ರೈತರ ಪ್ರತಿಭಟನೆ ಮುಂದುವರಿಕೆ: ಗಾಜಿಪುರ ಗಡಿ ಬಂದ್, ದೆಹಲಿ ಗಡಿಯಲ್ಲಿ ಸಂಚಾರ ಮಾರ್ಗ ಬದಲಾವಣೆ
ಗಣರಾಜ್ಯೋತ್ಸವ ದಿನ ರಾಜಧಾನಿ ದೆಹಲಿಯಲ್ಲಿ ತೀವ್ರ ಮಟ್ಟದ ಗಲಭೆಯುಂಟಾದರೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿವೆ ರೈತ ಸಂಘಟನೆಗಳು.
Published: 29th January 2021 08:33 AM | Last Updated: 29th January 2021 02:03 PM | A+A A-

ಗಾಜಿಪುರ್ ಗಡಿಭಾಗದಲ್ಲಿ ಮುಂದುವರಿದ ರೈತರ ಪ್ರತಿಭಟನೆ
ನವದೆಹಲಿ: ಗಣರಾಜ್ಯೋತ್ಸವ ದಿನ ರಾಜಧಾನಿ ದೆಹಲಿಯಲ್ಲಿ ತೀವ್ರ ಮಟ್ಟದ ಗಲಭೆಯುಂಟಾದರೂ ಪ್ರತಿಭಟನೆಯನ್ನು ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತಿವೆ ರೈತ ಸಂಘಟನೆಗಳು.
ಪ್ರತಿಭಟನಾ ನಿರತ ರೈತರು ಜೈ ಜವಾನ್, ಜೈ ಕಿಸಾನ್, ಇಂಕ್ವಿಲಾಬ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾ ಗಾಜಿಪುರ್ ಗಡಿ(ದೆಹಲಿ-ಉತ್ತರ ಪ್ರದೇಶ)ಯಲ್ಲಿ ಇಂದು ನಸುಕಿನ ಜಾವ ಧರಣಿ ಮುಂದುವರಿಸಿರುವುದು ಕಂಡುಬಂತು. ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಉತ್ತರ ಪ್ರದೇಶ ಮತ್ತು ಪ್ರಾಂತೀಯ ಸೇನಾ ಕಾನ್ಸ್ ಸ್ಟೇಬಲ್ ಗಳು ಪ್ರತಿಭಟನಾ ಸ್ಥಳವನ್ನು ಕಳೆದ ರಾತ್ರಿ ತೊರೆದಿದ್ದಾರೆ.
ಸದ್ಯ ಇಂದು ನಸುಕಿನಿಂದ ಗಾಜಿಪುರ್ ಗಡಿಭಾಗವನ್ನು ಬಂದ್ ಮಾಡಲಾಗಿದೆ. ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ 24, ರಾಷ್ಟ್ರೀಯ ಹೆದ್ದಾರಿ 9, ರಸ್ತೆ ಸಂಖ್ಯೆ 56, 57ಎ, ಕೊಂಡ್ಲಿ, ಪೇಪರ್ ಮಾರುಕಟ್ಟೆ, ಟೆಲ್ಕೊ ಟಿ ಪಾಯಿಂಟ್, ಇಡಿಎಂ ಮಾಲ್, ಅಕ್ಷರಧಾಮ, ನಿಜಾಮುದ್ದೀನ್ ಕಟ್ಟಾಗಳಲ್ಲಿ ಬದಲಾಯಿಸಲಾಗಿದೆ. ಈ ಪ್ರದೇಶದಲ್ಲಿ ಇಂದು ಬೆಳಗ್ಗೆಯಿಂದಲೇ ಸಂಚಾರ ದಟ್ಟಣೆ ತೀವ್ರವಾಗಿ ಕಂಡುಬಂದಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.
ಇನ್ನು ಸಿಂಘು, ಔಚಂಡಿ, ಮಂಗೇಶ್, ಸಬೊಲಿ, ಪಿಯು ಮನಿಯಾರಿ ಗಡಿಭಾಗಗಳನ್ನು ಮುಚ್ಚಲಾಗಿದೆ. ಲಾಂಪುರ್, ಸಫಿಯಾಬಾದ್, ಸಿಂಘು ಶಾಲೆ ಮತ್ತು ಪಲ್ಲ ಟೋಲ್ ಟ್ಯಾಕ್ಸ್ ಗಡಿಭಾಗಗಳನ್ನು ತೆರೆಯಲಾಗಿದೆ. ಸಂಚಾರವನ್ನು ರಾಷ್ಟ್ರೀಯ ಹೆದ್ದಾರಿ 44ರ ಪಕ್ಕ ಡಿಎಸ್ ಐಡಿಸಿ ನರೇಲಾದಿಂದ ಬದಲಾಯಿಸಲಾಗಿದೆ. ಹೊರ ರಿಂಗ್ ರಸ್ತೆ, ಜಿಟಿಕೆ ರಸ್ತೆ ಮತ್ತು ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಹೋಗದಂತೆ ದೆಹಲಿ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮೊನ್ನೆ ಗಣರಾಜ್ಯೋತ್ಸವ ದಿನದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ನಿನ್ನೆ 36ಕ್ಕೂ ಹೆಚ್ಚು ರೈತ ಸಂಘಟನೆಗಳ ವಿರುದ್ಧ ದೆಹಲಿ ಪೊಲೀಸರು 44 ಲುಕ್ ಔಟ್ ಸುತ್ತೋಲೆ ಹೊರಡಿಸಿದ್ದಾರೆ. ನಾಡಿದ್ದು 31ರಂದು ವಿಚಾರಣೆಗೆ ಹಾಜರಾಗುವಂತೆ ಮತ್ತು ಆ ಸಂದರ್ಭದಲ್ಲಿ ಅವರ ಪಾಸ್ ಪೋರ್ಟ್ ಗಳನ್ನು ತರುವಂತೆ ಹೇಳಲಾಗಿದೆ.
ಈ ಮಧ್ಯೆ, ಉತ್ತರ ಪ್ರದೇಶ ಸರ್ಕಾರ ಗಾಜಿಪುರ್ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲು ಮುಂದಾಗಿದೆ. ವಲಸೆ ಅಧಿಕಾರಿಗಳು ಹೊರಡಿಸುವ ನೊಟೀಸ್ ಲುಕ್ ಔಟ್ ಸುತ್ತೋಲೆಯಾಗಿದ್ದು ಆರೋಪಿ ವ್ಯಕ್ತಿಗಳು ದೇಶ ಬಿಟ್ಟು ಹೋಗದಂತೆ ಕಾನೂನಿನಲ್ಲಿರುವ ನಿಯಮವಾಗಿದೆ.
ಗೃಹ ಸಚಿವಾಲಯ ಪ್ರತಿಭಟನಾ ನಿರತರ ಪಾಸ್ ಪೋರ್ಟ್ ಗಳನ್ನು ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಮುಂದುವರಿಸಿದ್ದು, ಇದೊಂದು ಪ್ರಮುಖ ನಿರ್ಧಾರವಾಗಿದೆ.ಎಫ್ಐಆರ್ ನಲ್ಲಿ ದಾಖಲಾಗಿರುವ ಆರೋಪಿಗಳು ಪಾಸ್ ಪೋರ್ಟ್ ಗಳನ್ನು ತೆಗೆದುಕೊಂಡು ಓಡಾಡುವಂತಿಲ್ಲ.