ಉತ್ತರ ಪ್ರದೇಶದ ಸ್ಮಶಾನದಲ್ಲಿ ಚಾವಣಿ ಕುಸಿತ ಪ್ರಕರಣ: ಲಂಚ, ಅಗ್ಗದ ಗುಣಮಟ್ಟದ ವಸ್ತುಗಳ ಬಳಕೆ ಒಪ್ಪಿಕೊಂಡ ಕಂಟ್ರ್ಯಾಕ್ಟರ್!
ಉತ್ತರ ಪ್ರದೇಶದ ಮುರಾದ್ ನಗರ್ ಸ್ಮಶಾನದಲ್ಲಿ ಜ.03 ರಂದು ಸಂಭವಿಸಿದ್ದ ಚಾವಣಿ ಕುಸಿತ ಪ್ರಕರಣದಲ್ಲಿ ಮುಖ್ಯ ಆರೋಪಿಯು ಚಾವಣಿ ನಿರ್ಮಾಣದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾನೆ.
Published: 07th January 2021 12:43 AM | Last Updated: 07th January 2021 01:10 PM | A+A A-

ಮೇಲ್ಚಾವಣಿ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಾಚರಣೆ
ಲಖನೌ: ಉತ್ತರ ಪ್ರದೇಶದ ಮುರಾದ್ ನಗರ್ ಸ್ಮಶಾನದಲ್ಲಿ ಜ.03 ರಂದು ಸಂಭವಿಸಿದ್ದ ಚಾವಣಿ ಕುಸಿತ ಪ್ರಕರಣದಲ್ಲಿ ಮುಖ್ಯ ಆರೋಪಿಯು ಚಾವಣಿ ನಿರ್ಮಾಣದಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿದ್ದಾನೆ.
ಸ್ಮಶಾನದಲ್ಲಿ ಚಾವಣಿಯನ್ನು ಭ್ರಷ್ಟಾಚಾರದ ಬುನಾದಿಯಲ್ಲೇ ನಿರ್ಮಿಸಲಾಗಿದ್ದನ್ನು ಗುತ್ತಿಗೆದಾರ ಅಜಯ್ ತ್ಯಾಗಿ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾನೆ.
ಲಂಚ ನೀಡಿರುವುದು ಹಾಗೂ ಅಗ್ಗದ ವಸ್ತುಗಳನ್ನು ನಿರ್ಮಾಣ ಕಾಮಗಾರಿಗೆ ಬಳಕೆ ಮಾಡಿರುವುದನ್ನು ವಿಚಾರಣೆ ವೇಳೆ ತ್ಯಾಗಿ ಒಪ್ಪಿಕೊಂಡಿದ್ದಾನೆ. ಅಗ್ಗದ ವಸ್ತುಗಳನ್ನು ನಿರ್ಮಾಣದ ಕಾಮಗಾರಿಗೆ ಬಳಸಿದ್ದರ ಪರಿಣಾಮವಾಗಿ ಗುಣಮಟ್ಟ ಕಳೆದುಕೊಂಡಿದ್ದ ಚಾವಣಿ ಕುಸಿದು 25 ಮಂದಿಯ ಸಾವಿಗೆ ಕಾರಣವಾಗಿದೆ.
ಅಷ್ಟೇ ಅಲ್ಲದೇ ಈ ಭ್ರಷ್ಟಾಚಾರಕ್ಕೆ ಸಹಕರಿಸಿದ್ದ ಮುರಾದ್ ನಗರ್ ನ ಪುರಸಭೆ ಮಂಡಳಿಯ ಭ್ರಷ್ಟಾಚಾರವನ್ನೂ ಸಹ ತ್ಯಾಗಿ ಪೊಲೀಸರೆದುರು ಬಹಿರಂಗಪಡಿಸಿದ್ದಾರೆ.
ಚಾವಣಿ ಕುಸಿತದ ಪ್ರಕರಣದಲ್ಲಿ ಜ.04 ರಂದು ಬಂಧನಕ್ಕೊಳಗಾಗಿದ್ದ ತ್ಯಾಗಿಯನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿ.ಎಂ ಯೋಗಿ ಆದಿತ್ಯನಾಥ್ ವಿಶೇಷ ತನಿಖಾ ತಂಡ (ಎಸ್ಐಟಿ) ತನಿಖೆಗೆ ಆದೇಶಿಸಿದ್ದರು.
ತ್ಯಾಗಿಯಷ್ಟೇ ಅಲ್ಲದೇ ನಿರ್ಮಾಣ ಹಾಗೂ ಇನ್ನಿತರ ಕಾಮಗಾರಿಗಳಲ್ಲಿ ಭಾಗಿಯಾಗಿದ್ದ ಸಂಜಯ್ ಗರ್ಗ್ ನ್ನೂ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ 5 ಮಂದಿಯನ್ನು ಬಂಧಿಸಲಾಗಿದೆ.
ವ್ಯಕ್ತಿಯೋರ್ವರ ಅಂತ್ಯಕ್ರಿಯೆ ನಡೆಯುತ್ತಿರುವಾಗಲೇ ಚಾವಣಿ ಕುಸಿದಿದ್ದರ ಪರಿಣಾಮವಾಗಿ 20 ಕ್ಕೂ ಹೆಚ್ಚು ಮಂದಿ ಅವಶೇಷಗಳ ಅಡಿಯಲ್ಲಿ ಸಿಲುಕಿದ್ದರು. 25 ಮಂದಿ ಸಾವನ್ನಪ್ಪಿದ್ದರು.
ನಿರ್ಮಾಣ ಕಾಮಗಾರಿಯಲ್ಲಿ ನಡೆದಿದ್ದ ಭ್ರಷ್ಟಾಚಾರವನ್ನು ಬಹಿರಂಗಪಡಿಸಿರುವ ತ್ಯಾಗಿ, ಶೆಡ್ ನಿರ್ಮಾಣ ಹಾಗೂ ಸ್ಮಶಾನದಲ್ಲಿನ ಕಾಮಗಾರಿಗಳನ್ನು ನಡೆಸುವ ಗುತ್ತಿಗೆ ಪಡೆಯುವುದಕ್ಕಾಗಿ ಪುರಸಭೆ ಮಂಡಳಿ ಅಧಿಕಾರಿಗಳಿಗೆ 16 ಲಕ್ಷ ರೂಪಾಯಿ ಲಂಚ ನೀಡಿದ್ದನ್ನು ಬಹಿರಂಗಪಡಿಸಿದ್ದಾನೆ.