ್ತರ ಮತ್ತು ಶೂನ್ಯ ಅವಧಿಯೂ ಇರುತ್ತದೆ, ಉಳಿದದ್ದು ಸ್ಪೀಕರ್ ಅವರ ವಿವೇಚನೆಗೆ ಬಿಟ್ಟಿದ್ದು ಎಂದು ವಿವರಿಸಿದರು.
ಸಂಸತ್ತಿನ ಬಜೆಟ್ ಅಧಿವೇಶನ ಇದೇ ತಿಂಗಳ 29ರಿಂದ ಆರಂಭವಾಗಲಿದ್ದು, ಫೆಬ್ರವರಿ ಒಂದರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಬಜೆಟ್ ಅಧಿವೇಶನದ ಮುಂದುವರೆದ 2ನೇ ಭಾಗ ಮಾರ್ಚ್ 8ರಿಂದ ಏಪ್ರಿಲ್ 8ರ ತನಕ ನಡೆಯಲಿದೆ. ಕೋವಿಡ್-19 ಶಿಷ್ಟಾಚಾರದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳ ಕಾರ್ಯಕಲಾಪಗಳು ಪ್ರತಿನಿತ್ಯ ನಾಲ್ಕು ಗಂಟೆಗಳ ಅವಧಿಗೆ ಸೀಮಿತಗೊಳಿಸಲಾಗಿದೆ.