ನಿತೀಶ್- ಬಿಜೆಪಿ ತಿಕ್ಕಾಟದ ನಡುವೆ ಎನ್ ಡಿಎ ಸಭೆ: ಚಿರಾಗ್ ಪಾಸ್ವಾನ್ ಗೆ ಆಹ್ವಾನ; ಹಾಜರಿ ಅನುಮಾನ!
ಸಂಸತ್ತಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟಗಳ ಅಜೆಂಡಾ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಶನಿವಾರ ಸಭೆ ಕರೆದಿದೆ. ಅದಕ್ಕೆ ಲೋಕ ಜನಶಕ್ತಿ ಪಾರ್ಟಿಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೂ ಆಹ್ವಾನ ಹೋಗಿರುವುದು ವಿಶೇಷ.
Published: 30th January 2021 01:53 PM | Last Updated: 30th January 2021 04:15 PM | A+A A-

ಚಿರಾಗ್ ಪಾಸ್ವಾನ್
ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಆಡಳಿತಾರೂಢ ಎನ್ ಡಿಎ ಮೈತ್ರಿಕೂಟಗಳ ಅಜೆಂಡಾ ಬಗ್ಗೆ ಚರ್ಚೆ ನಡೆಸಲು ಬಿಜೆಪಿ ಶನಿವಾರ ಸಭೆ ಕರೆದಿದೆ. ಅದಕ್ಕೆ ಲೋಕ ಜನಶಕ್ತಿ ಪಾರ್ಟಿಯ ಅಧ್ಯಕ್ಷ ಚಿರಾಗ್ ಪಾಸ್ವಾನ್ ಅವರಿಗೂ ಆಹ್ವಾನ ಹೋಗಿರುವುದು ವಿಶೇಷ.
ಆದರೆ ಅನಾರೋಗ್ಯ ಹಿನ್ನೆಲೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಅವರ ಪುತ್ರ ಚಿರಾಗ್ ಪಾಸ್ವಾನ್ ಸಭೆಗೆ ಹಾಜರಾಗುತ್ತಿಲ್ಲ, ಅವರು ಇಂದು ಸರ್ವಪಕ್ಷ ಸಭೆಗೂ ಹಾಜರಾಗಿರಲಿಕ್ಕಿಲ್ಲ ಎಂದು ಹೇಳಲಾಗುತ್ತಿದೆ.
ಇಂದಿನ ಸಭೆಗೆ ಹಾಜರಾಗುವಂತೆ ಚಿರಾಗ್ ಪಾಸ್ವಾನ್ ಅವರಿಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಅವರ ಕಡೆಯಿಂದ ಆಹ್ವಾನ ಹೋಗಿದೆ. ಬಿಹಾರ ರಾಜಕೀಯದಲ್ಲಿ ನಿತೀಶ್ ಕುಮಾರ್ ಅವರ ಮೇಲಿನ ವಿರೋಧದಿಂದ ಎಲ್ ಜೆಪಿ ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಹೊರನಡೆದು ಏಕಾಂಗಿಯಾಗಿ ಸ್ಪರ್ಧಿಸಿತ್ತು. ಇದಾದ ಬಳಿಕ ಇಂದಿನ ಸಭೆಗೆ ಎನ್ ಡಿಎ ಕಡೆಯಿಂದ ಆಹ್ವಾನ ಹೋಗಿರುವುದು ಮಹತ್ವ ಪಡೆದಿದೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಲ್ ಜೆಪಿ ಬಿಹಾರದಲ್ಲಿ ಕೇವಲ ಒಂದು ಸೀಟು ಗೆಲ್ಲಲು ಸಾಧ್ಯವಾಗಿದ್ದರೂ ಕೂಡ ಅದರ ಏಕಾಂಗಿ ಸ್ಪರ್ಧೆ ಜೆಡಿಯು ಮೇಲೆ ಸಾಕಷ್ಟು ಹಾನಿಯನ್ನುಂಟುಮಾಡಿತು. ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ 71 ಸ್ಥಾನಗಳನ್ನು ಗೆದ್ದಿದ್ದ ಜೆಡಿಯು ಈ ಬಾರಿಯ ವಿಧಾನಸಭೆಯಲ್ಲಿ ಚುನಾವಣೆಯಲ್ಲಿ ಗೆದ್ದಿದ್ದು ಕೇವಲ 43 ಸೀಟುಗಳು ಮಾತ್ರ. ಬಿಜೆಪಿಯ ಹಿರಿಯ ನಾಯಕರು ಕೂಡ ಬಿಹಾರದಲ್ಲಿ ಜೆಡಿಯು ವಿರುದ್ಧವಾಗಿ ಎಲ್ ಜೆಪಿ ನಿಂತಿದ್ದಕ್ಕೆ ಟೀಕಿಸಿದ್ದರು. ಇಂತಹ ಸನ್ನಿವೇಶದಲ್ಲಿ ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟದಲ್ಲಿ ಇನ್ನೂ ಚಿರಾಗ್ ಪಾಸ್ವಾನ್ ಇರುತ್ತಾರೆಯೇ, ಇಲ್ಲವೇ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು.
ಚಿರಾಗ್ ಪಾಸ್ವಾನ್ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗವಾಗಿ ಬೆಂಬಲ ಸೂಚಿಸುತ್ತಾರೆ. ಕೇಂದ್ರದಲ್ಲಿ ಬಿಜೆಪಿಗೆ ತಮ್ಮ ಬೆಂಬಲವಿದೆ ಎಂದು ಹೇಳುತ್ತಾರೆ. ದಲಿತ ನಾಯಕ ರಾಮ್ ವಿಲಾಸ್ ಪಾಸ್ವಾನ್ ಅವರು ಸ್ಥಾಪಿಸಿದ್ದ ಎಲ್ ಜೆಪಿಯನ್ನು ಬಿಟ್ಟುಕೊಡಲು ಬಿಜೆಪಿ ಸಿದ್ದವಿಲ್ಲ ಎಂಬುದು ಇಂದಿನ ಸಭೆಯ ಆಹ್ವಾನ ಸೂಚಿಸುತ್ತದೆ.ಇದು ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲವಿದೆ.