ಮೋದಿ ನಂತರದ ನಾಯಕ ಯಾರು? ಅಮಿತ್ ಶಾ ಅಥವಾ ಯೋಗಿ?: ಸಮೀಕ್ಷೆಯ ಫಲಿತಾಂಶ ಹೀಗಿದೆ...
ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ 7 ವರ್ಷಗಳಿಂದ ಉತ್ತುಂಗದಲ್ಲಿದೆ. 2024 ರಲ್ಲಿ ಮೋದಿ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಅವರೇ ಮತ್ತೊಂದು ಅವಧಿಗೂ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೋ ಅಥವಾ ಬೇರೆ ಯಾವುದೇ ನಾಯಕ ಆಯ್ಕೆಯಾಗುತ್ತಾರೋ ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ.
Published: 23rd January 2021 02:58 PM | Last Updated: 23rd January 2021 04:06 PM | A+A A-

ಮೋದಿ ನಂತರದ ನಾಯಕ ಯಾರು? ಅಮಿತ್ ಶಾ ಅಥವಾ ಯೋಗಿ?: ಸಮೀಕ್ಷೆಯ ಫಲಿತಾಂಶ ಹೀಗಿದೆ...
ನವದೆಹಲಿ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ 7 ವರ್ಷಗಳಿಂದ ಉತ್ತುಂಗದಲ್ಲಿದೆ. 2024 ರಲ್ಲಿ ಮೋದಿ ಆಡಳಿತಾವಧಿ ಮುಕ್ತಾಯಗೊಳ್ಳುತ್ತಿದ್ದಂತೆಯೇ ಅವರೇ ಮತ್ತೊಂದು ಅವಧಿಗೂ ಪ್ರಧಾನಿಯಾಗಿ ಆಯ್ಕೆಯಾಗುತ್ತಾರೋ ಅಥವಾ ಬೇರೆ ಯಾವುದೇ ನಾಯಕ ಆಯ್ಕೆಯಾಗುತ್ತಾರೋ ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ಪ್ರಾರಂಭವಾಗಿವೆ.
ಈಗಲೂ ಸಹ 2024 ರ ಚುನಾವಣೆಯಲ್ಲಿ ಪ್ರಧಾನಿ ಹುದ್ದೆಗೆ ಮೋದಿಯನ್ನೇ ಬಹುತೇಕ ಜನರು ಅನುಮೋದಿಸುತ್ತಿದ್ದಾರೆ. ಆದಾಗ್ಯೂ ಮೋದಿ ಹೊರತಾದ ಅಷ್ಟೇ ಜನಪ್ರಿಯ ನಾಯಕ ಯಾರಿದ್ದಾರೆ ಎಂಬ ಬಗ್ಗೆ ಇಂಡಿಯಾ ಟುಡೆ ವಾಹಿನಿ ನಡೆಸಿದ ಸಮೀಕ್ಷೆ ನಡೆಸಿದ್ದು, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ಜನಪ್ರಿಯತೆ ಬಗ್ಗೆ ಸಮೀಕ್ಷೆ ನಡೆಸಲಾಗಿದೆ.
2024 ರಲ್ಲಿ ಮೋದಿ ಪ್ರಧಾನಿಯಾಗದೇ ಇದ್ದಲ್ಲಿ, ದೇಶದ ಅಧಿಕಾರದ ಚುಕ್ಕಾಣಿ ಹಿಡಿಯುವುದಕ್ಕೆ ಅಮಿತ್ ಶಾ ಹಾಗೂ ಯೋಗಿ ಆದಿತ್ಯನಾಥ್ ಇಬ್ಬರೂ ಸಮಾನ ಸಾಮರ್ಥ್ಯ ಹೊಂದಿರುವವರು ಎಂದು ಸಮೀಕ್ಷೆಯಲ್ಲಿ ಭಾಗಿಯಾಗಿರುವವರು ಹೇಳಿದ್ದಾರೆ.
