ಕೃಷಿ ಕಾಯ್ದೆಗೆ ವಿರೋಧ: ದೆಹಲಿ ಪ್ರವೇಶಿಸಿದ ರೈತರ ಟ್ರ್ಯಾಕ್ಟರ್ ರ್ಯಾಲಿ, ಗಡಿ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣ

ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯ ಹಿನ್ನೆಲೆಯಲ್ಲಿ ಭದ್ರತಾ ಕೋಟೆ ಭೇದಿಸಿ ಮಂಗಳವಾರ ಮುಂಜಾನೆ ರೈತರು ರಾಜಧಾನಿಗೆ ಲಗ್ಗೆ ಇಟ್ಟಿದ್ದು, ಪರಿಣಾಮ ಉದ್ವಿಗ್ನ ಸ್ಥಿತಿ ಉಂಟಾಗಿದೆ...

Published: 26th January 2021 09:33 AM  |   Last Updated: 26th January 2021 10:22 AM   |  A+A-


tractor rally

ದೆಹಲಿ ಟ್ರ್ಯಾಕ್ಟರ್ ರ್ಯಾಲಿ

Posted By : Manjula VN
Source : ANI

ನವದೆಹಲಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ರೈತ ಸಂಘಟನೆಗಳು ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ನಡೆಸುತ್ತಿರುವ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ದೆಹಲಿ ಪ್ರವೇಶಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ. 

ರೈತರ ಟ್ರ್ಯಾಕ್ಟರ್ ಗಳ ಮೇಲೆ ರಾಷ್ಟ್ರಧ್ವಜ ಹಾಗೂ ರೈತ ಸಂಘಟನೆಗಳ ಧ್ವಜಗಳು ಕಂಡು ಬರುತ್ತಿದ್ದು, ಸಿಂಘು ಗಡಿ ಮೂಲಕ ದೆಹಲಿ ಪ್ರವೇಶಿಸಿರುವ ರೈತರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಗಳ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. 

ದೆಹಲಿ ತಲುಪಿರುವ ರೈತರ ಟ್ರ್ಯಾಕ್ಟರ್ ರ್ಯಾಲಿ ಇದೀಗ ಕಾಂಜವಾಲಾ ಚೌಕ್-ಔಚಾಂಡಿ ಗಡಿ-ಕೆಎಂಪಿ-ಜಿಟಿ ರಸ್ತೆ ಜಂಕ್ಷನ್ ಕಡೆಗೆ ಸಾಗುತ್ತಿದೆ ಎಂದು ವರದಿಗಳು ತಿಳಿಸಿವೆ. 

ರೈತರ ಬೃಹತ್ ಟ್ರ್ಯಾಕ್ಟರ್ ರ್ಯಾಲಿಗೆ ಷರತ್ತು ಬದ್ಧ ಅನುಮತಿ ನೀಡಿರುವ ದೆಹಲಿ ಪೊಲೀಸರು ಮೂರು ಮಾರ್ಗಗಳನ್ನು ನಿಗದಿಪಡಿಸಿದ್ದಾರೆ. ವಿವಿಧ ರಾಜ್ಯಗಳ 2 ಲಕ್ಷಕ್ಕೂ ಅಧಿಕ ಟ್ರ್ಯಾಕ್ಟರ್ ಗಳು ಈ ರ್ಯಾಲಿಯಲ್ಲಿ ಭಾಗಿಯಾಗುತ್ತಿದ್ದಾರೆ. 

ಭದ್ರತಾಕೋಟೆ ಭೇದಿಸಿ ರೈತರ ಲಗ್ಗೆ: ರಾಜಧಾನಿಯಲ್ಲಿ ಉದ್ವಿಗ್ನ ಸ್ಥಿತಿ
ದೆಹಲಿಯಲ್ಲಿ ಟ್ರ್ಯಾಕ್ಟರ್ ರ್ಯಾಲಿಯ ಹಿನ್ನೆಲೆಯಲ್ಲಿ ಭದ್ರತಾ ಕೋಟೆ ಭೇದಿಸಿ ಮಂಗಳವಾರ ಮುಂಜಾನೆ ರೈತರು ರಾಜಧಾನಿಗೆ ಲಗ್ಗೆ ಇಟ್ಟಿದ್ದು, ಪರಿಣಾಮ ಉದ್ವಿಗ್ನ ಸ್ಥಿತಿ ಉಂಟಾಗಿದೆ.

