ಕೆಂಪು ಕೋಟೆಯಲ್ಲಿ ಸಿಖ್ ಧ್ವಜ ಹಾರಿಸಿದ ದೀಪ್ ಸಿಧು ಜತೆ 'ಯಾವುದೇ ಸಂಬಂಧವಿಲ್ಲ': ಬಿಜೆಪಿ ಸಂಸದ ಸನ್ನಿ ಡಿಯೋಲ್
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದಾರಿ....
Published: 27th January 2021 03:17 PM | Last Updated: 27th January 2021 03:17 PM | A+A A-

ಸನ್ನಿ ಡಿಯೋಲ್, ಪ್ರಧಾನಿ ಮೋದಿ, ದೀಪ್ ಸಿಧು
ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ದಾರಿ ತಪ್ಪಿಸಿದ ನಟ ಹಾಗೂ ಬಿಜೆಪಿ ಕಾರ್ಯಕರ್ತ ದೀಪ್ ಸಿಧುಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರು ಬುಧವಾರ ಹೇಳಿದ್ದಾರೆ.
ಗಣರಾಜ್ಯೋತ್ಸವದಂದು ರೈತರ ಟ್ರ್ಯಾಕ್ಟರ್ ಪರೇಡ್ ವೇಳೆ ದೀಪ್ ಸಿಧು ಕೆಂಪು ಕೋಟೆಗೆ ನುಗ್ಗಿ, ಸಿಖ್ ಧ್ವಜ ಹಾರಿಸುವಂತೆ ಒಬ್ಬ ವ್ಯಕ್ತಿಗೆ ಧ್ವಜವನ್ನು ಹಸ್ತಾಂತರಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ದೀಪ್ ಸಿಧು ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ರೈತ ಮುಖಂಡರು, ದೀಪ್ ಸಿಧುಗೆ ರಾಜಕೀಯ ನಂಟು ಇದ್ದು, ಅವರು ಭಾರತೀಯ ಜನತಾ ಪಕ್ಷದ ಕಾರ್ಯಕರ್ತ ಎಂದು ಪ್ರತಿಪಾದಿಸಿದ್ದಾರೆ.
ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ಬಳಿಕ, ಅದರ ವಿಡೋಯವನ್ನು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿರುವ ದೀಪ್ ಸಿಧು, ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ನಾನು ಮತ್ತು ನನ್ನ ಬೆಂಬಲಿಗರು ರಾಷ್ಟ್ರಧ್ವಜವನ್ನು ತೆಗೆದುಹಾಕಿಲ್ಲ. ಆದರೆ ಕೆಂಪು ಕೋಟೆ ಮೇಲೆ ಸಾಂಕೇತಿಕ ಪ್ರತಿಭಟನಾರ್ಥವಾಗಿ ನಿಶಾನ್ ಸಾಹಿಬ್ ಧ್ವಜವನ್ನು ಹಾರಿಸಿದ್ದೇವೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಭಾರತೀಯ ಕಿಸಾನ್ ಯೂನಿಯನ್ ರಾಕೇಶ್ ವಕ್ತಾರ ರಾಕೇಶ್ ಟಿಕೈಟ್ ಅವರು, ಸಿಧು ಸಿಖ್ ಅಲ್ಲ, ಅವರು ಬಿಜೆಪಿಯ ಕಾರ್ಯಕರ್ತ ಎಂದು ಹೇಳಿದ್ದಾರೆ. ಅಲ್ಲದೆ ಸಿಧು, ಬಿಜೆಪಿ ಸಂಸದ ಸನ್ನಿ ಡಿಯೋಲ್ ಮತ್ತು ಪ್ರಧಾನಿ ಮೋದಿ ಅವರ ಜತೆ ಇರುವ ಫೋಟೋವನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಸನ್ನಿ ಡಿಯೋಲ್, ನಟ ಹಾಗೂ ಕಾರ್ಯಕರ್ತ ದೀಪ್ ಸಿಧು ಜತೆ ನನಗೆ "ಯಾವುದೇ ಸಂಬಂಧವಿಲ್ಲ". "ಕೆಂಪು ಕೋಟೆಯಲ್ಲಿ ನಡೆದ ಘಟನೆಯಿಂದ ನನಗೆ ತುಂಬಾ ಬೇಸರವಾಗಿದೆ, ಡಿಸೆಂಬರ್ 6 ರಂದೇ ನನಗೂ ದೀಪ್ ಸಿಧುಗೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಫೇಸ್ಬುಕ್ ಮೂಲಕ ಸ್ಪಷ್ಟಪಡಿಸಿದ್ದೇನೆ" ಎಂದು ಅವರು ಟ್ವೀಟ್ ಮಾಡಿದ್ದಾರೆ.