ಕೃಷಿ ಕಾನೂನು ವಿರೋಧಿಸಿ ಪ್ರತಿಭಟನೆ; ಟ್ರ್ಯಾಕ್ಟರ್ ರ್ಯಾಲಿಗೆ ರೈತರು ಸಜ್ಜು

ಗಣರಾಜ್ಯೋತ್ಸವ ದಿನದಂದು ರೈತರು ಆಯೋಜಿಸಿರುವ ಟ್ರ್ಯಾಕ್ಟರ್ ರ್ಯಾಲಿಗೆ ರೈತರು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ರ್ಯಾಲಿಯಲ್ಲಿ ಪಾಲ್ಗೊಳ್ಳುವ ರೈತರಿಗೆ ರೈತ ಮುಖಂಡರು ಹಲವು ಸೂಚನೆಗಳನ್ನು ನೀಡಿದ್ದಾರೆ.

Published: 25th January 2021 01:27 AM  |   Last Updated: 25th January 2021 12:34 PM   |  A+A-


tractor rally

ಟ್ರ್ಯಾಕ್ಟರ್ ರ್ಯಾಲಿ

Posted By : Srinivasamurthy VN
Source : PTI

ನವದೆಹಲಿ: ಗಣರಾಜ್ಯೋತ್ಸವ ದಿನದಂದು ರೈತರು ಆಯೋಜಿಸಿರುವ ಟ್ರ್ಯಾಕ್ಟರ್ ರ್ಯಾಲಿಗೆ ರೈತರು ಸಕಲ ರೀತಿಯಲ್ಲೂ ಸಜ್ಜಾಗಿದ್ದು, ರ್ಯಾಲಿಯಲ್ಲಿ ಪಾಲ್ಗೊಳ್ಳುವ ರೈತರಿಗೆ ರೈತ ಮುಖಂಡರು ಹಲವು ಸೂಚನೆಗಳನ್ನು ನೀಡಿದ್ದಾರೆ.

ರ್ಯಾಲಿ ವೇಳೆ ಯಾರೂ ಯಾವುದೇ ಆಯುಧವನ್ನು ಒಯ್ಯಬಾರದು ಅಥವಾ ಮದ್ಯಪಾನ ಮಾಡಬಾರದು. ಪ್ರಚೋದಿಸುವ ಸಂದೇಶಗಳನ್ನು ಹೊತ್ತ ಬ್ಯಾನರ್‌ಗಳನ್ನು ಅನುಮತಿಸಲಾಗುವುದಿಲ್ಲ. ಸಿಂಗು, ಟಿಕ್ರಿ ಮತ್ತು ಗಾಜಿಪುರ ಗಡಿ ಕೇಂದ್ರಗಳಿಂದ ಮೂರು ಮಾರ್ಗಗಳನ್ನು ಮೆರವಣಿಗೆಗೆ ಅಂತಿಮಗೊಳಿಸಲಾಗಿದೆ. ಹವಾಮಾನವನ್ನು ಪರಿಗಣಿಸಿ ಜಾಕೆಟ್ ಮತ್ತು ಕಂಬಳಿಗಳನ್ನು ತರಬೇಕು. ರ್ಯಾಲಿ ಬಳಿಕ ಪ್ರತಿಯೊಬ್ಬರೂ ಪ್ರಾರಂಭದ ಹಂತಕ್ಕೆ ಹಿಂತಿರುಗಬೇಕಾಗಿದೆ ಎಂದು ರೈತ ಮುಖಂಡರು ಮನವಿ ಮಾಡಿದ್ದಾರೆ.

ರ್ಯಾಲಿಯಲ್ಲಿ ಪಾಲ್ಗೊಳ್ಳುವ ಟ್ರಾಕ್ಟರ್ ಗಳು ಸಿಂಗು ಗಡಿಯಿಂದ ಪ್ರಾರಂಭವಾಗಿ ಸಂಜಯ್ ಗಾಂಧಿ ಸಾರಿಗೆ ನಗರ, ಬವಾನ, ಕುತಬ್‌ಗಢ, ಔಚಾಂಡಿ ಗಡಿ ಮತ್ತು ಖಾರ್ಖೋಡಾ ಟೋಲ್ ಪ್ಲಾಜಾದಲ್ಲಿ ಸಂಚರಿಸುತ್ತದೆ. ಸಂಪೂರ್ಣ ಮಾರ್ಗವು 63 ಕಿಲೋಮೀಟರ್ ಉದ್ದವಿರುತ್ತದೆ. ಟಿಕ್ರಿ ಗಡಿಯಿಂದ ಪ್ರಾರಂಭವಾಗುವ 62 ಕಿ.ಮೀ ಉದ್ದದ ಎರಡನೇ ಮಾರ್ಗವು ನಾಗ್ಲೋಯ್, ನಜಾಫ್‌ಗಢ, ಝೊರೋಡಾ ಗಡಿ ಮತ್ತು ರೋಹ್ಟಕ್ ಬೈಪಾಸ್ ಮತ್ತು ಅಸೋಡಾ ಟೋಲ್ ಪ್ಲಾಜಾ ಮೂಲಕ ಹಾದುಹೋಗಲಿದೆ ಎಂದು ರೈತ ಮುಖಂಡರು ತಿಳಿಸಿದ್ದಾರೆ.

