ಜ.29ರಿಂದ ಸಂಸತ್ ಬಜೆಟ್ ಅಧಿವೇಶನ ಆರಂಭ, ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿ ರದ್ದು
ಕೇಂದ್ರ ಬಜೆಟ್ ಅಧಿವೇಶನ ಜನವರಿ 29ರಿಂದ ಆರಂಭವಾಗುತ್ತಿದ್ದು, ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ.
Published: 19th January 2021 06:07 PM | Last Updated: 19th January 2021 06:07 PM | A+A A-

ಸಂಸತ್ತು
ನವದೆಹಲಿ: ಕೇಂದ್ರ ಬಜೆಟ್ ಅಧಿವೇಶನ ಜನವರಿ 29ರಿಂದ ಆರಂಭವಾಗುತ್ತಿದ್ದು, ಸಂಸತ್ ಭವನದಲ್ಲಿರುವ ಕ್ಯಾಂಟೀನ್ ಆಹಾರದ ಮೇಲಿನ ಸಬ್ಸಿಡಿಯನ್ನು ರದ್ದುಗೊಳಿಸಲಾಗಿದೆ.
ಸಂಸದರಿಗೆ ಮತ್ತು ಇತರರಿಗೆ ಸಂಸತ್ ಕ್ಯಾಂಟೀನ್ ನಲ್ಲಿ ನೀಡಲಾಗುವ ಆಹಾರದ ಮೇಲಿನ ಸಬ್ಸಿಡಿ ನಿಲ್ಲಿಸಿರುವುದರಿಂದ ಊಟ, ತಿಂಡಿ ದುಬಾರಿಯಾಗಲಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ಹೇಳಿದ್ದಾರೆ.
ಸರ್ಕಾರದ ಈ ಕ್ರಮಕ್ಕೆ ಆರ್ಥಿಕ ಸಂಕಷ್ಟ ಕಾರಣ ಎಂದು ಬಿರ್ಲಾ ಅವರು ನಿರ್ದಿಷ್ಟವಾಗಿ ಹೇಳದಿದ್ದರೂ, ಲೋಕಸಭಾ ಸಚಿವಾಲಯವು ಕ್ಯಾಂಟೀನ್ ಸಬ್ಸಿಡಿಗಾಗಿ ವಾರ್ಷಿಕ 8 ಕೋಟಿ ರೂ.ಗಳಿಗಿಂತ ಹೆಚ್ಚು ಹಣ ಖರ್ಚು ಮಾಡುತ್ತಿತ್ತು.
ಜನವರಿ 29ರಿಂದ ಆರಂಭವಾಗಲಿರುವ ಬಜೆಟ್ ಅಧಿವೇಶನದ ಸಿದ್ಧತೆಗಳ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿರ್ಲಾ, ಸಂಸತ್ ಕ್ಯಾಂಟೀನ್ಗಳನ್ನು ಈಗ ಉತ್ತರ ರೈಲ್ವೆಯ ಬದಲಿಗೆ ಐಟಿಡಿಸಿ ನಡೆಸಲಿದೆ ಎಂದು ಹೇಳಿದರು.
ಬಜೆಟ್ ಅಧಿವೇಶನ ಪ್ರಾರಂಭವಾಗುವ ಮೊದಲು ಎಲ್ಲಾ ಸಂಸತ್ ಸದಸ್ಯರು ಕೋವಿಡ್-19 ಪರೀಕ್ಷೆಗೆ ಒಳಪಡಬೇಕು ಎಂದು ಬಿರ್ಲಾ ಹೇಳಿದರು.
ಸಂಸತ್ತಿನ ಬಜೆಟ್ ಅಧಿವೇಶನವನ್ನು ಎರಡು ಭಾಗಗಳಲ್ಲಿ ನಡೆಸಲು ತೀರ್ಮಾನಿಸಿದ್ದು. ಅಧಿವೇಶನದ ಮೊದಲ ಹಂತವು ಜನವರಿ 29 ರಂದು ಪ್ರಾರಂಭವಾಗಿ ಫೆಬ್ರವರಿ 15 ರಂದು ಕೊನೆಗೊಳ್ಳಲಿದೆ. ಎರಡನೇ ಹಂತದ ಅಧಿವೇಶನ ಮಾರ್ಚ್ 8 ರಿಂದ ಆರಂಭವಾಗಿ ಏಪ್ರಿಲ್ 8ರವರೆಗೆ ನಡೆಯಲಿದೆ.