ಒಂದೂವರೆ ವರ್ಷಗಳ ಕಾಲ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಅಮಾನತಿನಲ್ಲಿಡಲು ಕೇಂದ್ರದ ಪ್ರಸ್ತಾವ
ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುಂದಿನ ಒಂದೂವರೆ ವರ್ಷಗಳ ಕಾಲ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಅಮಾನತಿನಲ್ಲಿಡಲು ಹಾಗೂ ರೈತರ ಹಿತರಕ್ಷಣೆಗಾಗಿ ಸೂಕ್ತ ಪರಿಹಾರ ಕಂಡುಹಿಡಿಯಲು ಜಂಟಿ ಸಮಿತಿ ಸ್ಥಾಪನೆಯ ಪ್ರಸ್ತಾಪವೊಂದನ್ನು ಕೇಂದ್ರ ಸರ್ಕಾರ ಬುಧವಾರ ಮಾಡಿದೆ.
Published: 21st January 2021 12:16 AM | Last Updated: 21st January 2021 12:44 PM | A+A A-

ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪಿಯೂಷ್ ಗೋಯೆಲ್ ಚಿತ್ರ
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸುಮಾರು ಎರಡು ತಿಂಗಳುಗಳಿಂದ ಸಹಸ್ರಾರು ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಮುಂದಿನ ಒಂದೂವರೆ ವರ್ಷಗಳ ಕಾಲ ವಿವಾದಾತ್ಮಕ ಕೃಷಿ ಕಾನೂನುಗಳನ್ನು ಅಮಾನತಿನಲ್ಲಿಡಲು ಹಾಗೂ ರೈತರ ಹಿತರಕ್ಷಣೆಗಾಗಿ ಸೂಕ್ತ ಪರಿಹಾರ ಕಂಡುಹಿಡಿಯಲು ಜಂಟಿ ಸಮಿತಿ ಸ್ಥಾಪನೆಯ ಪ್ರಸ್ತಾಪವೊಂದನ್ನು ಕೇಂದ್ರ ಸರ್ಕಾರ ಬುಧವಾರ ಮಾಡಿದೆ.
ಕೃಷಿ ಕಾನೂನುಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮತ್ತು ರೈತ ಮುಖಂಡರ ನಡುವಿನ ಹತ್ತನೇ ಸುತ್ತಿನ ಮಾತುಕತೆಯಲ್ಲಿ ಒಮ್ಮತದ ಅಭಿಪ್ರಾಯ ಮೂಡದ ಹಿನ್ನೆಲೆಯಲ್ಲಿ ಶುಕ್ರವಾರ ಮತ್ತೊಂದು ಸುತ್ತಿನ ಮಾತುಕತೆಯನ್ನು ಆಯೋಜಿಸಲಾಗಿದೆ. ಗುರುವಾರ ರೈತ ಸಂಘಟನೆಯ ಮುಖಂಡರು ಸಮಾಲೋಚಿಸಿ, ಸರ್ಕಾರದ ನೂತನ ಪ್ರಸ್ತಾಪದ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ.
ಸುಮಾರು ಐದು ಗಂಟೆಗಳ ಕಾಲ ನಡೆದ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್, ಸರ್ಕಾರ ಮುಂದಿನ ಒಂದೂವರೆ ವರ್ಷಗಳ ಕಾಲ ಕೃಷಿ ಕಾನೂನುಗಳನ್ನು ಅಮಾನತುಪಡಿಸಲು ಪ್ರಸ್ತಾಪಿಸಿದೆ. ಈ ಅವಧಿಯಲ್ಲಿ ಸರ್ಕಾರ ಮತ್ತು ರೈತ ಪ್ರತಿನಿಧಿಗಳನ್ನೊಳಗೊಂಡ ಜಂಟಿ ಸಮಿತಿ ಮಾತುಕತೆಯನ್ನು ಮುಂದುವರೆಸಲಿದೆ. ದೆಹಲಿಯ ಗಡಿಯಲ್ಲಿ ಕೊರೆಯುವ ಚಳಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ತಮ್ಮ ಮನೆಗಳಿಗೆ ಹಿಂದಿರುಗಿ ಎಂದರು.
ಮುಂದಿನ ಆದೇಶದವರೆಗೂ ಮೂರು ಕೃಷಿ ಕಾನೂನುಗಳನ್ನು ಅನುಷ್ಠಾನ ಮಾಡದಂತೆ ಈಗಾಗಲೇ ಸುಪ್ರೀಂಕೋರ್ಟ್ ಆದೇಶ ನೀಡಿದ್ದು, ಸಮಸ್ಯೆ ಬಗೆಹರಿಸಲು ತಜ್ಞರ ಸಮಿತಿಯೊಂದನ್ನು ರಚಿಸಿದೆ. ಎಲ್ಲರೊಂದಿಗೆ ಚರ್ಚಿಸಿದ ಬಳಿಕ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಮಿತಿಗೆ ಸುಪ್ರೀಂಕೋರ್ಟ್ ಸೂಚಿಸಿದೆ. ಮಂಗಳವಾರ ಮೊದಲ ಸಭೆ ನಡೆಸಿದ ಸಮಿತಿ, ನಾಳೆಯಿಂದ ರೈತ ಗುಂಪುಗಳು ಮತ್ತಿತರೊಂದಿಗೆ ಸಮಾಲೋಚನೆಯ ಕಾರ್ಯ ಆರಂಭಿಸಲಿದೆ.