ಬಳ್ಳಾರಿ ಆರೋಗ್ಯ ಕಾರ್ಯಕರ್ತನ ಸಾವಿಗೆ ಕೋವಿಡ್-19 ಲಸಿಕೆ ಕಾರಣವಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದ ನಂತರ ಇಬ್ಬರು ಮೃತಪಟ್ಟಿದ್ದಾರೆ. ಆದಾಗ್ಯೂ, ಮರಣೋತ್ತರ ಪರೀಕ್ಷೆ ಆಧಾರದ ಮೇಲೆ ಅವರ ಸಾವಿಗೆ ಲಸಿಕೆ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
Published: 19th January 2021 12:09 AM | Last Updated: 19th January 2021 12:39 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ದೇಶದಲ್ಲಿ ಕೋವಿಡ್-19 ಲಸಿಕೆ ಪಡೆದ ನಂತರ ಇಬ್ಬರು ಮೃತಪಟ್ಟಿದ್ದಾರೆ. ಆದಾಗ್ಯೂ, ಮರಣೋತ್ತರ ಪರೀಕ್ಷೆ ಆಧಾರದ ಮೇಲೆ ಅವರ ಸಾವಿಗೆ ಲಸಿಕೆ ಕಾರಣವಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಜನವರಿ 16 ರಂದು ಕೋವಿಡ್ ಲಸಿಕೆ ಪಡೆದಿದ್ದ ಬಳ್ಳಾರಿಯ 43 ವರ್ಷದ ವ್ಯಕ್ತಿ ಇಂದು ಮೃತಪಟ್ಟಿದ್ದಾರೆ. ಅವರ ಸಾವಿಗೆ ಲಸಿಕೆ ಕಾರಣವಲ್ಲ, ಕಾರ್ಡಿಯೋ ಪಲ್ಮನರಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ವಿಜಯನಗರದ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆಸಿದ ಮರಣೋತ್ತರ ಪರೀಕ್ಷೆಯಲ್ಲಿ ಇದು ತಿಳಿದುಬಂದಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಮನೋಹರ್ ಅಗ್ನಾನಿ ತಿಳಿಸಿದ್ದಾರೆ.
ಇನ್ನೊಂದು ಪ್ರಕರಣದಲ್ಲಿ ಜನವರಿ 16 ರಂದು ಲಸಿಕೆ ಪಡೆದಿದ್ದ ಉತ್ತರ ಪ್ರದೇಶದ ಮೊರಾದಾಬಾದಿನ 52 ವರ್ಷದ ವ್ಯಕ್ತಿ ಭಾನುವಾರ ಸಂಜೆ ಮೃತಪಟ್ಟಿದ್ದರು. ಅವರ ಸಾವಿಗೆ ಲಸಿಕೆ ಕಾರಣವಲ್ಲ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ ಎಂದು ಅವರು ಹೇಳಿದ್ದಾರೆ.
ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ಕೊರೋನಾ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಈವರೆಗೂ 580 ಜನರು ಜ್ವರ, ತಲೆನೋವು, ಸುಸ್ತಿನಂತಹ ಅಡ್ಡಪರಿಣಾಮಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈವರೆಗೂ ಗಂಭೀರ ರೀತಿಯ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ರಾಜ್ಯದಲ್ಲಿ ಕಂಡುಬಂದಿದ್ದ ಎರಡು ಅಡ್ಡ ಪರಿಣಾಮ ಘಟನೆಗಳು ವರದಿಯಾಗಿದೆ. ಈ ಪೈಕಿ ಒಬ್ಬರು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಹಾಗೂ ಮತ್ತೊಬ್ಬರು ಚಳ್ಳಕೆರೆಯ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾವಣೆಯಲ್ಲಿದ್ದಾರೆ ಎಂದು ಮನೋಹರ್ ಅಗ್ನಾನಿ ಹೇಳಿದ್ದಾರೆ.