ಮತ್ತೆ ನಿಗೂಢ ಖಾಯಿಲೆ: ಪಶ್ಚಿಮ ಗೋದಾವರಿಯಲ್ಲಿ 22 ಮಂದಿ ಆಸ್ವಸ್ಥ, ಆಸ್ಪತ್ರೆಗೆ ದಾಖಲು
ಈ ಹಿಂದೆ ಆಂಧ್ರ ಪ್ರದೇಶದ ಏಲೂರಿನಲ್ಲಿ ಕಾಣಿಸಿಕೊಂಡಿದ್ದ ನಿಗೂಢ ಕಾಯಿಲೆ ಮತ್ತೆ ಸದ್ದು ಮಾಡಿದ್ದು, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 22 ಮಂದಿ ನಿಗೂಢ ಅಸ್ವಸ್ಥತೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
Published: 22nd January 2021 03:51 PM | Last Updated: 22nd January 2021 04:02 PM | A+A A-

ಗ್ರಾಮಕ್ಕೆ ಭೇಟಿ ನೀಡಿ ಆಂಧ್ರ ಪ್ರದೇಶ ಉಪ ಮುಖ್ಯಮಂತ್ರಿ
ಅಮರಾವತಿ: ಈ ಹಿಂದೆ ಆಂಧ್ರ ಪ್ರದೇಶದ ಏಲೂರಿನಲ್ಲಿ ಕಾಣಿಸಿಕೊಂಡಿದ್ದ ನಿಗೂಢ ಕಾಯಿಲೆ ಮತ್ತೆ ಸದ್ದು ಮಾಡಿದ್ದು, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿ 22 ಮಂದಿ ನಿಗೂಢ ಅಸ್ವಸ್ಥತೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಶ್ಚಿಮ ಗೋದಾವರಿ ಜಿಲ್ಲೆಯ ದೆಂಡುಲೂರು ಮಂಡಲದ ಕೊಮರೆಪಲ್ಲೆ ಗ್ರಾಮದಲ್ಲಿ ಸುಮಾರು 22 ಮಂದಿ ಗುರುವಾರ ರಾತ್ರಿ ನಿಗೂಢ ಅಸ್ವಸ್ಥತೆಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಸ್ವಸ್ಥರಾದ ಎಲ್ಲರಲ್ಲೂ ಈ ಹಿಂದೆ ಏಲೂರಿನಲ್ಲಿ ಕಾಣಿಸಿಕೊಂಡಿದ್ದ ಅನಾರೋಗ್ಯದ ಲಕ್ಷಣಗಳೇ ಕಾಣಿಸಿವೆ. ಪ್ರಸ್ತುತ ಎಲ್ಲ 22 ಮಂದಿಯನ್ನು ಚಿಕಿತ್ಸೆಗೊಳಪಡಿಸಲಾಗಿದ್ದು, ಎಲ್ಲ ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
22 ಮಂದಿ ಅಸ್ವಸ್ಥಗೊಂಡ ಸುದ್ದಿ ತಿಳಿಯುತ್ತವೇ ದೆಂಡುಲೂರು ಶಾಸಕ ಅಬ್ಬಯ್ಯ ಚೌದರಿ, ಪಶ್ಚಿಮ ಗೋದಾವರಿ ಜಿಲ್ಲಾಧಿಕಾರಿ ರೇವು ಮುತ್ಯಾಲಪಾಜು, ಡಿಎಂಹೆಒ ಸುನಂದಾ ಅವರು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಳಿಕ ಉಪ ಮುಖ್ಯಮಂತ್ರಿ ಅಲ್ಲ ಕಲಿ ಕೃಷ್ಣ ಶ್ರೀನಿವಾಸ್ ಅವರು ಗ್ರಾಮಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡವರ ಕುಟುಂಬಸ್ಥರಿಂದ ಮಾಹಿತಿ ಪಡೆದರು. ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ವೈದ್ಯಕೀಯ ಕ್ಯಾಂಪ್ ಗಳನ್ನು ಆಯೋಜಿಸಲಾಗಿದ್ದು, ಗ್ರಾಮದ ಪ್ರತೀ ಮನೆ ಮನೆಗೂ ತೆರಳಿ ವೈದ್ಯಾಧಿಕಾರಿಗಳು ಮಾಹಿತಿ ಕಲೆಹಾಕಲಿದ್ದಾರೆ.
ಇನ್ನು ಈಗ್ಗೆ ಕೆಲ ದಿನಗಳ ಹಿಂದಷ್ಟೇ ಇದೇ ಜಿಲ್ಲೆಯ ಭೀಮಡೋಲ್ ಮಂಡಲದ ಪುಲ್ಲಾ ಗ್ರಾಮದಲ್ಲೂ ಇಂತಹುದೇ ನಿಗೂಢ ಅಸ್ವಸ್ಥತೆ ಪ್ರಕರಣ ದಾಖಲಾಗಿತ್ತು. ಗ್ರಾಮದ 29 ಮಂದಿ ಅಸ್ವಸ್ಥರಾಗಿದ್ದರು. ಈ ಪೈಕಿ 27 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಇನ್ನು ಇದೇ ಜಿಲ್ಲೆಯ ಮತ್ತೊಂದು ಗ್ರಾಮದಲ್ಲೂ ಇಂತಹುದೇ ಪ್ರಕರಣಗಳು ಪುಲ್ಲ ಗ್ರಾಮದಲ್ಲೂ ವರದಿಯಾಗಿದ್ದು, ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಮುಖ್ಯ ಕಾರ್ಯದರ್ಶಿ ಆದಿತ್ಯ ನಾಥ್ ದಾಸ್ ಅವರಿಗೆ ಘಟನಾ ಸ್ಥಳಕ್ಕೆ ಭೇಟಿ ನೀಡುವಂತೆ ನಿರ್ದೇಶಿಸಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ
ಆರೋಗ್ಯ ಕಾರ್ಯದರ್ಶಿ ಅನಿಲ್ ಕುಮಾರ್ ಸಿಂಘಾಲ್ ಮಾತನಾಡಿ, ಪರಿಸ್ಥಿತಿ ನಿಯಂತ್ರಣದಲ್ಲಿದೆ. ಪುಲ್ಲಾ ಮತ್ತು ಕೊಮಿರೆಪಲ್ಲಿಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ರೋಗದ ಸಂಭವನೀಯ ಕಾರಣಗಳನ್ನು ಪರಿಶೀಲಿಸಲಾಗುತ್ತಿದೆ. ಸುತ್ತಮುತ್ತಲಿನ ಎಲ್ಲಾ ಪ್ರದೇಶಗಳಲ್ಲಿ ನೀರಿನ ಸರಬರಾಜು ಮತ್ತು ನೀರಿನ ಪರೀಕ್ಷೆ ಮಾಡುವಂತೆ ಸೂಚಿಸಲಾಗಿದೆ. ಅಗತ್ಯವಿದ್ದರೆ ಕೇಂದ್ರ ಸಂಸ್ಥೆಗಳ ಸಹಕಾರವನ್ನು ಕೋರಲಾಗುವುದು ಎಂದು ಸಿಂಘಾಲ್ ಹೇಳಿದರು.