ಕೆಂಪು ಕೋಟೆ, ಸಿಂಘು ಗಡಿಭಾಗದಲ್ಲಿ ತೀವ್ರ ಭದ್ರತೆ: ಅಹಿತಕರ ಘಟನೆ ಪುನರಾವರ್ತಿಸದಂತೆ ಮುನ್ನೆಚ್ಚರಿಕೆ
ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರ ಟ್ರ್ಯಾಕ್ಟರ್ ರ್ಯಾಲಿ ರಣರಂಗವಾಗಿ ಮಾರ್ಪಟ್ಟು ರಾಷ್ಟ್ರ ರಾಜಧಾನಿ ದೆಹಲಿಯ ಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ದೆಹಲಿ-ಹರ್ಯಾಣ ಗಡಿಭಾಗದ ಸಿಂಘು ಗಡಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.
Published: 27th January 2021 11:28 AM | Last Updated: 27th January 2021 01:20 PM | A+A A-

ನಿನ್ನೆ ಸಿಂಘು ಗಡಿಭಾಗದಿಂದ ಹೊರಟ ಟ್ರ್ಯಾಕ್ಟರ್ ರ್ಯಾಲಿಯ ದೃಶ್ಯ
ನವದೆಹಲಿ: ಗಣರಾಜ್ಯೋತ್ಸವ ದಿನ ಪ್ರತಿಭಟನಾ ನಿರತ ರೈತರ ಟ್ರ್ಯಾಕ್ಟರ್ ರ್ಯಾಲಿ ರಣರಂಗವಾಗಿ ಮಾರ್ಪಟ್ಟು ರಾಷ್ಟ್ರ ರಾಜಧಾನಿ ದೆಹಲಿಯ ಸ್ಥಿತಿ ಉದ್ವಿಗ್ನವಾಗಿರುವ ಹಿನ್ನೆಲೆಯಲ್ಲಿ ದೆಹಲಿ-ಹರ್ಯಾಣ ಗಡಿಭಾಗದ ಸಿಂಘು ಗಡಿಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಇಲ್ಲಿಯೇ ಕಳೆದ ಎರಡು ತಿಂಗಳಿನಿಂದ ರೈತರು ಕೇಂದ್ರ ಸರ್ಕಾರದ ನೂತನ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪ್ರತಿಭಟನಾ ನಿರತ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭದ್ರತಾ ಪಡೆಯನ್ನು ನಿಯೋಜಿಸಲಾಗಿದೆ. ಈ ಬಗ್ಗೆ ಎಎನ್ಐ ಸುದ್ದಿಸಂಸ್ಥೆ ಜೊತೆ ಮಾತನಾಡಿದ ಪಂಜಾಬ್ ನ ಅಮೃತಸರದ ರೈತ ವಾಜಿರ್ ಸಿಂಗ್, ರೈತರ ಟ್ರ್ಯಾಕ್ಟರ್ ರ್ಯಾಲಿ ಯಶಸ್ವಿಯಾಗಿದೆ, ಕೇಂದ್ರ ಸರ್ಕಾರ ಕೃಷಿ ಕಾಯ್ದೆಯನ್ನು ಹಿಂತೆಗೆದುಕೊಂಡ ನಂತರ ತಮ್ಮ ಊರಿಗೆ ವಾಪಸ್ ಆಗುವುದಾಗಿ ಹೇಳಿದ್ದಾರೆ.
ಕೆಲವು ಸ್ಥಳಗಳಲ್ಲಿ ಸಣ್ಣಪುಟ್ಟ ಹಿಂಸಾಚಾರ ಘಟನೆಗಳು ನಡೆದಿದ್ದು ಬಿಟ್ಟರೆ ನಮ್ಮ ಟ್ರ್ಯಾಕ್ಟರ್ ರ್ಯಾಲಿ ಬಹುತೇಕ ಯಶಸ್ವಿಯಾಗಿದೆ. ನಾವಿಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯ್ದೆಯ ವಿರುದ್ಧವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ನಾವು ಪಂಜಾಬ್ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕಾಗಿ, ದೇಶದ ರೈತರ ಪರವಾಗಿ ಹೋರಾಟ ಮಾಡುತ್ತಿರುವುದು. ನಮಗೆ ಯಾರದ್ದೂ ಒತ್ತಡವಿಲ್ಲ. ಸರ್ಕಾರ ಕಾಯ್ದೆ ಹಿಂತೆಗೆದುಕೊಂಡ ಕೂಡಲೇ ನಮ್ಮ ಮನೆಗಳಿಗೆ ಹೋಗುತ್ತೇವೆ ಎಂದರು.
ನಿನ್ನೆ ಘರ್ಷಣೆ ನಡೆದ ಕೆಂಪು ಕೋಟೆಯ ಸುತ್ತಮುತ್ತ ಇಂದು ಸಕಲ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ದೆಹಲಿ ಪೊಲೀಸರು ಹೇಳುವ ಪ್ರಕಾರ ನಿನ್ನೆಯ ಘಟನೆಯಲ್ಲಿ ಸುಮಾರು 300 ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿದ್ದು ಇದುವರೆಗೆ 22 ಮಂದಿ ವಿರುದ್ಧ ಎಫ್ಐಆರ್ ದಾಖಲಾಗಿದೆ.