ರಾಜಪಥದಲ್ಲಿ ಗಣರಾಜ್ಯೋತ್ಸವ ಪರೇಡ್ ಮುಕ್ತಾಯದ ನಂತರ ರೈತರ ಟ್ರ್ಯಾಕ್ಟರ್ ರ್ಯಾಲಿ ರಾಜಧಾನಿ ಪ್ರವೇಶಿಸಲು ಸಮಯ ನಿಗದಿಯಾಗಿತ್ತು. ಆದರೆ ಪೊಲೀಸರು ಆಯಕಟ್ಟಿನ ಸ್ಥಳಗಳಲ್ಲಿ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಕಿತ್ತೆಸೆದ ಪ್ರತಿಭಟನಾಕಾರರು ನಿಗದಿತ ಅವಧಿಗಿಂತ ಮುನ್ನವೇ ರಾಜಧಾನಿಯನ್ನು ಪ್ರವೇಶಿಸಿದರು.

ದೆಹಲಿ- ಹರಿಯಾಣ ರಾಜ್ಯಗಳನ್ನು ಪ್ರತ್ಯೇಕಿಸುವ ಸಿಂಘು ಗಡಿಯಲ್ಲಿ ಮತ್ತು ರಾಷ್ಟ್ರ ರಾಜಧಾನಿಯ ಪಶ್ಚಿಮದಲ್ಲಿರುವ ಟಿಕ್ರಿ ಗಡಿಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ರಾಷ್ಟ್ರಧ್ವಜಗಳನ್ನು ಹಿಡಿದ ಸಾವಿರಾರು ಮಂದಿ ಜಾಥಾದಲ್ಲಿ ಆಗಮಿಸುತ್ತಿದ್ದಾರೆಂದು ಹೇಳಲಾಗುತ್ತಿದೆ. 

ಗಡಿ ಪ್ರವೇಶಿಸುತ್ತಿದ್ದಂತೆಯೇ ರೈತರ ಮನವೊಲಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಕೆಲ ರೈತ ಸಂಘಟನೆಗಳು ಇದಕ್ಕೆ ಒಪ್ಪಲಿಲ್ಲ. ಸ್ಥಳದಲ್ಲಿ ಪೊಲೀಸರು ಹಾಕಿದ್ದ ಬ್ಯಾರಿಕೇಡ್ ಗಳನ್ನು ತಳ್ಳಿ ಏಕಾಏಕಿ ಒಳನುಗ್ಗಿದರು  ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

41 ಒಕ್ಕೂಟಗಳ ಬೆಂಬಲದೊಂದಿಗೆ ಸಂಯುಕ್ತ ಕಿಸಾನ್ ಮೋರ್ಚಾ ಸದಸ್ಯರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಬ್ಯಾರಿಕೇಡ್ ಗಳನ್ನು ತಳ್ಳಿದವರು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿಯ ಸದಸ್ಯರು ಎಂದು ಹೇಳಲಾಗುತ್ತಿದೆ. 

ಪೊಲೀಸರು ದಾರಿ ಮಾಡಿಕೊಡುತ್ತಿದ್ದಂತೆಯೇ ಟ್ರ್ಯಾಕ್ಟರ್ ರ್ಯಾಲಿಯನ್ನು ಆರಂಭಿಸಬಹುದು ಎಂದು ಹೇಳಲಾಗಿತ್ತು. ಆದರೆ, ಅನುಮತಿಗೂ ಮೊದಲೇ ರೈತರು ಬ್ಯಾರಿಕೇಡ್ ಗಳನ್ನು ಧ್ವಂಸಗೊಳಿಸಿ ದೆಹಲಿ ಪ್ರವೇಶಿಸಿದ್ದಾರೆ. ಇದರಿಂದ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ ಎಂದು ತಿಳಿದುಬಂದಿದೆ. 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp