ಟ್ರ್ಯಾಕ್ಟರ್ ಪರೇಡ್ಗೆ ಅನುಮತಿ ನೀಡುವ ಕುರಿತು ರೈತರೊಂದಿಗೆ ಅಂತಿಮ ಹಂತದ ಚರ್ಚೆ: ದೆಹಲಿ ಪೊಲೀಸರು
ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ರೈತರು ಜನವರಿ 26ರಂದು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ಗೆ ಅನುಮತಿ ನೀಡುವ ಕುರಿತು ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
Published: 23rd January 2021 11:29 PM | Last Updated: 23rd January 2021 11:29 PM | A+A A-

ದೆಹಲಿ ಪೊಲೀಸರು
ನವದೆಹಲಿ: ಕೇಂದ್ರ ಸರ್ಕಾರದ ಕೃಷಿ ಕಾನೂನು ವಿರೋಧಿಸಿ ರೈತರು ಜನವರಿ 26ರಂದು ಹಮ್ಮಿಕೊಂಡಿರುವ ಟ್ರ್ಯಾಕ್ಟರ್ ಪರೇಡ್ಗೆ ಅನುಮತಿ ನೀಡುವ ಕುರಿತು ಅಂತಿಮ ಹಂತದ ಚರ್ಚೆಗಳು ನಡೆಯುತ್ತಿವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.
ಇದಕ್ಕೂ ಮೊದಲು ರೈತರು ನಡೆಸಲು ಉದ್ದೇಶಿಸಿರುವ ಟ್ರ್ಯಾಕ್ಟರ್ ಪರೇಡ್ಗೆ ದೆಹಲಿ ಪೊಲೀಸರು ಅನುಮತಿ ನೀಡಿದ್ದಾರೆ ಎಂದು ರೈತ ನಾಯಕ ಅಭಿಮನ್ಯು ಕೋಹರ್ ಹೇಳಿದ್ದರು. ಅಂತೆಯೇ ಜ. 26ರಂದು ರೈತರು ‘ಕಿಸಾನ್ ಗಣತಂತ್ರ ಪರೇಡ್’ ನಡೆಸಲಿದ್ದಾರೆ. ಬ್ಯಾರಿಕೇಡ್ಗಳನ್ನು ತೆರೆಯಲಾಗುತ್ತಿದ್ದು ನಾವು ದೆಹಲಿ ಪ್ರವೇಶಿಸಲಿದ್ದೇವೆ. ನಾವು (ರೈತರು ಮತ್ತು ದೆಹಲಿ ಪೊಲೀಸರು) ಒಪ್ಪಂದಕ್ಕೆ ಬಂದಿದ್ದು, ಪರೇಡ್ ಮಾರ್ಗದ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದೇವೆ. ಅಂತಿಮ ರೂಪುರೇಷೆ ನಾಳೆಯೊಳಗೆ ಸಿದ್ಧವಾಗಲಿದೆ’ ಎಂದು ಸ್ವರಾಜ್ ಇಂಡಿಯಾದ ಯೋಗೇಂದ್ರ ಯಾದವ್ ತಿಳಿಸಿದ್ದರು.
Protesting farmers have not given us anything in writing regarding the route (of proposed tractor rally on January 26), say Delhi Police https://t.co/DcPJ7RFoF6 pic.twitter.com/bp0IVgkeZT
— ANI (@ANI) January 23, 2021
ಆದರೆ ಇದೀಗ ಈಡೀ ಪ್ರಕರಣಕ್ಕೆ ದೆಹಲಿ ಪೊಲೀಸರು ಟ್ವಿಸ್ಟ್ ನೀಡಿದ್ದು, ರೈತರೊಂದಿಗಿನ ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಹೇಳಿದ್ದಾರೆ. ಈ ಕುರಿತಂತೆ ಮಾತನಾಡಿರುವ ದೆಹಲಿ ಪೊಲೀಸ್ ಹೆಚ್ಚುವರಿ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನಿಲ್ ಮಿತ್ತಲ್ ಅವರು, ರೈತರೊಂದಿಗೆ ಅಂತಿಮ ಹಂತದ ಮಾತುಕತೆ ಚಾಲ್ತಿಯಲ್ಲಿದೆ. ಶೀಘ್ರದಲ್ಲೇ ನಿರ್ಣಯ ಕೈಗೊಳ್ಳಲಾಗುತ್ತದೆ. ರೈತರು ರ್ಯಾಲಿ ನಡೆಯುವ ಮಾರ್ಗಗಳ ಬಗ್ಗೆ ಲಿಖಿತ ಮಾಹಿತಿ ನೀಡಿಲ್ಲ ಎಂದು ಹೇಳಿದ್ದಾರೆ.
ಕಳೆದ ನವೆಂಬರ್ 28 ರಿಂದ, ಪಂಜಾಬ್ ಮತ್ತು ಹರಿಯಾಣದ ರೈತರು, ಸಿಂಗು, ಟಿಕ್ರಿ ಮತ್ತು ಗಾಜಿಪುರ ಸೇರಿದಂತೆ ದೆಹಲಿಯ ಹಲವು ಗಡಿ ಭಾಗಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಕೃಷಿ ಕಾನೂನು ಮತ್ತು ಶಾಸನಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಇನ್ನು ಜನವರಿ 26ರಂದು ರೈತರು ನಡೆಸಲಿರುವ ರ್ಯಾಲಿಯಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಟ್ರಾಕ್ಟರುಗಳು ಭಾಗವಹಿಸುವ ನಿರೀಕ್ಷೆಯಿದೆ. ರ್ಯಾಲಿಗಾಗಿಯೇ ಪೊಲೀಸರು ಐದು ಪ್ರತ್ಯೇಕ ಮಾರ್ಗಗಳನ್ನು ಸೂಚಿಸಿದ್ದಾರೆ ಎನ್ನಲಾಗಿದೆ.
ದೆಹಲಿಯ ರಾಜ್ಪಥದಲ್ಲಿ ಗಣರಾಜ್ಯೋತ್ಸವದ ಮೆರವಣಿಗೆ ಮುಕ್ತಾಯಗೊಂಡ ನಂತರ ಮಧ್ಯಾಹ್ನ 12 ಗಂಟೆಯ ನಂತರವೇ ಟ್ರಾಕ್ಟರ್ ಮೆರವಣಿಗೆ ನಡೆಸಲಾಗುತ್ತದೆ ಎಂದು ಪ್ರತಿಭಟನಾ ನಿರತ ರೈತ ಸಂಘಗಳು ತಿಳಿಸಿವೆ.