ಮತಾಂತರ ಕಾಯ್ದೆ ಅಡಿ ಕರ್ನಾಟಕ ವ್ಯಕ್ತಿ ವಿರುದ್ಧ ದಾಖಲಿಸಿದ್ದ ಕೇಸ್ ಕೈಬಿಟ್ಟ ಯುಪಿ ಪೊಲೀಸರು
ಕರ್ನಾಟಕದ ವ್ಯಕ್ತಿಯೊಬ್ಬರ ವಿರುದ್ಧ ಮತಾಂತರ ವಿರೋಧಿ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಕೈಬಿಟ್ಟಿದ್ದಾರೆ. ಆದರೆ ಆರೋಪಿ ವಿರುದ್ಧ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ
Published: 21st January 2021 03:30 PM | Last Updated: 21st January 2021 03:30 PM | A+A A-

ಸಾಂದರ್ಭಿಕ ಚಿತ್ರ
ಗೋರಖ್ಪುರ: ಕರ್ನಾಟಕದ ವ್ಯಕ್ತಿಯೊಬ್ಬರ ವಿರುದ್ಧ ಮತಾಂತರ ವಿರೋಧಿ ಕಾಯ್ದೆ ಅಡಿ ದಾಖಲಾಗಿದ್ದ ಪ್ರಕರಣವನ್ನು ಉತ್ತರ ಪ್ರದೇಶ ಪೊಲೀಸರು ಕೈಬಿಟ್ಟಿದ್ದಾರೆ. ಆದರೆ ಆರೋಪಿ ವಿರುದ್ಧ 19 ವರ್ಷದ ಯುವತಿಯ ಮೇಲೆ ಅತ್ಯಾಚಾರ ಎಸಗಿದ ಮತ್ತು ವಂಚನೆ ಮಾಡಿದ ಆರೋಪದ ಮೇಲೆ ಕೇಸ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ಕರ್ನಾಟಕದ ಮೆಹಬೂಬ್ ಎಂಬ ವ್ಯಕ್ತಿ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾನೆ ಎಂದು ಅವರು ಹೇಳಿದ್ದಾರೆ.
ಮೂವರು ಪೊಲೀಸರ ತಂಡ, ಮಹಿಳೆಯೊಂದಿಗೆ ಆರೋಪಿ ಮೆಹಬೂಬ್ ನನ್ನು ದಕ್ಷಿಣ ರಾಜ್ಯದಿಂದ ಗೋರಖ್ಪುರಕ್ಕೆ ಕರೆತಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮತಾಂತರ ವಿರೋಧಿ ಕಾಯ್ದೆ ಅಡಿ ಈ ವ್ಯಕ್ತಿಯ ವಿರುದ್ಧದ ಆರೋಪಗಳನ್ನು ಕೈಬಿಡಲಾಗಿದೆ. ಏಕೆಂದರೆ ಆರೋಪಿ ತನ್ನ ಧಾರ್ಮಿಕ ಗುರುತನ್ನು ಮರೆಮಾಚಿರುವುದಿಲ್ಲ ಮತ್ತು ಮಹಿಳೆಯನ್ನು ಮದುವೆಯಾಗಿಲ್ಲ. ಆದ್ದರಿಂದ ಈ ಪ್ರಕರಣವು ಮತಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಬರುವುದಿಲ್ಲ ಎಂದು ಚಿಲುವಾಟಲ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ನೀರಜ್ ರೈ ಅವರು ಹೇಳಿದ್ದಾರೆ.
ಆದಾಗ್ಯೂ, ಆರೋಪಿ ಮೆಹಬೂಬ್ ತಾನು ನೌಕಾಪಡೆಯ ಅಧಿಕಾರಿ ಎಂದು ಮಹಿಳೆಗೆ ನಂಬಿಸಿ, ಆಕೆಗೆ ಕೆಲಸ ನೀಡುವ ನೆಪದಲ್ಲಿ ಕರ್ನಾಟಕಕ್ಕೆ ಕರೆಯಿಸಿಕೊಂಡು, ಅತ್ಯಾಚಾರ ಎಸಗಿದ್ದಾನೆ ಎಂದು ನೀರಜ್ ರೈ ತಿಳಿಸಿದ್ದಾರೆ.
ಈ ವ್ಯಕ್ತಿಯ ಮೇಲೆ ಅತ್ಯಾಚಾರ ಮತ್ತು ವಂಚನೆ ಆರೋಪಗಳನ್ನು ಹೊರಿಸಲಾಗಿದೆ ಎಂದು ಅವರು ಹೇಳಿದ್ದಾರೆ.