ಶೀಘ್ರದಲ್ಲೇ ಕೊರೋನಾ ಲಸಿಕೆಗಳ ರಫ್ತು? ಇತರ ದೇಶಗಳಿಂದ ಬೇಡಿಕೆ ಹೆಚ್ಚುತ್ತಿರುವಂತೆಯೇ ಮೋದಿ ಸರ್ಕಾರದ ಸಭೆ
ಕೋವಿಡ್-19 ಲಸಿಕೆ ಖರೀದಿಗಾಗಿ ಅನೇಕ ರಾಷ್ಟ್ರಗಳಿಂದ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಬಹು ಸಚಿವರ ಸಭೆಯಲ್ಲಿ ಲಸಿಕೆ ರಫ್ತಿನ ಸಾಧಕ -ಭಾದಕಗಳ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Published: 19th January 2021 12:58 AM | Last Updated: 19th January 2021 12:39 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೋವಿಡ್-19 ಲಸಿಕೆ ಖರೀದಿಗಾಗಿ ಅನೇಕ ರಾಷ್ಟ್ರಗಳಿಂದ ಬೇಡಿಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸೋಮವಾರ ನಡೆದ ಬಹು ಸಚಿವರ ಸಭೆಯಲ್ಲಿ ಲಸಿಕೆ ರಫ್ತಿನ ಸಾಧಕ -ಭಾದಕಗಳ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಔಷಧೀಯ ಇಲಾಖೆ ಸೇರಿದಂತೆ ವಿವಿಧ ಸಚಿವಾಲಯಗಳು, ಏಜೆನ್ಸಿಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದ ವರ್ಚುಯಲ್ ಸಭೆಯಲ್ಲಿ ಈ ವಿಚಾರದ ಬಗ್ಗೆ ತೀವ್ರವಾಗಿ ಚರ್ಚೆ ನಡೆಸಲಾಗಿದೆ ಎನ್ನಲಾಗಿದೆ.
ಲಸಿಕೆಗಳನ್ನು ರಫ್ತು ಮಾಡುವಲ್ಲಿ ಆರೋಗ್ಯ, ವಾಣಿಜ್ಯ, ವಿದೇಶಾಂಗ ವ್ಯವಹಾರಗಳು ಮತ್ತು ಔಷಧ ಇಲಾಖೆ ಪ್ರಮುಖ ಪಾಲುದಾರರಾಗಿ ಇರಲಿವೆ ಎಂದು ಮೂಲಗಳು ಹೇಳಿವೆ.
ಸೆರಮ್ ಇನ್ಸಿಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿರುವ ಕೋವಿಶೀಲ್ಡ್ ಹಾಗೂ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಗಳನ್ನು ಈಗಾಗಲೇ ದೇಶಾದ್ಯಂತ ಆರೋಗ್ಯ ಕಾರ್ಯಕರ್ತರಿಗೆ ವಿತರಿಸಲಾಗುತ್ತಿದೆ. ಈ ಲಸಿಕೆಗಳ ಖರೀದಿಗೆ ಅನೇಕ ದೇಶಗಳು ಮನವಿ ಸಲ್ಲಿಸಿವೆ. ನೆರೆಹೊರೆಯ ರಾಷ್ಟ್ರಗಳು ಮೊದಲಿಗೆ ಲಸಿಕೆ ಪಡೆಯುವ ಸಾಧ್ಯತೆಯಿದೆ ಎಂಬುದು ತಿಳಿದುಬಂದಿದೆ.
ಕೋವಿಡ್ ಲಸಿಕೆಗಳ ತಯಾರಿಕೆ, ಲಭ್ಯತೆ ಬಗ್ಗೆ ಕೇಂದ್ರ ಸರ್ಕಾರ ನಿರ್ಣಯಿಸುತ್ತದೆ. ಇತರ ರಾಷ್ಟ್ರಗಳಿಗೆ ಪೂರೈಕೆ ಬಗ್ಗೆ ನಿರ್ಧಾರ ಕೈಗೊಳ್ಳಲು ಕೆಲ ಸಮಯ ಬೇಕಾಗುತ್ತದೆ ಎಂದು ವಿದೇಶಾಂಗ ವ್ಯವಹಾರ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ ಗುರುವಾರ ಹೇಳಿದ್ದರು.
ಭಾರತದಿಂದ ಲಸಿಕೆಗಾಗಿ ಮನವಿ ಇರುವಂತೆಯೇ ಈ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಭಾರತದ ಲಸಿಕೆ ಉತ್ಪಾದನೆ ಮತ್ತು ವಿತರಣಾ ಸಾಮರ್ಥ್ಯವನ್ನು ಎಲ್ಲಾ ಮಾನವೀಯತೆಯ ಅನುಕೂಲಕ್ಕಾಗಿ ಬಳಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಈ ಹಿಂದೆಯೇ ಹೇಳಿರುವುದಾಗಿ ಶ್ರೀವಾಸ್ತವ ತಿಳಿಸಿದ್ದರು.