ಗಣರಾಜ್ಯೋತ್ಸವ ದಿನ ರೈತರ ಟ್ರಾಕ್ಟರ್ ಮೆರವಣಿಗೆ: ಸುಪ್ರೀಂ ಕೋರ್ಟ್ ನಲ್ಲಿ ಇಂದು ಕೇಂದ್ರದ ಅರ್ಜಿ ವಿಚಾರಣೆ
ಇದೇ ತಿಂಗಳ 26ರಂದು ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರು ಹಮ್ಮಿಕೊಳ್ಳಲು ಉದ್ದೇಶಿಸಿರುವ ಟ್ರಾಕ್ಟರ್ ಮೆರವಣಿಗೆ, ಪ್ರತಿಭಟನೆಗೆ ತಡೆಯಾಜ್ಞೆ ನೀಡಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.
Published: 18th January 2021 10:20 AM | Last Updated: 18th January 2021 01:01 PM | A+A A-

ನಿನ್ನೆ ದೆಹಲಿಯ ಗಾಝಿಪುರ್ ಗಡಿಯಲ್ಲಿ ಟ್ರಾಕ್ಟರ್ ನಲ್ಲಿ ಮೆರವಣಿಗೆ ಸಾಗಿದ ರೈತರು
ನವದೆಹಲಿ: ಇದೇ ತಿಂಗಳ 26ರಂದು ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರು ಹಮ್ಮಿಕೊಳ್ಳಲು ಉದ್ದೇಶಿಸಿರುವ ಟ್ರಾಕ್ಟರ್ ಮೆರವಣಿಗೆ, ಪ್ರತಿಭಟನೆಗೆ ತಡೆಯಾಜ್ಞೆ ನೀಡಬೇಕೆಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ವಿಚಾರಣೆ ಸೋಮವಾರ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದೆ.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ನೇತೃತ್ವದ ನ್ಯಾಯಪೀಠ ಇಂದು ನಾಲ್ವರ ಸದಸ್ಯರ ಸಮಿತಿಯಿಂದ ಹೊರಬಂದಿರುವ ಭಾರತೀಯ ಕಿಸಾನ್ ಸಂಘಟನೆಯ ರಾಷ್ಟ್ರೀಯ ಅಧ್ಯಕ್ಷ ಭೂಪೀಂದರ್ ಸಿಂಗ್ ಮನ್ನ್ ಅವರನ್ನು ಮತ್ತೆ ತಂಡಕ್ಕೆ ಸೇರಿಸಿಕೊಳ್ಳುವ ಬಗ್ಗೆ ಕೂಡ ತೀರ್ಪು ನೀಡಲಿದೆ. ಸಮಿತಿಯು ಇದೇ 21ರಿಂದ ತನ್ನ ಕೆಲಸವನ್ನು ಆರಂಭಿಸಲಿದೆ.
ಸುಪ್ರೀಂ ಕೋರ್ಟ್ ರಚಿಸಿರುವ ತಂಡ ನೂತನ ಕೃಷಿ ಕಾಯ್ದೆ ಬಗ್ಗೆ ತನ್ನ ಮೊದಲ ಸಭೆಯನ್ನು ನಾಳೆ ಹಮ್ಮಿಕೊಳ್ಳಲಿದ್ದು,ನಾಳೆಯೇ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ಮಧ್ಯೆ 10ನೇ ಸುತ್ತಿನ ಮಾತುಕತೆ ಕೂಡ ನಡೆಯಲಿದೆ.
ನಾಳೆ ಪುಸ ಕ್ಯಾಂಪಸ್ ನಲ್ಲಿ ಸಭೆ ಸೇರಲಿದ್ದೇವೆ. ಸುಪ್ರೀಂ ಕೋರ್ಟ್ ರಚಿಸಿರುವ ಸದಸ್ಯರ ತಂಡ ಮುಂದಿನ ಕ್ರಮಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಮಹಾರಾಷ್ಟ್ರದ ಶೆಟ್ಕರಿ ಸಂಘಟನೆಯ ಅಧ್ಯಕ್ಷ ಅನಿಲ್ ಘನ್ವಾಟ್ ತಿಳಿಸಿದ್ದಾರೆ. ಸಮಿತಿಯಿಂದ ಒಬ್ಬ ಸದಸ್ಯರು ಹೊರನಡೆದಿದ್ದಾರೆ. ಸುಪ್ರೀಂ ಕೋರ್ಟ್ ಹೊಸ ಸದಸ್ಯರನ್ನು ನೇಮಕ ಮಾಡದಿದ್ದರೆ ಈಗಿರುವ ಮೂವರು ಸದಸ್ಯರು ಮುಂದುವರಿಯಲಿದ್ದಾರೆ ಎಂದರು.