ರೈತ ಮುಖಂಡರ ಹತ್ಯೆಗೆ ಪಿತೂರಿ ಆರೋಪ: ಹರ್ಯಾಣ ಪೊಲೀಸರಿಂದ ಯುವಕನ ತೀವ್ರ ವಿಚಾರಣೆ
ನಾಲ್ವರು ರೈತ ಮುಖಂಡರ ಹತ್ಯೆ ಮಾಡಿ ಜನವರಿ 26ರ ಗಣರಾಜ್ಯೋತ್ಸವ ದಿನ ಉದ್ದೇಶಿತ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಯನ್ನುಂಟುಮಾಡಬೇಕೆಂದು ಪಿತೂರಿ ನಡೆಸಲು ವ್ಯಕ್ತಿಯೊಬ್ಬನನ್ನು ನಿಯೋಜಿಸಲಾಗಿತ್ತು ಎಂದು ಮಾಧ್ಯಮದ ಮುಂದೆ ಸಿಂಘು ಗಡಿಯಲ್ಲಿ ತೋರಿಸಿದ ವ್ಯಕ್ತಿಯನ್ನು ಸೋನಿಪತ್ ನಲ್ಲಿ ಹರ್ಯಾಣ ಪೊಲೀಸರು ವಿಚಾರಣೆ ನಡೆಸಿದ್ದಾರೆ.
Published: 23rd January 2021 01:18 PM | Last Updated: 23rd January 2021 01:21 PM | A+A A-

ಮೀರತ್ ವಲಯದ ಐಜಿ ಮತ್ತು ಎಡಿಜಿ ರೈತ ಮುಖಂಡ ವಿ ಎಂ ಸಿಂಗ್ ಜೊತೆ ಮಾತುಕತೆ ನಡೆಸಿದರು.
ನವದೆಹಲಿ: ನಾಲ್ವರು ರೈತ ಮುಖಂಡರ ಹತ್ಯೆ ಮಾಡಿ ಜನವರಿ 26ರ ಗಣರಾಜ್ಯೋತ್ಸವ ದಿನ ಉದ್ದೇಶಿತ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಯನ್ನುಂಟುಮಾಡಬೇಕೆಂದು ಪಿತೂರಿ ನಡೆಸಲು ವ್ಯಕ್ತಿಯೊಬ್ಬನನ್ನು ನಿಯೋಜಿಸಲಾಗಿತ್ತು ಎಂದು ಮಾಧ್ಯಮದ ಮುಂದೆ ಸಿಂಘು ಗಡಿಯಲ್ಲಿ ತೋರಿಸಿದ ವ್ಯಕ್ತಿಯನ್ನು ಸೋನಿಪತ್ ನಲ್ಲಿ ಹರ್ಯಾಣ ಪೊಲೀಸರು ವಿಚಾರಣೆ ನಡೆಸಿದ್ದಾರೆ.
ಸುಮಾರು 21 ವರ್ಷದ ಯುವಕನನ್ನು ಸೋನಿಪತ್ ನ ಅಪರಾಧ ವಿಭಾಗದ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈತ ಸೋನಿಪತ್ ನಿವಾಸಿಯಾಗಿದ್ದು ಯಾವುದೇ ಅಪರಾಧ ಕೃತ್ಯಗಳನ್ನು ಈ ಹಿಂದೆ ಎಸಗಿರುವ ದಾಖಲೆಗಳಿಲ್ಲ ಎಂದಿದ್ದಾರೆ.
ಆತನ ಬಳಿ ಯಾವುದೇ ಶಸ್ತ್ರಾಸ್ತ್ರಗಳು, ಆಯುಧಗಳಿಲ್ಲ. ಆತನನ್ನು ವಿಚಾರಣೆಗೊಳಪಡಿಸಿದಾಗ ರೈತ ಮುಖಂಡರು ಆರೋಪಿಸಿದ ರೀತಿಯಲ್ಲಿ ಆತ ಪಿತೂರಿ ನಡೆಸಿದ ಯಾವುದೇ ಅಂಶಗಳು ಕಂಡುಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು ಹೆಚ್ಚಿನ ತನಿಖೆ ಮುಂದುವರಿದಿದೆ ಎಂದರು.
ನಿನ್ನೆ ಸಾಯಂಕಾಲ ದೆಹಲಿಯ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ್ದ ರೈತ ಮುಖಂಡರು, ಯುವಕನೊಬ್ಬನನ್ನು ಅವನ ಮುಖವನ್ನು ಮುಚ್ಚಿಸಿ ಮಾಧ್ಯಮ ಪ್ರತಿನಿಧಿಗಳ ಮುಂದೆ ತೋರಿಸಿ ಈತನಲ್ಲಿ ಪೊಲೀಸ್ ಧಿರಿಸಿನಲ್ಲಿ ಕಾಣಿಸಿಕೊಂಡು ಪ್ರತಿಭಟನಾ ನಿರತ ರೈತರನ್ನು ಚದುರಿಸಿ ಟ್ರಾಕ್ಟರ್ ರ್ಯಾಲಿಗೆ ಅಡ್ಡಿಯನ್ನುಂಟುಮಾಡಬೇಕೆಂದು ಹೇಳಿಕೊಟ್ಟಿದ್ದರು, ಅಲ್ಲದೆ ನಮ್ಮಲ್ಲಿ ನಾಲ್ವರನ್ನು ಹತ್ಯೆ ಮಾಡಲು ಪಿತೂರಿ ನಡೆಸಲು ಹೇಳಿದ್ದರು ಎಂದು ಆರೋಪಿಸಿದ್ದು ಸಂಚಲನ ಸೃಷ್ಟಿಸಿದೆ.
ಕೂಡಲೇ ಯುವಕನನ್ನು ಹರ್ಯಾಣ ಪೊಲೀಸರಿಗೆ ಹಸ್ತಾಂತರಿಸಲಾಯಿತು.