ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಗೆಲುವು ಜೀವನದ ಪಾಠ ಕಲಿಸಿದೆ, ಸಕಾರಾತ್ಮಕ ಮನೋಧರ್ಮ ಹೊಂದಿರಬೇಕು: ಪ್ರಧಾನಿ ಮೋದಿ
ಇತ್ತೀಚೆಗೆ ಟೀಂ ಇಂಡಿಯಾ ಆಸ್ಟ್ರೇಲಿಯಾದ ಗಬ್ಬಾದಲ್ಲಿ ಕಂಡ ಐತಿಹಾಸಿಕ ಗೆಲುವಿನ ಸ್ಫೂರ್ತಿಯನ್ನು ಇಂದಿನ ಯುವಕರು ಪಡೆದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
Published: 22nd January 2021 01:01 PM | Last Updated: 22nd January 2021 01:01 PM | A+A A-

ವರ್ಚುವಲ್ ಕಾನ್ಫರೆನ್ಸ್ ಮೂಲಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ
ನವದೆಹಲಿ: ಇತ್ತೀಚೆಗೆ ಟೀಂ ಇಂಡಿಯಾ ಆಸ್ಟ್ರೇಲಿಯಾದ ಗಬ್ಬಾದಲ್ಲಿ ಕಂಡ ಐತಿಹಾಸಿಕ ಗೆಲುವಿನ ಸ್ಫೂರ್ತಿಯನ್ನು ಇಂದಿನ ಯುವಕರು ಪಡೆದುಕೊಂಡು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಕೋವಿಡ್-19 ಸಂಕಷ್ಟ, ಸವಾಲುಗಳನ್ನು ಭಾರತ ಅಷ್ಟೇ ಉತ್ಸಾಹ, ಚೈತನ್ಯದಿಂದ ಎದುರಿಸಬೇಕು ಎಂದು ಹೇಳಿದ್ದಾರೆ.
ಅವರು ಇಂದು ಅಸ್ಸಾಂನ ತೇಜ್ಪುರ್ ವಿಶ್ವವಿದ್ಯಾಲಯದಲ್ಲಿ ನಿರ್ಗಮಿತ ವಿದ್ಯಾರ್ಥಿಗಳನ್ನು ವರ್ಚುವಲ್ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿ, ಕೊರೋನಾ ವೈರಸ್ ಸಾಂಕ್ರಾಮಿಕದ ಸವಾಲುಗಳು ಮತ್ತು ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ 2-1 ಸರಣಿಯಿಂದ ಗೆದ್ದಿರುವುದು ನಮ್ಮ ಕ್ರಿಯೆ-ಪ್ರತಿಕ್ರಿಯೆಯ ಪ್ರವೃತ್ತಿ ಬದಲಾಗಿದೆ ಎಂಬುದನ್ನು ತೋರಿಸುತ್ತದೆ ಎಂದರು.
ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಕೋವಿಡ್-19 ಸಾಂಕ್ರಾಮಿಕ ಕಾಲಿಟ್ಟು ಎಲ್ಲೆಡೆ ಹಬ್ಬಿದಾಗ, ನಂತರ ಲಾಕ್ ಡೌನ್ ಹೇರಿಕೆಯಾದಾಗ ಏನಾಗಬಹುದೋ ಎಂಬ ಭೀತಿ ಜನರಲ್ಲಿತ್ತು. ಎಲ್ಲ ಸವಾಲು, ಸಮಸ್ಯೆಗಳನ್ನು ಮೆಟ್ಟಿ ನಿಲ್ಲಬಹುದು ಎಂಬುದನ್ನು ದೇಶ ಇಂದು ತೋರಿಸಿಕೊಟ್ಟಿದೆ. ಭಾರತವೇ ಇಂದು ಲಸಿಕೆ ಅಭಿವೃದ್ಧಿಪಡಿಸುವ ಮೂಲಕ ಮೇಡ್ ಇನ್ ಇಂಡಿಯಾ ಪರಿಹಾರ ಕಂಡುಕೊಂಡಿದೆ, ನಮ್ಮ ವಿಜ್ಞಾನಿಗಳ ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದರು.
ನಮ್ಮ ದೇಶ ಮುಂದಿನ ವರ್ಷ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿದೆ. ಇಂದು ನಾವು ಆತ್ಮನಿರ್ಭರ ಭಾರತ ಯುಗದಲ್ಲಿ ಬದುಕುತ್ತಿದ್ದೇವೆ. ಈ ವರ್ಷದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 100 ವರ್ಷಗಳಾಗುವವರೆಗೆ ಯುವಜನತೆಗೆ ಸುವರ್ಣಯುಗ, ಅದನ್ನು ಚೆನ್ನಾಗಿ ಬಳಸಿಕೊಳ್ಳಿ ಎಂದು ಕರೆ ನೀಡಿದರು.
ಸಕಾರಾತ್ಮಕ ಮನೋಧರ್ಮ ಬೆಳೆಸಿಕೊಳ್ಳಿ: ನಮ್ಮ ಜೀವನದಲ್ಲಿ ಒಳ್ಳೆಯದಾಗಲು, ಅಭಿವೃದ್ಧಿ ಕಾಣಲು ಸಕಾರಾತ್ಮಕವಾಗಿ ನಾವು ಹೆಚ್ಚೆಚ್ಚು ಯೋಚಿಸುತ್ತಿರಬೇಕು. ಆತ್ಮ ನಿರ್ಭರ ಭಾರತಕ್ಕೆ ಅದು ಅಗತ್ಯ ಕೂಡ. ಅದಕ್ಕೆ ಉತ್ತಮ ಉದಾಹರಣೆ ನಮ್ಮ ಕ್ರಿಕೆಟ್ ತಂಡ. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ಆರಂಭದಲ್ಲಿ ತಂಡಕ್ಕೆ ಸಾಕಷ್ಟು ಸವಾಲುಗಳು ಎದುರಾದವು. ಅವುಗಳನ್ನು ಎದುರಿಸಿ ಸೋತು, ಗೆದ್ದರು. ನಮ್ಮ ಆಟಗಾರರು ಕಡಿಮೆ ಅನುಭವ ಹೊಂದಿದ್ದರೂ ಕೂಡ ಅವರಲ್ಲಿ ಆತ್ಮವಿಶ್ವಾಸ ಇತ್ತು, ಹೀಗಾಗಿ ಇತಿಹಾಸ ಸೃಷ್ಟಿಸಿದರು. ಕ್ರಿಕೆಟ್ ನ ಯಶಸ್ಸು ನಮ್ಮ ಜೀವನಕ್ಕೆ ಅತಿದೊಡ್ಡ ಪಾಠ ಕಲಿಸುತ್ತದೆ. ನಮ್ಮ ಮನಸ್ಸನ್ನು ಧನಾತ್ಮಕ ಆಲೋಚನೆಗಳಿಗೆ ಸಿದ್ಧಗೊಳಿಸಬೇಕು ಎಂದು ಪ್ರಧಾನಿ ಅಲ್ಲಿ ಸೇರಿದ್ದ ಯುವಜನತೆಗೆ ಜೀವನದ ಪಾಠ ಹೇಳಿಕೊಟ್ಟರು.