ಕೃಷಿ ಕಾಯ್ದೆ ರದ್ದು ಮಾಡಿದರೆ ಭವಿಷ್ಯದ ಸುಧಾರಣೆಗಳಿಗೆ ಮಾರಕ: ಸುಪ್ರೀಂ ನೇಮಿತ ಸಮಿತಿ ಸದಸ್ಯ
ಕೇಂದ್ರ ಸರ್ಕಾರ ಹೊಸದಾಗಿ ಜಾರಿ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣ ರದ್ದುಗೊಳಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಒಂದು ವೇಳೆ ಈ ಕಾಯ್ದೆಗಳನ್ನು ರದ್ದುಗೊಳಿಸಿದರೆ...
Published: 19th January 2021 07:27 PM | Last Updated: 19th January 2021 07:28 PM | A+A A-

ರೈತರ ಟ್ರ್ಯಾಕ್ಟರ್ ರ್ಯಾಲಿ
ನವದೆಹಲಿ: ಕೇಂದ್ರ ಸರ್ಕಾರ ಹೊಸದಾಗಿ ಜಾರಿ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ಸಂಪೂರ್ಣ ರದ್ದುಗೊಳಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದು, ಒಂದು ವೇಳೆ ಈ ಕಾಯ್ದೆಗಳನ್ನು ರದ್ದುಗೊಳಿಸಿದರೆ ಭವಿಷ್ಯದಲ್ಲಿ ಕೃಷಿ ಸುಧಾರಣೆಗಳಿಗೆ ಮಾರಕವಾಗಲಿದೆ ಎಂದು ಈ ಸಂಬಂಧ ಸುಪ್ರೀಂ ಕೋರ್ಟ್ ರಚಿಸಿದ ಸಮಿತಿಯ ಸದಸ್ಯರೊಬ್ಬರು ಮಂಗಳವಾರ ಹೇಳಿದ್ದಾರೆ.
ಸುಪ್ರೀಂ ನೇಮಿತ ಸಮಿತಿ ಕೇಂದ್ರ ಸರ್ಕಾರದ ಪರವಾಗಿದೆ ಎಂದು ಪ್ರತಿಭಟನಾನಿರತ ರೈತ ಸಂಘಟನೆಗಳು ವಾಗ್ದಾಳಿ ನಡೆಸುತ್ತಿದ್ದರೂ ಬಿಕ್ಕಟ್ಟನ್ನು ಪರಿಹರಿಸಲು ತಮ್ಮದೇ ಆದ ಸಿದ್ಧಾಂತ ಮತ್ತು ಅಭಿಪ್ರಾಯಗಳನ್ನು ಬದಿಗಿರಿಸಿ ವಿವಿಧ ರೈತ ಸಂಘಟನೆಗಳೊಂದಿಗೆ ಚರ್ಚಿಸುವುದಾಗಿ ಸಮಿತಿಯ ಪ್ರಮುಖ ಸದಸ್ಯ ಮತ್ತು ಮಹಾರಾಷ್ಟ್ರ ಮೂಲದ ಶೆಟ್ಕರಿ ಸಂಘಟಾನಾ ಅಧ್ಯಕ್ಷ ಅನಿಲ್ ಘನ್ವತ್ ಅವರು ಹೇಳಿದ್ದಾರೆ.
ಕೃಷಿ ಕಾನೂನುಗಳನ್ನು ಸಂಪೂರ್ಣ ರದ್ದುಗೊಳಿಸಿದರೆ ಹೆಚ್ಚು ಅಗತ್ಯವಿರುವ ಕೃಷಿ ಸುಧಾರಣೆಗಳಿಗೆ ಒಳ್ಳೆಯದಲ್ಲ. ಕೃಷಿ ಕ್ಷೇತ್ರದ ಸುಧಾರಣೆ ಅಗತ್ಯ ಇದೆ. ಒಂದು ವೇಳೆ ಈ ಕಾನೂನುಗಳನ್ನು ರದ್ದುಗೊಳಿಸಿದರೆ ಮುಂದಿನ 50 ವರ್ಷಗಳ ಕಾಲ ಯಾವುದೇ ರಾಜಕೀಯ ಪಕ್ಷ ಕೃಷಿ ಕ್ಷೇತ್ರದ ಸುಧಾರಣೆಗೆ ಪ್ರಯತ್ನಿಸುವುದಿಲ್ಲ ಎಂದಿದ್ದಾರೆ.
ಆದಾಗ್ಯೂ, ಸಮಿತಿಯು ಕೃಷಿ ಕಾನೂನುಗಳನ್ನು ಬೆಂಬಲಿಸುವವರು ಮತ್ತು ವಿರೋಧಿಸುವವರು ಸೇರಿದಂತೆ ಎಲ್ಲಾ ರೈತರ ಸಲಹೆ ಪಡೆಯುತ್ತದೆ. ಅದರ ಪ್ರಕಾರ ಸುಪ್ರೀಂ ಕೋರ್ಟ್ ಗೆ ವರದಿ ಸಲ್ಲಿಸುತ್ತೇವೆ ಎಂದು ಘನ್ವತ್ ಅವರು ತಿಳಿಸಿದ್ದಾರೆ.
ಕಳೆದ 70 ವರ್ಷಗಳಲ್ಲಿ ರೈತರ ಹಿತದೃಷ್ಟಿಯಿಂದ ಯಾವುದೇ ಕಾನೂನುಗಳನ್ನು ಜಾರಿಗೆ ತಂದಿಲ್ಲ ಮತ್ತು ಸುಮಾರು 4.5 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದರು.
ರೈತರು ದಿನದಿಂದ ದಿನಕ್ಕೆ ಬಡವರಾಗುತ್ತಿದ್ದಾರೆ ಮತ್ತು ಸಾಲದಲ್ಲಿದ್ದಾರೆ. ಹೀಗಾಗಿ ಕೃಷಿ ಕ್ಷೇತ್ರದಲ್ಲಿ ಕೆಲವು ಬದಲಾವಣೆಗಳನ್ನು ತರುವ ಅಗತ್ಯವಿದೆ. ಆ ಬದಲಾವಣೆ ತರುವ ಸಂದರ್ಭದಲ್ಲಿ ಪ್ರತಿಭಟನೆ ಪ್ರಾರಂಭವಾಯಿತು ಎಂದು ಅವರು ಹೇಳಿದರು.