ರೈತರ ಟ್ರಾಕ್ಟರ್ ರ್ಯಾಲಿ: ಸುಪ್ರೀಂ ಛಾಟಿ ಬೆನ್ನಲ್ಲೇ ಅರ್ಜಿ ಹಿಂಪಡೆದ ಕೇಂದ್ರ ಸರ್ಕಾರ
ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಉದ್ದೇಶಿಸಿರುವ ಟ್ರಾಕ್ಯರ್ ರ್ಯಾಲಿಗೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.
Published: 21st January 2021 01:06 PM | Last Updated: 21st January 2021 01:28 PM | A+A A-

ಸುಪ್ರೀಂ ಕೋರ್ಟ್
ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಉದ್ದೇಶಿಸಿರುವ ಟ್ರಾಕ್ಯರ್ ರ್ಯಾಲಿಗೆ ತಡೆ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.
ಜನವರಿ 26 ಗಣರಾಜ್ಯೋತ್ಸವ ದಿನದಂದು ರೈತರು ನಡೆಸಲು ಉದ್ದೇಶಿಸಿರುವ 'ಟ್ರ್ಯಾಕ್ಟರ್ ರ್ಯಾಲಿ'ಗೆ ತಡೆಯಾಜ್ಞೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಪಡೆದಿದೆ.
ಗಣರಾಜ್ಯೋತ್ಸವದಂದು ರೈತ ಸಂಘಟನೆ ಕರೆ ನೀಡಿರುವ ಟ್ರ್ಯಾಕ್ಟರ್ ರ್ಯಾಲಿ ವಿಚಾರವನ್ನು ಪೊಲೀಸರು ಇತ್ಯರ್ಥಪಡಿಸಬೇಕು. ಇದರಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೊಬಡೆ ಮತ್ತು ನ್ಯಾಯಮೂರ್ತಿಗಳಾದ ಎಸ್.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್ ಅವರನ್ನೊಳಗೊಂಡ ಪೀಠ ಹೇಳಿತ್ತು.
ಈ ಕುರಿತಂತೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಪೀಠ, ಈ ರ್ಯಾಲಿ ವಿಷಯಕ್ಕೆ ಸಂಬಂಧಿಸಿದಂತೆ ನಾವು ಯಾವುದೇ ನಿರ್ದೇಶನ ನೀಡುವುದಿಲ್ಲ. ಇದು ಪೊಲೀಸ್ ಇಲಾಖೆಗೆ ಸಂಬಂಧಿಸಿದ ವಿಷಯವಾಗಿದೆ. ನೀವು ಅರ್ಜಿಯನ್ನು ಹಿಂದೆತೆಗೆದುಕೊಳ್ಳಲು ಅವಕಾಶ ನೀಡುತ್ತೇವೆ ಎಂದು ತಿಳಿಸಿತ್ತು. ಈ ಬೆಳವಣಿಗೆ ಬೆನ್ನಲ್ಲೇ ರ್ಯಾಲಿಗೆ ತಡೆಯಾಜ್ಞೆ ನೀಡುವಂತೆ ಕೋರಿ ದೆಹಲಿ ಪೊಲೀಸರ ಮೂಲಕ ಸಲ್ಲಿಸಿದ್ದ ಅರ್ಜಿಯನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ರ್ಯಾಲಿಗಾಗಿ 5,000 ಟ್ರಾಕ್ಟರುಗಳು ದೆಹಲಿಗೆ ಪ್ರವೇಶಿಸಲಿವೆ ಎಂದು ವಿಚಾರಣೆಯ ವೇಳೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಈ ವೇಳೆ ಪರಿಸ್ಥಿತಿ ಹೇಗೆ ಬೆಳೆಯುತ್ತದೆ ಎಂಬುದನ್ನು ನೋಡಿದ ನಂತರ ಜನವರಿ 25 ರಂದು ಪ್ರಕರಣವನ್ನು ಪರಿಗಣಿಸಬೇಕು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಒತ್ತಾಯಿಸಿದರು. ಈ ವೇಳೆ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಾಲಯ, 'ಇಲ್ಲ ಇಲ್ಲ. ಇದು ನ್ಯಾಯಾಲಯ ತೀರ್ಮಾನಿಸುವ ವಿಷಯವಲ್ಲ. ನಿಮಗೆ ಕಾನೂನಿನಡಿಯಲ್ಲಿ ಅಧಿಕಾರವಿದೆ. ಪ್ರತಿಭಟನಾಕಾರರನ್ನು ಅನುಮತಿಸುವ ಅಥವಾ ಅನುಮತಿಸದ ಕುರಿತು ನೀವೇ ನಿರ್ಧರಿಸಬೇಕು. ಮೊದಲ ಪ್ರಾಧಿಕಾರವಾಗಿ ನ್ಯಾಯಾಲಯವು ಕಾರ್ಯನಿರ್ವಹಿಸುವುದು ಹೆಚ್ಚು ಸೂಕ್ತವಲ್ಲ. ಹೀಗಾಗಿ ಅರ್ಜಿಯನ್ನು ಹಿಂಪಡೆಯಲು ನಾವು ನಿಮಗೆ ಅನುಮತಿಸಬಹುದು. ನೀವು ಕಾರ್ಯನಿರ್ವಾಹಕರಾಗಿದ್ದೀರಿ ಮತ್ತು ಇದನ್ನು ಪರಿಶೀಲಿಸುವ ಅಧಿಕಾರ ನಿಮಗೆ ಮಾತ್ರ ಇದೆ. ಇದು ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ಸಮಸ್ಯೆಯಾಗಿದೆ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಈ ಹಿಂದೆ ದೆಹಲಿ ಪೊಲೀಸರ ಮೂಲಕ ಸುಪ್ರೀಂಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದ ಕೇಂದ್ರ ಸರ್ಕಾರ, ಪ್ರತಿಭಟಿಸುವ ಹಕ್ಕು ಯಾವಾಗಲೂ ಸಾರ್ವಜನಿಕ ಕ್ರಮ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ಒಳಪಟ್ಟಿರುತ್ತದೆ. ಪ್ರತಿಭಟಿಸುವ ಹಕ್ಕನ್ನು ಎಂದಿಗೂ ಜಾಗತಿಕವಾಗಿ ರಾಷ್ಟ್ರವನ್ನು ಕೆಣಕುವಂತೆ ಇರಬಾರದು. ಇದರಿಂದ ರಾಷ್ಟ್ರದ ಗೌರವಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ ರ್ಯಾಲಿಗೆ ತಡೆ ನೀಡಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿತ್ತು.