
ಕಾಂಗ್ರೆಸ್ಸಿಗರು
ನವದೆಹಲಿ: ಕಾಂಗ್ರೆಸ್ ಪಕ್ಷವು ಮುಂದಿನ ಐದು ತಿಂಗಳಲ್ಲಿ ನೂತನ ಅಧ್ಯಕ್ಷರನ್ನು ಹೊಂದಲಿದೆ ಎಂದು ಪಕ್ಷದ ಕಾರ್ಯಕಾರಿಣಿ ತಿಳಿಸಿದೆ.
ಸಾಂಸ್ಥಿಕ ಚುನಾವಣೆಯ ಪ್ರಕ್ರಿಯೆಯು ಮೇ 29 ರಿಂದ ಪ್ರಾರಂಭವಾಗಲಿದ್ದು, ಈ ವರ್ಷದ ಜೂನ್ ವೇಳೆಗೆ ಕಾಂಗ್ರೆಸ್ ಚುನಾಯಿತ ಅಧ್ಯಕ್ಷರನ್ನು ಹೊಂದಿರುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಶುಕ್ರವಾರ ಹೇಳಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸಭೆಯ ಬಳಿಕ ಈ ವಿಷಯ ತಿಳಿಸಿದ ವೇಣುಗೋಪಾಲ್, "ಹೊಸ ಚುನಾಯಿತ ಕಾಂಗ್ರೆಸ್ ಅಧ್ಯಕ್ಷರು ಜೂನ್ 2021 ರಲ್ಲಿ ಇರಬೇಕೆಂದು ಸಿಡಬ್ಲ್ಯೂಸಿ ಸರ್ವಾನುಮತದಿಂದ ನಿರ್ಧರಿಸಿತು. ಕೇಂದ್ರ ಚುನಾವಣಾ ಪ್ರಾಧಿಕಾರವು ಪ್ರಸ್ತಾಪಿಸಿದ ಮೇ 29 ರ ಚುನಾವಣಾ ವೇಳಾಪಟ್ಟಿಯನ್ನು ಸಿಡಬ್ಲ್ಯೂಸಿ ಪರಿಗಣಿಸಿತು ಮತ್ತು ಸರ್ವಾನುಮತದಿಂದ ಅಂಗೀಕರಿಸಿತು. ಇದರೊಂದಿಗೆ ಒಟ್ಟು ನಾಲ್ಕು ನಿರ್ಣಯಗಳಿಗೆ ಸಮ್ಮತಿಸಲಾಯಿತು" ಎಂದು ಪಕ್ಷದ ಮೂಲಗಳು ತಿಳಿಸಿವೆ.
ವಾಟ್ಸ್ಆಪ್ ಚಾಟ್ ಸೋರಿಕೆಗಳ ಬಗ್ಗೆ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ತನಿಖೆಗೆ ಒತ್ತಾಯಿಸಿದ್ದು, ದೇಶದ್ರೋಹ ಕೃತ್ಯಗಳಲ್ಲಿ ತಪ್ಪಿತಸ್ಥರು ಮತ್ತು ಅಧಿಕೃತ ರಹಸ್ಯ ಕಾಯ್ದೆಯನ್ನು ಉಲ್ಲಂಘಿಸಿದವರು ಮತ್ತು ರಾಷ್ಟ್ರೀಯ ಭದ್ರತೆಯನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯಾಗಬೇಕು, ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಆಗ್ರಹಿಸಿದೆ.
ಕೊರೋನಾ ನಿಯಂತ್ರಣಕ್ಕಾಗಿ ಲಸಿಕೆ ವ್ಯಾಕ್ಸಿನೇಷನ್ ಮಾಡಿಸಿಕೊಳ್ಳುವಂತೆ ದೇಶದ ಜನತೆಗೆ ಮನವಿ ಮಾಡಲಾಗಿದ್ದು, ಲಸಿಕೆ ತಯಾರಿಸಿದ ವಿಜ್ಞಾನಿಗಳಿಗೆ ಧನ್ಯವಾದ ಅರ್ಪಿಸಿದೆ.
ಐದು ರಾಜ್ಯಗಳಲ್ಲಿನ ಚುನಾವಣಾ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು ಸಾಂಸ್ಥಿಕ ಚುನಾವಣೆಗೆ ದಿನಾಂಕವನ್ನು ನಿಗದಿಪಡಿಸಲು ಕಾಂಗ್ರೆಸ್ ಅಧ್ಯಕ್ಷರಿಗೆ ಅಧಿಕಾರ ನೀಡಲಾಗಿದೆ ಎಂದು ಕಾರ್ಯಕಾರಿ ಸಮಿತಿಯ ಸಭೆ ಸಮ್ಮತಿಸಿದೆ.