
ಅಮಿತ್ ಶಾ
ನವದೆಹಲಿ: ದೆಹಲಿ ಪೊಲೀಸರಿಗೆ 2020 ಸವಾಲುಗಳ ವರ್ಷವಾಗಿತ್ತು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ಹೇಳಿದ್ದಾರೆ.
ದೆಹಲಿಯ ಕೊರೋನಾ ಯೋಧರಾದ ಪೊಲೀಸರ ಸನ್ಮಾನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ, ಉತ್ತರ ದೆಹಲಿಯ ಗಲಭೆ, ಲಾಕ್ಡೌನ್, ಬಡ ಮತ್ತು ವಲಸೆ ಕಾರ್ಮಿಕರ ರವಾನೆ, ಅನ್ಲಾಕ್ ಪ್ರಕ್ರಿಯೆಯ ಜಾರಿಯಲ್ಲಿ ದೆಹಲಿ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.
ದೆಹಲಿಯ ಹೊರವಲಯದಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯ ಪರಿಸ್ಥಿತಿಯನ್ನು ದೆಹಲಿ ಪೊಲೀಸರು ವಿವೇಕಯುತವಾಗಿ ನಿಭಾಯಿಸುತ್ತಿದ್ದಾರೆ ಮತ್ತು ಇದುವರೆಗೆ ಶಾಂತಿಯನ್ನು ಕಾಪಾಡಿದ್ದಾರೆ ಎಂದು ಹೇಳಿದರು.
ಅಭಿವೃದ್ಧಿ ಮತ್ತು ಬೆಳವಣಿಗೆಗೆ ಸಮರ್ಥ ಪೊಲೀಸ್ ವ್ಯವಸ್ಥೆ ಅತ್ಯಂತ ಅಗತ್ಯ ಎಂದ ಅವರು, ದೆಹಲಿಯಲ್ಲಿರುವ ರಾಷ್ಟ್ರಪತಿ, ಪ್ರಧಾನಿಮಂತ್ರಿ ಕಚೇರಿ ಸೇರಿದಂತೆ ಎಲ್ಲಾ ಸಂಸ್ಥೆಗಳಿಗೆ ಭದ್ರತಾ ಸೌಲಭ್ಯವನ್ನು ಒದಗಿಸಲಾಗಿದೆ ಎಂದರು.
8,000ಕ್ಕೂ ಹೆಚ್ಚು ದೆಹಲಿ ಪೊಲೀಸ್ ಸಿಬ್ಬಂದಿ ಕೊರೋನಾ ಸೋಂಕಿಗೆ ಗುರಿಯಾಗಿದ್ದಾರೆ ಮತ್ತು ಅವರಲ್ಲಿ 80 ಮಂದಿ ಲಾಕ್ ಡೌನ್ ಸಮಯದಲ್ಲಿ ಸೇವೆ ಸಲ್ಲಿಸುತ್ತಿರುವಾಗ ಪ್ರಾಣ ಕಳೆದುಕೊಂಡಿದ್ದಾರೆ. ಇದೆಲ್ಲದರ ನಡುವೆಯೂ ಎಲ್ಲಾ ಪೊಲೀಸ್ ಸಿಬ್ಬಂದಿ ಉತ್ತಮ ಕರ್ತವ್ಯ ನಿಭಾಯಿಸಿದ್ದಕ್ಕಾಗಿ ಪ್ರಶಂಸಿಸಿದರು.