ರ್ಯಾಲಿಯಲ್ಲಿ ಸ್ಥಬ್ಧಚಿತ್ರಗಳು
ಇನ್ನು ರ್ಯಾಲಿಯಲ್ಲಿ ರೈತರ ಹೋರಾಟ, ಧೈರ್ಯ ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ ಎಂದು ರೈತ ಮುಖಂಡರು ಹೇಳಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ರೈತ ಮುಖಂಡರು, ಈ ಟ್ರ್ಯಾಕ್ಟರ್ ರ್ಯಾಲಿ ಐಸಿಹಾಸಿಕವಾದದ್ದು. ರ‍್ಯಾಲಿಯಲ್ಲಿ ಹಳ್ಳಿಯ ಜೀವನ, ರೈತರ ಹೋರಾಟ, ಧೈರ್ಯ ಪ್ರತಿಬಿಂಬಿಸುವ ಸ್ತಬ್ಧಚಿತ್ರಗಳು ಇರಲಿವೆ.  ಟ್ರ್ಯಾಕ್ಟರ್ ಜಾಥಾದಲ್ಲಿ ಭಾಗಿಯಾಗುವ ಟ್ರ್ಯಾಕ್ಟರ್‌ಗಳ ಪೈಕಿ ಶೇ.30ರಷ್ಟು ವಾಹನಗಳಲ್ಲಿ ವಿವಿಧ ವಿಷಯಗಳನ್ನು ಬಿಂಬಿಸುವ ಸ್ತಬ್ಧಚಿತ್ರಗಳು ಅನಾವರಣಗೊಳ್ಳಲಿವೆ. ಭಾರತದಲ್ಲಿ ರೈತ ಚಳವಳಿ, ರೈತ ಮಹಿಳೆಯರ ಪಾತ್ರ, ವಿವಿಧ ರಾಜ್ಯಗಳಲ್ಲಿ ಪಾಲಿಸುತ್ತಿರುವ ಬೇಸಾಯ ಪದ್ಧತಿಗಳನ್ನು ಈ ಸ್ಥಬ್ಧಚಿತ್ರಗಳು ಪ್ರತಿಬಿಂಬಿಸಲಿವೆ.

ಮಹಾರಾಷ್ಟ್ರದ ವಿದರ್ಭ ಭಾಗದ ಕೆಲವು ಮಕ್ಕಳು ರೈತರ ಆತ್ಮಹತ್ಯೆ ವಿಷಯವನ್ನು ಸ್ತಬ್ಧಚಿತ್ರಕ್ಕೆ ಆಯ್ದುಕೊಂಡಿದ್ದು, ರೈತರು ಎದುರಿಸುತ್ತಿರುವ ಕಠಿಣ ಪರಿಸ್ಥಿತಿಯನ್ನು ಆಳುವವರಿಗೆ ವಿವರಿಸುವುದು ಇದರ ಉದ್ದೇಶವಾಗಿದೆ.  ಹಿಮಾಚಲ ಪ್ರದೇಶ, ಜಮ್ಮು–ಕಾಶ್ಮೀರ ಹಾಗೂ ಉತ್ತರಾಖಂಡದ ಸ್ತಬ್ಧಚಿತ್ರಗಳು ಹಣ್ಣು ಕೃಷಿಯ ಮಾಹಿತಿ ನೀಡಲಿವೆ. ಹರಿಯಾಣ, ಪಂಜಾಬ್‌ನ ರೈತರು ಸಾಂಪ್ರದಾಯಿಕ ಹಾಗೂ ಆಧುನಿಕ ತಂತ್ರಜ್ಞಾನದ ಕೃಷಿಯನ್ನು ಪ್ರದರ್ಶಿಸಲಿದ್ದಾರೆ. ಹಾಲು ಕರೆಯುತ್ತಿರುವ ರೈತ ಮಹಿಳೆ, ಚಕ್ಕಡಿ ಓಡಿಸುತ್ತಿರುವ ರೈತನ ಸ್ತಬ್ಧ ಚಿತ್ರಗಳೂ ಇರಲಿವೆ ಎಂದು ಹೇಳಿದ್ದಾರೆ.

