
ರಂಜನ್ ಗೊಗೊಯಿ (ಸಂಗ್ರಹ ಚಿತ್ರ)
ನವದೆಹಲಿ: ಐತಿಹಾಸಿಕ ರಾಮಮಂದಿರ ವಿವಾದದ ತೀರ್ಪು ನೀಡಿದ್ದ ನಿವೃತ್ತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿದೆ.
ಆ ಮೂಲಕ ದೇಶದ ಯಾವುದೇ ಮೂಲೆಗೆ ರಂಜನ್ ಗೊಗೋಯ್ ಪ್ರಯಾಣಿಸಿದರೂ ಅವರಿಗೆ ಝಡ್ ಪ್ಲಸ್ ಭದ್ರತೆ ನೀಡಲಾಗುತ್ತದೆ. ಈಗಾಗಲೇ ಕೇಂದ್ರ ಗೃಹ ಇಲಾಖೆ ರಂಜನ್ ಗೊಗೋಯ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸುವ ಕುರಿತು ಸಿಆರ್ಪಿಎಫ್ ಸೂಚನೆ ನೀಡಿದೆ.
ಈ ಹಿಂದೆಯೂ ಕೂಡ ಅಂದರೆ ರಾಮಮಂದಿರ ತೀರ್ಪು ನೀಡುವ ಸಂದರ್ಭದಲ್ಲಿ ರಂಜನ್ ಗೊಗೋಯ್ ಅವರಿಗೆ ಕೇಂದ್ರ ಸರ್ಕಾರ ಝಡ್ ಪ್ಲಸ್ ಭದ್ರತೆ ಒದಗಿಸಿತ್ತು. ಬಳಿಕ ಅವರು ನಿವೃತ್ತರಾಗಿದ್ದರು. ಇದೀಗ ಮತ್ತೆ ಅವರಿಗೆ ಅದೇ ಶ್ರೇಣಿಯ ಭದ್ರತೆ ನೀಡಲಾಗಿದೆ.
ಝಡ್ ಪ್ಲಸ್ ವಿಭಾಗದ ಗಣ್ಯವ್ಯಕ್ತಿಗಳ ಸುರಕ್ಷತೆಯನ್ನು ಕೇಂದ್ರ ಮೀಸಲು ಪೊಲೀಸ್ ಪಡೆ ಅಂದರೆ ಸಿಆರ್ಪಿಎಫ್ ನಿರ್ವಹಿಸುತ್ತದೆ. ಝಡ್ ಪ್ಲಸ್ ವಿಭಾಗದ ಸುರಕ್ಷತೆಯನ್ನು ದೇಶದ ಆಯ್ದ ಜನರಿಗೆ ಮಾತ್ರ ನೀಡಲಾಗುತ್ತದೆ. ಝಡ್ ಪ್ಲಸ್ ಭದ್ರತೆಯನ್ನು ಯಾರಿಗೆ ನೀಡಬೇಕು, ಎಂಬುದನ್ನು ಕೇಂದ್ರ ಸರ್ಕಾರ ನಿರ್ಧರಿಸುತ್ತದೆ. ಗುಪ್ತಚರ ಇಲಾಖೆಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ವಿಐಪಿಗಳಿಗೆ ಝಡ್ ಪ್ಲಸ್ ಮತ್ತು ಇತರ ರೀತಿಯ ಭದ್ರತೆಯನ್ನು ಒದಗಿಸಲಾಗುತ್ತದೆ.
9 ನವೆಂಬರ್ 2019 ರಂದು ಅಂದಿನ ಭಾರತದ ಮುಖ್ಯ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ಮತ್ತು ಇತರೆ ನಾಲ್ವರು ನ್ಯಾಯಾಧೀಶರ ಪೀಠವು ಅಯೋಧ್ಯೆಯ ಮಹತ್ವದ ತೀರ್ಪು ನೀಡಿತ್ತು. ವಿವಾದಿತ ಭೂಮಿಯಲ್ಲಿ ರಾಮ ಮಂದಿರ ದೇವಾಲಯ ನಿರ್ಮಿಸಲು ನ್ಯಾಯಪೀಠ ಆದೇಶಿಸಿತ್ತು.