ವರವರ ರಾವ್ ವಯಸ್ಸು, ಆರೋಗ್ಯ ಪರಿಗಣಿಸಿ: ಎನ್ಐಎ, ಮಹಾ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್
ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಹಾಗೂ ಖ್ಯಾತ ಕವಿ ವರವರ ರಾವ್ ಅವರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸುವಾಗ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿಬೇಕು...
Published: 13th January 2021 04:53 PM | Last Updated: 13th January 2021 04:53 PM | A+A A-

ತೆಲುಗಿನ ಕ್ರಾಂತಿಕಾರಿ ಕವಿ ವರವರ ರಾವ್
ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಸಾಮಾಜಿಕ ಹೋರಾಟಗಾರ ಹಾಗೂ ಖ್ಯಾತ ಕವಿ ವರವರ ರಾವ್ ಅವರ ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸುವಾಗ ಅವರ ವಯಸ್ಸು ಮತ್ತು ಆರೋಗ್ಯ ಸ್ಥಿತಿಯನ್ನು ಪರಿಗಣಿಸಿಬೇಕು ಎಂದು ಎನ್ಐಎ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಅನಾರೋಗ್ಯ ಹಿನ್ನೆಲೆಯಲ್ಲಿ ಜಾಮೀನು ಕೋರಿ ವರವರ ರಾವ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್ಎಸ್ ಶಿಂದೆ ಮತ್ತು ಮನೀಶ್ ಪಿಟಲೆ ಅವರು, ಅರ್ಜಿದಾರರಿಗೆ(ರಾವ್) 88 ವರ್ಷ. ಅವರ ವಯಸ್ಸು ಮತ್ತು ಆರೋಗ್ಯ ಪರಿಸ್ಥಿತಿಗಳನ್ನು ಗಮನದಲ್ಲಿರಿಸಿಕೊಳ್ಳಿ. ಜಾಮೀನು ಅರ್ಜಿಗೆ ಆಕ್ಷೇಪ ಸಲ್ಲಿಸುವಾಗ ಅದನ್ನು ಪರಿಗಣಿಸಿ. ನಾವೆಲ್ಲರೂ ಮನುಷ್ಯರು" ಎಂದು ಹೇಳಿ, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ವರವರ ರಾವ್ ಅವರು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೈಕೋರ್ಟ್ ಮಧ್ಯ ಪ್ರವೇಶಿಸಿದ ಬಳಿಕ ಮಹಾರಾಷ್ಟ್ರ ಸರ್ಕಾರ ಜೈಲಿನಲ್ಲಿದ್ದ 88 ವರ್ಷದ ವರವರ ರಾವ್ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸಿದ್ದು, ಕಳೆದ ಒಂದು ತಿಂಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ.
ವರವರ ರಾವ್ ಅವರ ಪತ್ನಿ ಹೇಮಲತಾ ಅವರು, ತಮ್ಮ ಪತಿಯ ಆರೋಗ್ಯ ಮತ್ತಷ್ಟು ಗಂಭೀರವಾಗಿದ್ದು, ಅವರನ್ನು ಕೂಡಲೇ ನಾನಾವತಿ ಆಸ್ಪತ್ರೆಗೆ ದಾಖಲಿಸಬೇಕು ಎಂದು ಕೋರಿ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್ ವರವರ ರಾವ್ ಅವರನ್ನು ಆಸ್ಪತ್ರೆಗೆ ದಾಖಲಿಸುವಂತೆ ಆದೇಶಿಸಿತ್ತು.