ಮೋದಿಯೇ ಬಾಲಕೋಟ್ ದಾಳಿಯ ಮಾಹಿತಿ ಅರ್ನಬ್ ಗೆ ನೀಡಿದ್ದಾರೆ: ಪ್ರಧಾನಿ ವಿರುದ್ಧ ರಾಹುಲ್ ವಾಗ್ದಾಳಿ
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ 2019 ರಲ್ಲಿ ಪಾಕಿಸ್ತಾನದ ಬಾಲಕೋಟ್ ಮೇಲೆ ನಡೆದ ವೈಮಾನಿಕ ದಾಳಿಯ ಬಗ್ಗೆ ಮೊದಲೇ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಲಭ್ಯವಾಗುವಂತೆ ಮಾಡಿದ್ದಾರೆ...
Published: 25th January 2021 03:21 PM | Last Updated: 25th January 2021 05:18 PM | A+A A-

ರಾಹುಲ್ ಗಾಂಧಿ ರೋಡ್ ಶೋ
ಕಾರೂರು: ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ 2019 ರಲ್ಲಿ ಪಾಕಿಸ್ತಾನದ ಬಾಲಕೋಟ್ ಮೇಲೆ ನಡೆದ ವೈಮಾನಿಕ ದಾಳಿಯ ಬಗ್ಗೆ ಮೊದಲೇ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರಿಗೆ ಲಭ್ಯವಾಗುವಂತೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾಯಕ ರಾಹುಲ್ ಗಾಂಧಿ ಸೋಮವಾರ ಆರೋಪಿಸಿದ್ದಾರೆ.
ಇಂದು ತಮಿಳುನಾಡಿನಲ್ಲಿ ಮೂರನೇ ಹಾಗೂ ಅಂತಿಮ ದಿನ ರೋಡ್ ಶೋ ನಡೆಸಿ ಮಾತನಾಡಿದ ಕಾಂಗ್ರೆಸ್ ಮಾಜಿ ಅಧ್ಯಕ್ಷ, ಪ್ರಧಾನಿ ಮತ್ತು ರಕ್ಷಣಾ ಸಚಿವರು ಸೇರಿದಂತೆ ಕೇವಲ ಐದು ಜನರಿಗೆ ಮಾತ್ರ ಯೋಜಿತ ವಾಯು ದಾಳಿಯ ಬಗ್ಗೆ ಮಾಹಿತಿ ಇರುತ್ತದೆ ಎಂದರು.
"ಬಾಲಕೋಟ್ ಮೇಲೆ ಭಾರತ ವಾಯುದಾಳಿ ನಡೆಯುವ ಮೂರು ದಿನಗಳ ಮುನ್ನೇ ಪತ್ರಕರ್ತರೊಬ್ಬರಿಗೆ ತಿಳಿದಿತ್ತು ಮತ್ತು ಈ ಬಗ್ಗೆ ಸ್ವತಃ ಪ್ರಧಾನಿಯೇ ಮಾಹಿತಿ ನೀಡಿದ್ದಾರೆ. ಇದರಿಂದ ನಮ್ಮ ಐಎಎಫ್ ಪೈಲಟ್ಗಳ ಜೀವಕ್ಕೆ 'ಅಪಾಯ' ತಂದಿದ್ದರು ಎಂದು ರಾಹುಲ್ ಆರೋಪಿಸಿದ್ದಾರೆ. ಆದರೆ ಈ ಬಗ್ಗೆ ಪ್ರಧಾನ ಕಚೇರಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕೇಂದ್ರ ಸರ್ಕಾರವು ನಮ್ಮ ಆರ್ಥಿಕತೆಯನ್ನು ನಾಶಮಾಡಿದೆ. ನಮ್ಮ ಯುವಕರಿಗೆ ಕೆಲಸ ಸಿಗುತ್ತಿಲ್ಲ. ಇದು ನಮ್ಮ ಯುವಕರ ತಪ್ಪಲ್ಲ. ಪ್ರಧಾನಿ ಮೋದಿ ತೆಗೆದುಕೊಂಡ ತಪ್ಪು ನಿರ್ಧಾರಗಳಿಂದ ಈ ಸನ್ನಿವೇಶ ನಿರ್ಮಾಣವಾಗಿದೆ ಎಂದು ರಾಹುಲ್ ಆರೋಪಿಸಿದ್ದಾರೆ.
ನಮ್ಮ ರೈತರ ಮೇಲೆಯೇ ಪ್ರಧಾನಿ ಮೋದಿ ದಾಳಿ ನಡೆಸಿದ್ದಾರೆ. ಭಾರತದ ಕೃಷಿ ಕ್ಷೇತ್ರವನ್ನು ದೊಡ್ಡ ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸುವ ಸಲುವಾಗಿ ಮೂರು ಹೊಸ ಕಾಯ್ದೆಗಳನ್ನು ತಂದಿದ್ದಾರೆ. ರೈತರು ತಮ್ಮನ್ನು ರಕ್ಷಿಸಿಕೊಳ್ಳುವುದಕ್ಕೊಸ್ಕರ ನ್ಯಾಯಾಲಯಕ್ಕೆ ಹೋಗಲು ಸಾಧ್ಯವಿಲ್ಲ ಎಂಬುದಾಗಿ ಹೊಸ ಕಾಯ್ದೆಗಳು ಸ್ಪಷ್ಟವಾಗಿ ಹೇಳುತ್ತವೆ ಎಂದಿದ್ದಾರೆ.