ರೈತರ ಗಣರಾಜ್ಯೋತ್ಸವ ಟ್ರ್ಯಾಕ್ಟರ್ ಪರೇಡ್ ಗೆ ದೆಹಲಿ ಪೊಲೀಸರಿಂದ ಅನುಮತಿ
ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಶುಕ್ರವಾರ ಕೇಂದ್ರ ಸಚಿವರು ನಡೆಸಿದ...
Published: 23rd January 2021 07:58 PM | Last Updated: 23rd January 2021 07:58 PM | A+A A-

ರೈತರ ಟ್ರ್ಯಾಕ್ಟರ್ ಮೆರವಣಿಗೆ
ನವದೆಹಲಿ: ವಿವಾದಾತ್ಮಕ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಗಡಿಯಲ್ಲಿ ಕಳೆದ ಎರಡು ತಿಂಗಳಿಂದ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ಶುಕ್ರವಾರ ಕೇಂದ್ರ ಸಚಿವರು ನಡೆಸಿದ 11ನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಗಣರಾಜ್ಯೋತ್ಸವದ ದಿನದಂದು ದೆಹಲಿಯಲ್ಲಿ ಟ್ರ್ಯಾಕ್ಟರ್ ಪರೇಡ್ ನಡೆಸಲು ದೆಹಲಿ ಪೊಲೀಸರು ಶನಿವಾರ ಅನುಮತಿ ನೀಡಿದ್ದಾರೆ.
ಈ ಸಂಬಂಧ ರೈತ ಮುಖಂಡರ ಜೊತೆ ಸಭೆ ನಡೆಸಿದ ದೆಹಲಿ ಪೊಲೀಸರು, ಕೊನೆಗೂ ರೈತರ ಪಟ್ಟಿಗೆ ಮಣಿದು ಟ್ರ್ಯಾಕ್ಟರ್ ಮೆರವಣಿಗೆ ಮಾಡಲು ಒಪ್ಪಿಗೆ ನೀಡಿದ್ದಾರೆ.
ಜನವರಿ 26 ರಂದು ಸಶಸ್ತ್ರ ಪಡೆಗಳು ಪರೇಡ್ ನಡೆಸುವ ಸಮಯದಲ್ಲೇ ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸಲು ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ಪ್ರತಿಭಟನಾನಿರತ ರೈತ ಸಂಘಟನೆಗಳು ಪೊಲೀಸರನ್ನು ಭೇಟಿ ಮಾಡಿದ ನಂತರ ರೈತ ಮುಖಂಡ ಅಭಿಮನ್ಯು ಕೊಹಾರ್ ಅವರು ತಿಳಿಸಿದ್ದಾರೆ.
ಹರಿಯಾಣ, ಪಂಜಾಬ್ ಮತ್ತು ಪಶ್ಚಿಮ ಉತ್ತರ ಪ್ರದೇಶ ಸೇರಿದಂತೆ ನೆರೆಯ ರಾಜ್ಯಗಳ ಲಕ್ಷಾಂತರ ರೈತರು ಜನವರಿ 26 ರಂದು ನಡೆಯುವ ಟ್ರ್ಯಾಕ್ಟರ್ ಪರೇಡ್ ನಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಮುಖಂಡ ಹೇಳಿದ್ದಾರೆ.
ನಿನ್ನೆ ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ 11ನೇ ಸುತ್ತಿನ ಮಾತುಕತೆಯಲ್ಲೂ ತಮ್ಮ ಪಟ್ಟು ಬಿಡದ ರೈತರು, ಕಾರ್ಪೋರೇಟ್ ಕಂಪನಿಗಳ ಪರವಾಗಿರುವ ಮೂರು ಕೃಷಿ ಕಾನೂನುಗಳನ್ನು ಸಂಪೂರ್ಣ ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಗ್ಯಾರಂಟಿ ನೀಡಬೇಕು. ಇಲ್ಲದಿದ್ದರೆ ಪ್ರತಿಭಟನೆಯನ್ನು ಮತ್ತಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದರು.