ಹಿಂದೂಗಳ ಭಾವನೆಗಳಿಗೆ ಧಕ್ಕೆ: ಸೈಫ್ ಅಲಿಖಾನ್ ನಟಿಸಿರುವ 'ತಾಂಡವ' ಧಾರಾವಾಹಿಯ ನಿಷೇಧಕ್ಕೆ ಬಿಜೆಪಿ ಆಗ್ರಹ
ಹಿಂದೂಗಳ ಭಾವನೆಗಳಿಗೆ ಧಕ್ಕೆ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗೊಂಡಿರುವ ಸೈಫ್ ಅಲಿಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಂಡವ ಧಾರಾವಾಹಿಯನ್ನು ನಿಷೇಧಿಸುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿರುವುದಾಗಿ ಬಿಜೆಪಿ ಸಂಸದ ಮನೋಜ್ ಕೋಟಕ್ ಹೇಳಿದ್ದಾರೆ
Published: 17th January 2021 08:45 PM | Last Updated: 17th January 2021 08:45 PM | A+A A-

ಸೈಫ್ ಅಲಿಖಾನ್
ಮುಂಬೈ: ಹಿಂದೂಗಳ ಭಾವನೆಗಳಿಗೆ ಧಕ್ಕೆ ಹಿನ್ನೆಲೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗೊಂಡಿರುವ ಸೈಫ್ ಅಲಿಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ ತಾಂಡವ ಧಾರಾವಾಹಿಯನ್ನು ನಿಷೇಧಿಸುವಂತೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿರುವುದಾಗಿ ಬಿಜೆಪಿ ಸಂಸದ ಮನೋಜ್ ಕೋಟಕ್ ಹೇಳಿದ್ದಾರೆ.
ಸೈಫ್ ಅಲಿಖಾನ್, ಡಿಂಪಲ್ ಕಪಾಡಿಯಾ, ಸುನೀಲ್ ಗ್ರೋವರ್, ತಿಗ್ಮಾಂಶು ಧುಲಿಯಾ, ಕುಮುದ್ ಮಿಶ್ರಾ, ಮೊಹಮ್ಮದ್ ಝೀಶಾನ್ ಅಯ್ಯುಬ್ ಮತ್ತಿತರರು ಅಭಿನಯಿಸಿರುವ ಈ ಧಾರಾವಾಹಿ ಶುಕ್ರವಾರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಗೊಂಡಿದೆ.
ಗೌರವ್ ಸೋಲಂಕಿ ಕಥೆ ಬರೆದಿರುವ ಈ ಧಾರವಾಹಿಯನ್ನು ಚಿತ್ರ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ನಿರ್ದೇಶಿಸಿದ್ದು, ಹಿಮಾಂಶು ಕಿಶಾನ್ ಅವರೊಂದಿಗೆ ನಿರ್ಮಾಣ ಮಾಡಿದ್ದಾರೆ.
ಅಮೆಜಾನ್ ಪ್ರೈಮ್ ನಂತಹ ಒಟಿಟಿ ವೇದಿಕೆಗಳಲ್ಲಿ ಆಗಾಗ್ಗೆ ಹಿಂದೂ ಭಾವನೆಗಳಿಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಲೇ ಇದೆ. ತಾಂಡವ ವೆಬ್ ಧಾರಾವಾಹಿಯಲ್ಲಿ ಹಿಂದೂ ದೇವರುಗಳ ಅವಹೇಳನ ಬಗ್ಗೆ ವಿವಿಧ ಸಂಘಟನೆಗಳಿಂದ ದೂರು ಸಲ್ಲಿಸಲಾಗಿದೆ ಎಂದು ಕೋಟಕ್ ಹೇಳಿದ್ದಾರೆ.
ಅಲ್ಲದೇ, ಕೂಡಲೇ ಈ ಧಾರಾವಾಹಿಯನ್ನು ನಿಷೇಧಿಸಬೇಕೆಂದು ಪ್ರಕಾಶ್ ಜಾವಡೇಕರ್ ಅವರಿಗೆ ಪತ್ರ ಬರೆದಿದ್ದೇವೆ. ಭಾವನೆಗಳಿಗೆ ಧಕ್ಕೆ ತಂದಿರುವ ನಟರು, ನಿರ್ಮಾಪಕರು ಮತ್ತು ನಿರ್ದೇಶಕರು ಕ್ಷಮೆಯಾಚಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಈ ವಿಚಾರದಲ್ಲಿ ನಾವು ಜವಾಬ್ದಾರರಲ್ಲ ಎಂದು ಅಮೆಜಾನ್ ಪ್ರೈಮ್ ವಿಡಿಯೋ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಳಿದ್ದಾರೆ.