ಜೈ ಶ್ರೀರಾಮ್ ವಿವಾದ: ಮಮತಾಗೆ ರಾಮಾಯಣ ಪ್ರತಿ ಕಳುಹಿಸಿದ ಮಧ್ಯಪ್ರದೇಶ ವಿಧಾನಸಭೆ ಹಂಗಾಮಿ ಸ್ಪೀಕರ್!
ಕೊಲ್ಕತ್ತಾದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಜೈ ಶ್ರೀರಾಮ್ ಘೋಷಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ ನಂತರ ಅದು ವಿವಾದವಾಗಿ ಮಾರ್ಪಟ್ಟಿದೆ.
Published: 25th January 2021 09:39 AM | Last Updated: 25th January 2021 12:38 PM | A+A A-

ಮಧ್ಯಪ್ರದೇಶ ವಿಧಾನಸಭೆ ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ
ಭೂಪಾಲ್: ಕೊಲ್ಕತ್ತಾದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಜೈ ಶ್ರೀರಾಮ್ ಘೋಷಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ವ್ಯಕ್ತಪಡಿಸಿದ ನಂತರ ಅದು ವಿವಾದವಾಗಿ ಮಾರ್ಪಟ್ಟಿದ್ದು, ಮಧ್ಯ ಪ್ರದೇಶ ವಿಧಾನಸಭಾ ಹಂಗಾಮಿ ಸ್ಪೀಕರ್ ರಾಮೇಶ್ವರ್ ಶರ್ಮಾ ಮಮತಾ ಬ್ಯಾನರ್ಜಿಗೆ ರಾಮಾಯಣದ ಪ್ರತಿಯೊಂದನ್ನು ಕೋರಿಯರ್ ಮೂಲಕ ಕಳುಹಿಸಿದ್ದಾರೆ.
ಈ ದೇಶ ಭಗವಾನ್ ರಾಮನಿಗೆ ಸೇರಿದ್ದು, ರಾಮನನ್ನು ನಿರ್ಲಕ್ಷಿಸಿದ ಪ್ರತಿಯೊಬ್ಬರೂ ಸಾಕಷ್ಟು ಕಷ್ಟಗಳನ್ನು ಅನುಭವಿಸಿದ್ದಾರೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಕೂಡಾ ತಮ್ಮ ತಪ್ಪನ್ನು ಅರಿತುಕೊಂಡು ರಾಮಾಯಾಣವನ್ನು ಓದಲು ಪ್ರಾರಂಭಿಸುತ್ತಾರೆ ಎಂಬ ನಂಬಿಕೆಯಿಂದ ರಾಮಾಯಣ ಪ್ರತಿಯನ್ನು ಕಳುಹಿಸಿರುವುದಾಗಿ ಶರ್ಮಾ ಹೇಳಿದ್ದಾರೆ.
ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್, ಸಂವಿಧಾನದಲ್ಲಿ ಶ್ರೀರಾಮ ಉಲ್ಲೇಖಿಸಿದ್ದಾರೆ. ಮಹಾತ್ಮ ಗಾಂಧಿ ದೇಶವನ್ನು ರಾಮ ರಾಜ್ಯ ಮಾಡಲು ಸಂಕಲ್ಪ ತೊಡುವಂತೆ ಹೇಳುತ್ತಾರೆ. ಆದರೆ. ಮಮತಾ ಬ್ಯಾನರ್ಜಿ ಜೈ ಶ್ರೀರಾಮ್ ಘೋಷಣೆಗೆ ಆಕ್ಷೇಪ ವ್ಯಕ್ತಪಡಿಸುತ್ತಾರೆ ಎಂದರೆ ಆಶ್ಚರ್ಯ ಹಾಗೂ ನೋವಾಗಿದೆ. ಬಾಂಗ್ಲಾದೇಶದ ಮುಸ್ಲಿಂರ ವೋಟ್ ಬ್ಯಾಂಕ್ ಮನವೊಲಿಸುವ ಕಾರಣದಿಂದ ಜೈ ಶ್ರೀರಾಮ್ ಘೋಷಣೆಗೆ ಮಮತಾ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಅವರು ಟೀಕಿಸಿದ್ದಾರೆ.
ಶನಿವಾರ ಕೊಲ್ಕತ್ತಾದಲ್ಲಿ ನಡೆದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮ ವರ್ಷಾಚರಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಜೈ ಶ್ರೀರಾಮ್ ಘೋಷಣೆ ಮೊಳಗಿದಾಗ ಮಧ್ಯಪ್ರವೇಶಿಸಿದ ಮಮತಾ ಬ್ಯಾನರ್ಜಿ, ಇದು ರಾಜಕೀಯ ಸಮಾರಂಭವಲ್ಲಾ, ಸರ್ಕಾರಿ ಕಾರ್ಯಕ್ರಮ, ಆ ರೀತಿ ಕೂಗಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.