
ಕೋವಿಡ್ ಲಸಿಕಾ ಕೇಂದ್ರ
ನವದೆಹಲಿ: ದೇಶಾದ್ಯಂತ ನಡೆದ ಕೋವಿಡ್-19 ಲಸಿಕೆ ವಿತರಣೆಯ ಮೊದಲ ದಿನ ಭಾರತೀಯ ಸೇನೆಯ ಸುಮಾರು 3 ಸಾವಿರ ಆರೋಗ್ಯ ಸಿಬ್ಬಂದಿ ಲಸಿಕೆ ಪಡೆದುಕೊಂಡಿದ್ದಾರೆ.
ಲಡಾಖ್ ಮತ್ತು ಕಾಶ್ಮೀರದಲ್ಲಿನ ಕೆಲವು ಪ್ರದೇಶಗಳು ಸೇರಿದಂತೆ ದೇಶಾದ್ಯಂತ ನಿಯೋಜಿತರಾಗಿರುವ ಭಾರತೀಯ ಸೇನೆಯ ಸುಮಾರು 3 ಸಾವಿರದ 129 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ನೌಕಪಡೆಯ ಸೈನಿಕರಿಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ನೌಕಪಡೆ ಮುಖ್ಯಸ್ಥ ಅಡ್ಮಿರಲ್ ಕರಮ್ ಬಿರ್ ಸಿಂಗ್ ಸಮ್ಮುಖದಲ್ಲಿ ಉದ್ಘಾಟಿಸಲಾಯಿತು. ಭಾರತೀಯ ನೌಕಪಡೆಯ ಸುಮಾರು 200 ಆರೋಗ್ಯ ಕಾರ್ಯಕರ್ತರು ಶನಿವಾರ ಲಸಿಕೆ ಪಡೆದಿದ್ದಾಗಿ ನೌಕಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ, ದಕ್ಷಿಣ, ಪಾಶ್ಚಿಮಾತ್ಯ ನೌಕ ಕಮಾಂಡ್ ಪ್ರದೇಶಗಳಲ್ಲಿ ಭಾರತೀಯ ನೌಕಪಡೆ ಲಸಿಕೆ ವಿತರಣೆ ಕಾರ್ಯಕ್ರಮ ನಡೆಸಿದೆ. ವಾಯುಪಡೆಯಲ್ಲಿನ ಆರೋಗ್ಯ ಕಾರ್ಯಕರ್ತರಿಗೂ ಲಸಿಕೆ ನೀಡಲಾಗಿದೆ. ಆದರೆ, ಎಷ್ಟು ಮಂದಿ ಸೈನಿಕರಿಗೆ ಕೊರೋನಾ ಲಸಿಕೆ ನೀಡಲಾಯಿತು ಎಂಬುದರ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ.
ಮುಂದಿನ ಹಂತದಲ್ಲಿ ಲಸಿಕೆ ಅಭಿಯಾನ 300 ಮಿಲಿಯನ್ ಜನರಿಗೆ ತಲುಪಲಿದೆ. ಇದೊಂದು ದೊಡ್ಡ ಸಾಧನೆಯಾಗಲಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಸ್ವದೇಶಿ ನಿರ್ಮಿತ ಕೋವಿಡ್ -19 ಲಸಿಕೆ ತಯಾರಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ ವಿಜ್ಞಾನಿಗಳಿಗೆ ಇಡೀ ದೇಶ ಅಭಿನಂದನೆ ಸಲ್ಲಿಸುತ್ತಿದೆ ಎಂದು ಅವರು ಹೇಳಿದ್ದಾರೆ.