ನೋಟು ನಿಷೇಧ, ಸಿಎಎ, ಎನ್ಆರ್ ಸಿ, ರೈತರ ಪ್ರತಿಭಟನೆ ಹೀಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಲವು ವಿಷಯಗಳಲ್ಲಿ ಒಂದಷ್ಟು ವಿರೋಧ ಎದುರಾಯಿತಾದರೂ ಜನಪ್ರಿಯತೆಗೆ ಯಾವುದೇ ಧಕ್ಕೆ ಉಂಟಾಗಿಲ್ಲ. ಶೇ.38 ರಷ್ಟು ಮಂದಿ ಈಗಲೂ ಮೋದಿಯೇ ಮುಂದಿನ ಪ್ರಧಾನಿ ಎಂದು ಹೇಳುತ್ತಿದ್ದಾರೆ.
ಬಿಜೆಪಿಯಲ್ಲಿ ಮೋದಿ ಅವರ ಜನಪ್ರಿಯತೆಯ ಹತ್ತಿರಕ್ಕೂ ಯಾವುದೇ ನಾಯಕರ ಹೆಸರು ಬಾರದೇ ಇರುವುದು ಮತ್ತೊಂದು ಅಚ್ಚರಿಯ ವಿಷಯವಾಗಿದೆ. ಆದರೂ ಮುಂದಿನ ಪ್ರಧಾನಿ ಅಭ್ಯರ್ಥಿಯ ಹೆಸರುಗಳ ಪೈಕಿ ಯೋಗಿ ಆದಿತ್ಯನಾಥ್ ಅವರ ಹೆಸರು ಮುಂಚೂಣಿಯಲ್ಲಿದೆ.
ಶೇ.10 ರಷ್ಟು ಮಂದಿ ಯೋಗಿ ಆದಿತ್ಯನಾಥ್ ಅವರೇ ಮುಂದಿನ ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಅಭಿಪ್ರಾಯಪಟ್ಟಿದ್ದರೆ. ಶೇ.8 ರಷ್ಟು ಮಂದಿ ಅಮಿತ್ ಶಾ ಅವರು ಪ್ರಧಾನಿ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಹೇಳಿದ್ದಾರೆ.
ಇದೇ ವೇಳೆ ಯೋಗಿ ಆದಿತ್ಯನಾಥ್ ದೇಶದ ಅತ್ಯಂತ ವಿಶ್ವಾಸಾರ್ಹ ಸಿಎಂ ಕೂಡ ಆಗಿದ್ದಾರೆ. ಯೋಗಿ ಅವರ ನಂತರದ ಸ್ಥಾನದಲ್ಲಿ ದೆಹಲಿ ಸಿಎಂ ಕೇಜ್ರಿವಾಲ್ ಇದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಸ್ಥಾನವನ್ನು ಬಿಜೆಪಿಯಲ್ಲಿ ಯಾರು ತುಂಬಬಹುದು ಎಂಬ ಪ್ರಶ್ನೆಗೆ ಶೇ.30 ರಷ್ಟು ಮಂದಿ ಅಮಿತ್ ಶಾ ಪರ ಒಲವು ವ್ಯಕ್ತಪಡಿಸಿದ್ದರೆ, ಶೇ.21 ರಷ್ಟು ಮಂದಿ ಯೋಗಿ ಆದಿತ್ಯನಾಥ್ ಎಂಬ ಉತ್ತರ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಬದಲಿಗೆ ಕಾಂಗ್ರೆಸ್ ನಿಂದ ಯಾರು ಉತ್ತಮ ನಾಯಕತ್ವ ನೀಡಬಹುದೆಂಬ ಪ್ರಶ್ನೆಗೆ ಟಾಪ್ ಮೂರರಲ್ಲಿ ಯಾವುದೇ ಹೆಸರನ್ನೂ ಜನರು ತೆಗೆದುಕೊಂಡಿಲ್ಲ.
ದೇಶವನ್ನು ಮುನ್ನಡೆಸಲು ದೇಶದ ಜನತೆ ಈಗಲೂ ಮೋದಿಯೇ ಬೆಸ್ಟ್ ಎನ್ನುತ್ತಿದ್ದರೆ ನಂತರದ ಸ್ಥಾನದಲ್ಲಿ ಯೋಗಿ ಆದಿತ್ಯನಾಥ್ ಹಾಗೂ ಅಮಿತ್ ಶಾ ಇದ್ದಾರೆ, ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶೇ.7 ರಷ್ಟು ಮಂದಿ ರಾಹುಲ್ ಗಾಂಧಿ ನಾಯಕತ್ವವನ್ನು ಬೆಂಬಲಿಸಿದ್ದಾರೆ.