ದೆಹಲಿಯಲ್ಲಿ ತಾರಕಕ್ಕೇರಿದ ರೈತರ 'ಗಣ ಕಹಳೆ': ಮುಂದುವರಿದ ಟ್ರ್ಯಾಕ್ಟರ್ ರ್ಯಾಲಿ, ಪೊಲೀಸರಿಂದ ಲಾಠಿಚಾರ್ಜ್, ಅಶ್ರುವಾಯು ಪ್ರಯೋಗ!

ಹಿಂದಿ ಚಲನಚಿತ್ರದ ದೇಶಭಕ್ತಿ ಗೀತೆಯನ್ನು ಡಿಜೆ ಸೆಟ್ ನಲ್ಲಿ ಹಾಕಿ ಅತ್ಯುತ್ಸಾಹದಿಂದ ಕಿಸಾನ್ ಏಕತಾ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾ ದೆಹಲಿಯ ಗಡಿಭಾಗ ಗಾಜಿಪುರದಿಂದ ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದಾರೆ.

Published: 26th January 2021 11:57 AM  |   Last Updated: 26th January 2021 01:04 PM   |  A+A-


Farmers on tractors near Ghazipur border.

ಗಾಜಿಪುರ್ ಗಡಿಯಲ್ಲಿ ಟ್ರ್ಯಾಕ್ಟರ್ ಜೊತೆ ರೈತರು

Posted By : Sumana Upadhyaya
Source : The New Indian Express

ನವದೆಹಲಿ: ಹಿಂದಿ ಚಲನಚಿತ್ರದ ದೇಶಭಕ್ತಿ ಗೀತೆಯನ್ನು ಡಿಜೆ ಸೆಟ್ ನಲ್ಲಿ ಹಾಕಿ ಅತ್ಯುತ್ಸಾಹದಿಂದ ಕಿಸಾನ್ ಏಕತಾ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾ ದೆಹಲಿಯ ಗಡಿಭಾಗ ಗಾಜಿಪುರದಿಂದ ರೈತರು ಟ್ರ್ಯಾಕ್ಟರ್ ಮೆರವಣಿಗೆ ಆರಂಭಿಸಿದ್ದಾರೆ.

ನಮಗೆ ಪೊಲೀಸರು ಅನುಮತಿ ನೀಡಿದ್ದಾರೋ, ಇಲ್ಲವೋ ನಾವು ಟ್ರ್ಯಾಕ್ಟರ್ ಮೆರವಣಿಗೆ ಹೋಗುತ್ತೇವೆ ಎಂದು ಭಾರತದ ತ್ರಿವರ್ಣ ಧ್ವಜದ ಬಣ್ಣದ ಬಲೂನ್ ಗಳನ್ನು ಕಟ್ಟಿದ ಟ್ರ್ಯಾಕ್ಟರ್ ಗಳನ್ನು ರಸ್ತೆಗಿಳಿಸಿಯೇ ಬಿಟ್ಟರು ರೈತರು. ಒಬ್ಬರ ಹಿಂದೆ ಒಬ್ಬರು ಸಾಗುತ್ತಿದ್ದಾರೆ.

ಇಂದು ಬೆಳಗ್ಗೆ ರಾಜಧಾನಿ ದೆಹಲಿಯಲ್ಲಿ ಕವಿದಿದ್ದ ದಟ್ಟ ಮಂಜು ಮರೆಯಾಗುತ್ತಿದ್ದಂತೆ ರೈತರು ಉಪಾಹಾರ ಮುಗಿಸಿ ಕಿಸಾನ್ ಟ್ರ್ಯಾಕ್ಟರ್ ಪರೇಡ್ ಗೆ ಸಿದ್ದವಾದರು. ಇಂದು ಬೆಳಗ್ಗೆ 11 ಗಂಟೆಯ ಮೇಲೆ ರೈತರ ರ್ಯಾಲಿಗೆ ಅನುಮತಿಯಿದ್ದರೂ ಕೂಡ ಅದಕ್ಕೂ ಮೊದಲೇ ಹೊರಟಿದ್ದರಿಂದ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ನುಗ್ಗಿ ರೈತರು ಬಂದಿದ್ದರಿಂದ ಘರ್ಷಣೆಯ ವಾತಾವರಣ ಉಂಟಾಯಿತು.

ಸಾವಿರಾರು ಟ್ರ್ಯಾಕ್ಟರ್ ಗಳು ರ್ಯಾಲಿಯಲ್ಲಿ ಮುಂದೆ ಸಾಗುತ್ತಿವೆ. ಗಾಜಿಪುರ ಗಡಿಯಿಂದ ವಿವಿಧ ಗುಂಪುಗಳಲ್ಲಿ ರೈತರು ಜೈ ಜವಾನ್, ಜೈ ಕಿಸಾನ್ ಘೋಷಣೆ ಕೂಗುತ್ತಾ ಸಾಗುತ್ತಿದ್ದಾರೆ.

