ಟ್ರಾಕ್ಟರ್ ಪರೇಡ್ ವೇಳೆ ಹಿಂಸಾಚಾರ: ರೈತ ಮುಖಂಡರ ವಿರುದ್ಧ ಎಫ್ ಐಆರ್; ದೆಹಲಿ ಪೊಲೀಸರ ಮಾಹಿತಿ
ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ್ದ ಟ್ರಾಕ್ಟರ್ ಪರೇಡ್ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡರ ವಿರುದ್ದವೂ ಎಫ್ ಐಆರ್ ದಾಖಲಿಸಿದ್ದಾರೆ.
Published: 28th January 2021 01:31 AM | Last Updated: 28th January 2021 12:50 PM | A+A A-

ದೆಹಲಿ ಪೊಲೀಸ್ ಆಯುಕ್ತ ಎಸ್.ಎನ್.ಶ್ರೀವಾಸ್ತವ
ನವದೆಹಲಿ: ಗಣರಾಜ್ಯೋತ್ಸವ ದಿನದಂದು ರೈತರು ನಡೆಸಿದ್ದ ಟ್ರಾಕ್ಟರ್ ಪರೇಡ್ ವೇಳೆ ನಡೆದಿದ್ದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ರೈತ ಮುಖಂಡರ ವಿರುದ್ದವೂ ಎಫ್ ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ದೆಹಲಿ ಪೊಲೀಸರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ರೈತ ಮುಖಂಡರಾದ ಯೋಗೇಂದ್ರ ಯಾದವ್, ಮೇಧಾ ಪಾಟ್ಕರ್ , ದರ್ಶನ್ ಪಾಲ್, ಗುರ್ನಮ್ ಸಿಂಗ್ ಚಾಂದೂನಿ, ರಾಕೇಶ್ ಟಿಕೈಟ್, ಕುಲ್ವಂತ್ ಸಿಂಗ್ ಸಂಧು, ಸತ್ನಮ್ ಸಿಂಗ್ ಪನ್ನು, ಜೋಗಿಂದರ್ ಸಿಂಗ್ ಉಗ್ರಾಹಾ, ಸುರ್ಜೀತ್ ಸಿಂಗ್ ಫೂಲ್, ಜಗ್ಜೀತ್ ಸಿಂಗ್ ದಲೆವಾಲ್, ಹಲ್ಬಿಂದರ್ ಸಿಂಗ್ ರಾಜೇವಾಲ್ ಲಖೋವಲ್ ಸೇರಿದಂತೆ ಒಟ್ಟು 37 ಮಂದಿ ರೈತ ಮುಖಂಡರ ವಿರುದ್ಧ ಪೊಲೀಸರು ಎಫ್ ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಗಲಭೆ, ಕ್ರಿಮಿನಲ್ ಪಿತೂರಿ ಮತ್ತು ಕೊಲೆ ಯತ್ನದ ಆರೋಪಗಳ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ದೆಹಲಿ ಪೊಲೀಸ್ ಆಯುಕ್ತ ಎಸ್ ಎನ್ ಶ್ರೀವಾತ್ಸವ್ ಅವರು, ಟ್ರಾಕ್ಟರ್ ರ್ಯಾಲಿ ವೇಳೆ ಹಲವರು ಪ್ರಚೋದನಕಾರಿ ಭಾಷಣ ಮಾಡಿದರು ಮತ್ತು ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಘಟನೆಯಲ್ಲಿ 394 ಭದ್ರತಾ ಸಿಬ್ಬಂದಿಗಳು ಗಾಯಗೊಂಡರು ಮತ್ತು ಪ್ರತಿಭಟನಾಕಾರರು ಸಾವನ್ನಪ್ಪಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ರೈತ ಮುಖಂಡರ ಪಾತ್ರದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪೊಲೀಸರ ಶಸ್ತ್ರಾಸ್ತ್ರ ದೋಚಿದ ಪ್ರತಿಭಟನಾಕಾರರು