ದೆಹಲಿಯ ಗಡಿಗಳಾದ ಸಿಂಘು, ಟಿಕ್ರಿ, ಗಾಜಿಪುರಗಳಿಂದ ರ‍್ಯಾಲಿ ಶುರುವಾಗಲಿದ್ದು, ಕಿಸಾನ್ ಪರೇಡ್’‌ನಲ್ಲಿ ದೇಶದ ವಿವಿಧ ಭಾಗಗಳಿಂದ ಸುಮಾರು 2 ಲಕ್ಷ ಟ್ರ್ಯಾಕ್ಟರ್‌ಗಳು ಭಾಗವಹಿಸಲಿವೆ. ಈ ಪೈಕಿ ಪಂಜಾಬ್‌ ರಾಜ್ಯವೊಂದರಿಂದಲೇ 1 ಲಕ್ಷ ವಾಹನಗಳು ಬರಲಿವೆ. ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳಿಂದ ಸುಮಾರು 25 ಸಾವಿರ ಟ್ರ್ಯಾಕ್ಟರ್‌ಗಳು ಬರುವ ನಿರೀಕ್ಷೆಯಿದೆ. ರ್ಯಾಲಿಯಲ್ಲಿ ಪಾಲ್ಗೊಳ್ಳುವ ಪ್ರತಿ ಟ್ರ್ಯಾಕ್ಟರ್‌ ತ್ರಿವರ್ಣಧ್ವಜ ಹೊಂದಿರಲಿದ್ದು, ಈ ಹಿನ್ನೆಲೆಯಲ್ಲಿ ಜನಪದ ಗೀತೆ ಹಾಗೂ ದೇಶಭಕ್ತಿ ಗೀತೆಗಳು ಮೊಳಗಲಿವೆ. .

ನಿಯಂತ್ರಣ ಕೊಠಡಿ
ಕಾರ್ಯಕ್ರಮ ನಿರ್ವಹಣೆಗೆ ಕೇಂದ್ರೀಯ ಸಮಿತಿಯೊಂದನ್ನು ರಚಿಸಲಾಗಿದೆ. ಇದರಡಿ ಉಪಸಮಿತಿಗಳನ್ನು ರಚಿಸಲಾಗಿದೆ. ವಾಹನಗಳು ಯಾವ ಮಾರ್ಗದಲ್ಲಿ ಸಂಚರಿಸಬೇಕು ಎಂದು ನಿರ್ದೇಶಿಸಲು 2,500 ಸ್ವಯಂಸೇವಕರನ್ನು ನಿಯೋಜಿಸಲಾಗಿದೆ. ದಟ್ಟಣೆ ನೋಡಿಕೊಂಡು ಸ್ವಯಂ ಸೇವಕರ ಸಂಖ್ಯೆ ಹೆಚ್ಚಿಸಲಾಗುವುದು. ಟ್ರ್ಯಾಕ್ಟರ್ ರ‍್ಯಾಲಿ ನಿರ್ವಹಣೆಗೆ ಪ್ರತಿ ಪ್ರತಿಭಟನಾ ಸ್ಥಳದಲ್ಲಿ ನಿಯಂತ್ರಣ ಕೊಠಡಿ (ವಾರ್ ರೂಮ್) ಸ್ಥಾಪಿಸ ಲಾಗಿದೆ. ವೈದ್ಯರು, ಭದ್ರತಾ ಸಿಬ್ಬಂದಿ, ಸಾಮಾಜಿಕ ಜಾಲತಾಣ ವ್ಯವಸ್ಥಾಪಕರನ್ನು ಒಳಗೊಂಡಂತೆ 40 ಸದಸ್ಯರು ಪ್ರತಿ ನಿಯಂತ್ರಣ ಕೊಠಡಿಯಲ್ಲಿ ಇರಲಿದ್ದಾರೆ. ತುರ್ತು ಆರೋಗ್ಯ ಪರಿಸ್ಥಿತಿ ಎದುರಿಸಲು ಮಾರ್ಗದುದ್ದಕ್ಕೂ 40 ಆಂಬುಲೆನ್ಸ್‌ ಗಳನ್ನು ನಿಯೋಜಿಸಲಾಗುತ್ತಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಕಾರ್ಯಕ್ರಮ ಮುಕ್ತಾಯವಾದ ಬಳಿಕ ಮಧ್ಯಾಹ್ನ 12 ಗಂಟೆಯಿಂದ ರ‍್ಯಾಲಿ ಆರಂಭವಾಗಲಿದೆ. ಸಂಜೆ 6 ಗಂಟೆಯೊಳಗೆ ಮುಕ್ತಾಯವಾಗಲಿದೆ. ಟ್ರ್ಯಾಕ್ಟರ್ ರ‍್ಯಾಲಿ ಬಳಿಕ ಪ್ರತಿಭಟನೆಗೆ ಸಂಬಂಧಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ರೈತ ನಾಯಕರು ತಿಳಿಸಿದ್ದಾರೆ.
 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp