ದೆಹಲಿ ಹಿಂಸಾಚಾರ: ಕೇಂದ್ರ ಗೃಹ ಕಾರ್ಯದರ್ಶಿಯಿಂದ ಅಮಿತ್ ಶಾಗೆ ಮಾಹಿತಿ
ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿ ನಗರದೊಳಗೆ ಪ್ರವೇಶಿಸಿದ ನಂತರ ಭಾರಿ ಹಿಂಸಾಚಾರ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ...
Published: 26th January 2021 07:46 PM | Last Updated: 26th January 2021 07:46 PM | A+A A-

ಅಮಿತ್ ಶಾ
ನವದೆಹಲಿ: ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿ ನಗರದೊಳಗೆ ಪ್ರವೇಶಿಸಿದ ನಂತರ ಭಾರಿ ಹಿಂಸಾಚಾರ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಮಾಹಿತಿ ನೀಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರೈತರು ಬ್ಯಾರಿಕೇಡ್ ಗಳನ್ನು ಮುರಿದು ಕೆಂಪು ಕೋಟೆಗೆ ನುಗ್ಗಿದ ಹಿನ್ನೆಲೆಯಲ್ಲಿ ಇಂದು ಗೃಹ ಸಚಿವರ ನಿವಾಸದಲ್ಲಿ ತುರ್ತು ಉನ್ನತ ಮಟ್ಟದ ಸಭೆ ನಡೆಸಲಾಯಿತು. ಈ ವೇಳೆ ಭಲ್ಲಾ ಅವರು ರಾಷ್ಟ್ರ ರಾಜಧಾನಿಯಲ್ಲಿ ಸದ್ಯದ ಪರಿಸ್ಥಿತಿ ಮತ್ತು ಶಾಂತಿ ಕಾಪಾಡಲು ದೆಹಲಿ ಪೊಲೀಸರು ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಸಭೆಯಲ್ಲಿ ದೆಹಲಿಯ ವಿವಿಧ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಕೇಂದ್ರ ಭದ್ರತಾ ಪಡೆಗಳನ್ನು ನಿಯೋಜಿಸಲು ಮತ್ತು ದೆಹಲಿಯ ಕೆಲವು ಭಾಗಗಳಲ್ಲಿ ಇಂಟರ್ ನೆಟ್ ಸೇವೆ ಸ್ಥಗತಿಗೊಳಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮುನ್ನ ದೆಹಲಿ ಪೊಲೀಸ್ ಉನ್ನತ ಅಧಿಕಾರಿಗಳು ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರನ್ನು ಭೇಟಿಯಾಗಿ ರಾಷ್ಟ್ರ ರಾಜಧಾನಿಯ ಭದ್ರತಾ ಪರಿಸ್ಥಿತಿಯ ಬಗ್ಗೆ ವಿವರ ನೀಡಿದ್ದರು.