ಘಟನೆ ಸಂಬಂಧ ಈವರೆಗೆ 25 ಎಫ್ಐಆರ್ ದಾಖಲಿಸಲಾಗಿದ್ದು, ಅಪರಿಚಿತ ವ್ಯಕ್ತಿಗಳ ವಿರುದ್ಧ ಸಮಯಪುರ್ ಬದ್ಲಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಅಂತೆಯೇ ಹಿಂಸಾಚಾರದ ವೇಳೆ ಪ್ರತಿಭಟನಾಕಾರರು ಪೊಲೀಸರಿಂದ ಶಸ್ತ್ರಾಸ್ತ್ರ ದೋಚಿದ್ದಾರೆ ಎನ್ನಲಾಗಿದೆ. ಪ್ರತಿಭಟನಾ ನಿರತರು ಕರ್ತವ್ಯಕ್ಕೆ ನಿಯೋಜನೆಯಾಗಿದ್ದ ಪೊಲೀಸರ ಬಳಿ ಇದ್ದ ಅಧಿಕೃತ ಪಿಸ್ತೂಲ್ ಅನ್ನು ಬಳಕೆ ಮಾಡಿದ್ದು ಒಟ್ಟು 10 ಸುತ್ತಿನ ಮದ್ದುಗುಂಡು ಮತ್ತು ಎರಡು ಅಶ್ರುವಾಯು ಬಂದೂಕುಗಳನ್ನು ದೋಚಿದ್ದಾರೆ.
ಇನ್ನು ಪೊಲೀಸ್ ಎಫ್ ಐಆರ್ ನಲ್ಲಿ 307 (ಕೊಲೆ ಯತ್ನ), 147 (ಗಲಭೆಗೆ ಶಿಕ್ಷೆ) ಮತ್ತು 353 (ಸಾರ್ವಜನಿಕ ಸೇವಕರನ್ನು ತನ್ನ ಕರ್ತವ್ಯ ನಿರ್ವಹಣೆಯಿಂದ ತಡೆಯಲು ಹಲ್ಲೆ / ಕ್ರಿಮಿನಲ್ ಫೋರ್ಸ್) ಮತ್ತು 120 ಬಿ (ಕ್ರಿಮಿನಲ್ ಪಿತೂರಿಯ ಶಿಕ್ಷೆ) ಸೇರಿದಂತೆ ಅನೇಕ ಐಪಿಸಿ ವಿಭಾಗಗಳನ್ನು ಉಲ್ಲೇಖಿಸಲಾಗಿದೆ. ಮತ್ತೊಂದು ಎಫ್ಐಆರ್ ನಲ್ಲಿ, ದೆಹಲಿ ಪೊಲೀಸರ ಮೇಲೆ ಕೆಲವು ಪ್ರತಿಭಟನಾಕಾರರು ತಮ್ಮ ಟ್ರ್ಯಾಕ್ಟರ್ ಅನ್ನು ಬ್ಯಾರಿಕೇಡ್ಗಳಿಗೆ ನುಗ್ಗಿಸಿ ಕೊಲ್ಲಲು ಪ್ರಯತ್ನಿಸಿದರು ಎಂದು ಹೇಳಿದ್ದಾರೆ. ಅವರ ರ್ಯಾಲಿಯಲ್ಲಿ ಕೆಲವು ಟ್ರಾಕ್ಟರುಗಳ ನಂಬರ್ ಪ್ಲೇಟ್ಗಳನ್ನು ಮರೆಮಾಡಲಾಗಿತ್ತು ಎಂದು ಹೇಳಲಾಗಿದೆ.
ಹಿಂಸಾಚಾರದಲ್ಲಿ 394 ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರೆ, 30 ಪೊಲೀಸ್ ವಾಹನಗಳು ಮತ್ತು 428 ಬ್ಯಾರಿಕೇಡ್ಗಳು ಹಾನಿಗೊಳಗಾಗಿವೆ. ಗಲಭೆಯಲ್ಲಿ ಡಿಟಿಸಿ ಚಾಲಕ ಪ್ರವೀಣ್ ಕುಮಾರ್ ಗಾಯಗೊಂಡಿದ್ದು, ಬಸೈದರಾಪುರದ ಇಎಸ್ಐಸಿ ಮಾದರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.