ರೈತರು ಅನುಮತಿ ಕೇಳಿದ್ದು ಬೆಳಗ್ಗೆ 11 ಗಂಟೆಯ ಮೊದಲು, ಆದರೆ ಕೆಲವರು ಅದಕ್ಕೂ ಮೊದಲೇ ಬ್ಯಾರಿಕೇಡ್ ಮುರಿದು ನುಗ್ಗಿದರು ಎಂದು ಉತ್ತರ ಪ್ರದೇಶದ ಪೊಲೀಸರೊಬ್ಬರು ಆರೋಪಿಸಿದರು. ರೈತರು ಮುಖ್ಯ ನಗರದೊಳಗೆ ನುಗ್ಗಬಹುದು ಎಂಬ ನಿರೀಕ್ಷೆಯಿಂದ ದೆಹಲಿ ಪೊಲೀಸರು ಪ್ರವೇಶವನ್ನು ತಡೆಯಲು ಜೆಸಿಬಿ ಯಂತ್ರವನ್ನು ನಿಯೋಜಿಸಿದ್ದಾರೆ.

ಕೆಲವು ರೈತರು ವಿವಿಧ ಸಂಘಟನೆಗಳ ಧ್ವಜಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಾ ನಡೆದುಕೊಂಡು ಹೋಗುತ್ತಿದ್ದಾರೆ, ಕೆಲವರು ಕುದುರೆ ಮೇಲೆ, ಇನ್ನು ಕೆಲವರು ಬೈಕ್ ನಲ್ಲಿ ಸಾಗುತ್ತಿದ್ದಾರೆ. ಸ್ಥಳೀಯರು ದಾರಿಯಲ್ಲಿ ಹೋಗುವವರು ಆಹಾರ, ನೀರು ಒದಗಿಸುತ್ತಿದ್ದಾರೆ. 

ಅಶ್ರುವಾಯು, ಲಾಠಿಚಾರ್ಜ್: ಇನ್ನು ಸಿಂಘು ಮತ್ತು ಟಿಕ್ರಿ ಗಡಿಭಾಗದಲ್ಲಿ ಪೊಲೀಸ್ ಬ್ಯಾರಿಕೇಡ್ ಮುರಿದು ಹೋಗಲು ಪ್ರಯತ್ನಿಸಿದವರ ಮೇಲೆ ಪೊಲೀಸರು ಅಶ್ರವಾಯು, ಲಾಠಿಚಾರ್ಜ್ ಪ್ರಯೋಗಿಸಿದ ಪ್ರಸಂಗ ನಡೆದಿದೆ. 

ರಾಜಪಥ್ ನಲ್ಲಿ ಗಣರಾಜ್ಯೋತ್ಸವ ಮುಗಿದ ಬಳಿಕವಷ್ಟೆ ತಮಗೆ ಟ್ರ್ಯಾಕ್ಟರ್ ನಲ್ಲಿ ಹೋಗಲು ಅನುಮತಿ ನೀಡಲಾಗಿದೆ ಎಂದು ಪೊಲೀಸರು ರೈತರ ಮನವೊಲಿಸಲು ಪ್ರಯತ್ನಿಸಿದರೂ ಕೂಡ ಅವರ ಮಾತು ಕೇಳದೆ ಮುನ್ನುಗ್ಗಿದ್ದರಿಂದ ಪೊಲೀಸರು ಅಶ್ರುವಾಯು, ಲಾಠಿಚಾರ್ಜ್ ನಡೆಸಿದ ಪ್ರಸಂಗ ನಡೆಯಿತು.

ಟ್ರ್ಯಾಕ್ಟರ್ ರ್ಯಾಲಿ ಹಿನ್ನೆಲೆಯಲ್ಲಿ ಪೊಲೀಸರ ಭದ್ರತಾ ಕೋಟೆ ಭೇದಿಸಿ ರೈತರು ರಾಜಧಾನಿಗೆ ಲಗ್ಗೆಯಿಟ್ಟ ಪರಿಣಾಮ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ನಂತರ ರೈತರ ಟ್ರ್ಯಾಕ್ಟರ್ ರ್ಯಾಲಿ ರಾಜಧಾನಿ ಪ್ರವೇಶಿಸಲು ಸಮಯ ನಿಗದಿಯಾಗಿತ್ತು. ಆದರೆ ಪೊಲೀಸರು ಆಯಕಟ್ಟಿನ ಸ್ಥಳಗಳನ್ನು ಅಳವಡಿಸಿದ್ದ ಬ್ಯಾರಿಕೇಡ್ ಗಳನ್ನು ಕಿತ್ತೆಸೆದು ನಿಗದಿಗಿಂತ ಮುನ್ನವೇ ರಾಜಧಾನಿ ಪ್ರವೇಶಿಸಿದರು.

ದೆಹಲಿ-ಹರ್ಯಾಣ ರಾಜ್ಯಗಳನ್ನು ಪ್ರತ್ಯೇಕಿಸುವ ಸಿಂಘು ಗಡಿಯಲ್ಲಿ ಮತ್ತು ರಾಷ್ಟ್ರ ರಾಜಧಾನಿಯ ಪಶ್ಚಿಮದಲ್ಲಿರುವ ಟೆಕ್ರಿ ಗಡಿಯಲ್ಲಿ ಸದ್ಯ ಆತಂಕದ ವಾತಾವರಣ ನಿರ್ಮಾಣವಾಗಿದೆ. 

ಸದ್ಯ ರೈತರ ಟ್ರ್ಯಾಕ್ಟರ್ ರ್ಯಾಲಿ ಗಾಜಿಪುರ್ ಗಡಿಭಾಗದಿಂದ ಸರೈ ಕಾಳೆ ಖಾನ್ ಐಟಿಒ ಬಳಿ ತಲುಪಿದೆ. 
 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp