ಜ.26ರಂದು ರೈತರ ಟ್ರಾಕ್ಟರ್ ರ್ಯಾಲಿ ಬಗ್ಗೆ ಪೊಲೀಸರು ನಿರ್ಧರಿಸಲಿ: ಜ.20ಕ್ಕೆ ಸುಪ್ರೀಂ ಕೋರ್ಟ್ ವಿಚಾರಣೆ ಮುಂದೂಡಿಕೆ
ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರ ಟ್ರಾಕ್ಟರ್ ಮೆರವಣಿಗೆ ಬಗ್ಗೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತು. ಟ್ರಾಕ್ಟರ್ ನಲ್ಲಿ ರೈತರು ಮೆರವಣಿಗೆ ಮೂಲಕ ದೆಹಲಿ ಪ್ರವೇಶಿಸುವುದು ಕಾನೂನು, ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾಗಿದ್ದು ಅದನ್ನು ಪೊಲೀಸರು ನಿರ್ಧರಿಸಲಿ ಎಂದು ಹೇಳಿದೆ.
Published: 18th January 2021 12:23 PM | Last Updated: 18th January 2021 01:03 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರ ಟ್ರಾಕ್ಟರ್ ಮೆರವಣಿಗೆ ಬಗ್ಗೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸೋಮವಾರ ಕೈಗೆತ್ತಿಕೊಂಡಿತು. ಟ್ರಾಕ್ಟರ್ ನಲ್ಲಿ ರೈತರು ಮೆರವಣಿಗೆ ಮೂಲಕ ದೆಹಲಿ ಪ್ರವೇಶಿಸುವುದು ಕಾನೂನು, ಸುವ್ಯವಸ್ಥೆಗೆ ಸಂಬಂಧಪಟ್ಟ ವಿಷಯವಾಗಿದ್ದು ಅದನ್ನು ಪೊಲೀಸರು ನಿರ್ಧರಿಸಲಿ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಇಂದು ವಿಚಾರಣೆ ಕೈಗೆತ್ತಿಕೊಂಡು, ನೀವು ಏನು ಮಾಡಬೇಕೆಂದು ನಾವು ಹೇಳುವುದಿಲ್ಲ, ದೆಹಲಿಯೊಳಗೆ ಯಾರನ್ನು ಬರಲು ಬಿಡಬೇಕು, ಬಿಡಬಾರದು ಎಂದು ತೀರ್ಮಾನಿಸುವ ಅಧಿಕಾರ ಪೊಲೀಸರಿಗೆ ಇರುವುದು ಎಂದು ಹೇಳಿ ಜನವರಿ 20ಕ್ಕೆ ವಿಚಾರಣೆಯನ್ನು ಮುಂದೂಡಿತು.
ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್, ರೈತರು ನಡೆಸಲು ಉದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿ ಅಕ್ರಮವಾಗಿದ್ದು ದೆಹಲಿಯೊಳಗೆ ಸುಮಾರು 5 ಸಾವಿರ ಮಂದಿ ಪ್ರವೇಶಿಸಬಹುದು. ಇದರಿಂದ ತೀವ್ರ ಸಂಚಾರ ದಟ್ಟಣೆಯುಂಟಾಗಿ ಸಾಮಾನ್ಯ ಜನರಿಗೆ ತೊಂದರೆಯಾಗಬಹುದು, ಕಾನೂನು, ಸುವ್ಯವಸ್ಥೆಗೆ ಧಕ್ಕೆಯುಂಟಾಗಬಹುದು ಎಂದು ವಾದಿಸಿದರು.
ಗಣರಾಜ್ಯೋತ್ಸವ ದಿನ ರೈತರು ನಡೆಸಲುದ್ದೇಶಿಸಿರುವ ಟ್ರಾಕ್ಟರ್ ರ್ಯಾಲಿಗೆ ತಡೆ ನೀಡುವಂತೆ ದೆಹಲಿ ಪೊಲೀಸರು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಇತ್ತ ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ಪ್ರತಿಭಟನೆ ನಿರತ ರೈತರು ಗಣರಾಜ್ಯೋತ್ಸವ ದಿನ ಉದ್ದೇಶಿತ ಟ್ರಾಕ್ಟರ್ ರ್ಯಾಲಿಯನ್ನು ನಡೆಸಲು ತೀರ್ಮಾನಿಸಿದ್ದಾರೆ.