ದೆಹಲಿ ಸ್ಫೋಟದ ಹಿಂದೆ ಉಗ್ರರ ಕೈವಾಡದ ಶಂಕೆ?
ನವದೆಹಲಿಯ ರಾಯಭಾರ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆಗಾಗಿ ಇಸ್ರೇಲ್ ಭಾರತದೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿದೆ ಎಂದು ಭಾರತದ ಇಸ್ರೇಲ್ ರಾಯಭಾರಿ ರೋನ್ ಮಾಲ್ಕಾ ಮಲ್ಕಾ ಹೇಳಿದ್ದಾರೆ.
Published: 30th January 2021 02:59 PM | Last Updated: 30th January 2021 03:17 PM | A+A A-

ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಪೊಲೀಸರು
ನವದೆಹಲಿ: ನವದೆಹಲಿಯ ರಾಯಭಾರ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣದ ತನಿಖೆಗಾಗಿ ಇಸ್ರೇಲ್ ಭಾರತದೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿದೆ ಎಂದು ಭಾರತದ ಇಸ್ರೇಲ್ ರಾಯಭಾರಿ ರೋನ್ ಮಾಲ್ಕಾ ಮಲ್ಕಾ ಹೇಳಿದ್ದಾರೆ. ಈ ಸ್ಫೋಟದ ವಿಚಾರಣೆಗೆ ನವದೆಹಲಿ ಮತ್ತು ತೆಲ್ ಅವಿನ್ ನಡುವೆ ಸಂಪೂರ್ಣ ಸಹಕಾರವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಸ್ಫೋಟದ ಬಗ್ಗೆ ತನಿಖೆ ನಡೆಯುತ್ತಿದೆ. ಘಟನಾ ಸ್ಥಳದಿಂದ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಭಾರತೀಯ ಮತ್ತು ಇಸ್ರೇಲಿ ಅಧಿಕಾರಿಗಳ ನಡುವೆ ಸಂಪೂರ್ಣ ಸಮನ್ವಯತೆಯಿದೆ. ಇಸ್ರೇಲ್ ರಾಯಭಾರ ಕಚೇರಿಯನ್ನು ಗುರಿಯಾಗಿಟ್ಟುಕೊಂಡು ನಡೆಸಲಾದ ಉಗ್ರರ ದಾಳಿಯಾಗಿದೆ ಎಂಬುದು ನಮ್ಮ ಊಹೆಯಾಗಿದೆ. ಅದೃಷ್ಟವಶಾತ್ ಯಾರಿಗೂ ತೊಂದರೆಯಾಗಿಲ್ಲ ಎಂದು ಅವರು ಯುಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.
ಇದರಲ್ಲಿ ಯಾರ ಕೈವಾಡವಿದೆ ಎಂಬುದನ್ನು ಪತ್ತೆ ಹಚ್ಚಲು ನಾವು ಭಾರತದೊಂದಿಗೆ ಕೆಲಸ ಮಾಡುತ್ತಿದ್ದೇವೆ. ಯಾವುದೇ ಗುಂಪಿನ ಹೆಸರನ್ನು ಹೆಸರಿಸಲು ಸಾಧ್ಯವಿಲ್ಲ.ಲುಟಿಯನ್ಸ್ ದೆಹಲಿಯ ಹೈ-ಸೆಕ್ಯೂರಿಟಿ ವಲಯದಲ್ಲಿ ಸಣ್ಣ ಐಇಡಿ ಸ್ಫೋಟದಿಂದ ಕೆಲವು ವಾಹನಗಳು ಜಖಂಗೊಂಡಿದ್ದವು. ಘಟನೆಯ ತನಿಖೆಗಾಗಿ ಇಸ್ರೇಲ್ ಮತ್ತು ಭಾರತ ಅತ್ಯುನ್ನತ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿವೆ ಮತ್ತು ಯುರೋಪ್ ನಲ್ಲಿ ಇಸ್ರೇಲ್ ಮಿಷನ್ ಗಳನ್ನು ಗುರಿಯಾಗಿಸಿರುವುದರಿಂದ, ಜಗತ್ತಿನಾದ್ಯಂತ ಎಲ್ಲ ಮಿಷನ್ ಗಳು ಕಟ್ಟೆಚ್ಚರದಿಂದ ಇರುವಂತೆ ಮಲ್ಕಾ ಹೇಳಿದ್ದಾರೆ.
ಇಸ್ರೇಲ್ ಮತ್ತು ಭಾರತ ನಡುವಣ ರಾಯಭಾರ ಸಂಬಂಧ ಸ್ಥಾಪನೆಯ 29ನೇ ವರ್ಷಾಚರಣೆ ಸಂದರ್ಭದಲ್ಲಿ ಭಯೋತ್ಪಾದಕ ದಾಳಿ ನಡೆಸಲಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಸಲಾಗುತ್ತಿದೆ. ನಾವು ಇನ್ನೂ ನಿರ್ದಿಷ್ಟಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ, ಆದರೆ ಭಾರತ ಮತ್ತು ಇಸ್ರೇಲ್ ಗಳು ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುತ್ತಿವೆ. ಗುಪ್ತಚರ ಮತ್ತು ತಾಂತ್ರಿಕ ಜ್ಞಾನಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಇಸ್ರೇಲ್ ನಡುವೆ ಸಮನ್ವಯತೆಯಿದೆ ಎಂದರು. ಮತ್ತೊಂದೆಡೆ, ಶುಕ್ರವಾರ ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟದ ಹಿಂದೆ ಇರಾನ್ ಕೈವಾಡದ ಶಂಕೆಯಿದೆ ಎಂದು ಮೂಲಗಳು ತಿಳಿಸಿವೆ.
ಬಾಂಬ್ ಸ್ಫೋಟ ಸಂಭವಿಸಿದ ಸ್ಥಳದಲ್ಲಿ ಪತ್ರವೊಂದು ಸಿಕ್ಕಿದೆ. ಅದರಲ್ಲಿ ಇಸ್ರೇಲ್ ರಾಯಭಾರಿ ಅಧಿಕಾರಿಗೆ ಸಂಬಂಧಿಸಿದೆ ಪಠ್ಯವೊಂದಿದೆ. ಇದಕ್ಕೂ ಸ್ಪೋಟಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದರ ಬಗ್ಗೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಸ್ರೇಲ್ ರಾಜತಾಂತ್ರಿಕ ಅಧಿಕಾರಿಗಳಿಗೆ ಸಂಪೂರ್ಣ ರಕ್ಷಣೆ ಒದಗಿಸುವುದಾಗಿ ಆ ದೇಶದ ವಿದೇಶಾಂಗ ಸಚಿವರಿಗೆ ಎಸ್ . ಜೈಶಂಕರ್ ಭರವಸೆ ನೀಡಿದ್ದಾರೆ.