ಬಾಂಬ್ ಸ್ಫೋಟ: ಇಸ್ರೇಲ್ ರಾಯಭಾರ ಕಚೇರಿ ಬಳಿಯ ಸಿಸಿಟಿವಿಯೇ ಕಾರ್ಯ ನಿರ್ವಹಿಸುತ್ತಿಲ್ಲ: ಪೊಲೀಸರು
ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಆಘಾತಕಾರಿ ಮಾಹಿತಿ ಹೊರಹಾಕಿದ್ದು, ಇಸ್ರೇಲ್ ರಾಯಭಾರ ಕಚೇರಿ ಬಳಿ ಇರುವ ಸಿಸಿಟಿವಿಯೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
Published: 31st January 2021 07:51 AM | Last Updated: 31st January 2021 07:51 AM | A+A A-

ಇಸ್ರೇಲ್ ರಾಯಭಾರ ಕಚೇರಿ ಬಳಿ ಬಾಂಬ್ ಸ್ಫೋಟ
ನವದೆಹಲಿ: ಇಸ್ರೇಲ್ ರಾಯಭಾರ ಕಚೇರಿ ಬಳಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಆಘಾತಕಾರಿ ಮಾಹಿತಿ ಹೊರಹಾಕಿದ್ದು, ಇಸ್ರೇಲ್ ರಾಯಭಾರ ಕಚೇರಿ ಬಳಿ ಇರುವ ಸಿಸಿಟಿವಿಯೇ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಿದ್ದಾರೆ.
ಈ ಕುರಿತಂತೆ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೆಹಲಿ ಪೊಲೀಸ್ ಇಲಾಖೆ ವಿಶೇಷ ತನಿಖಾ ತಂಡದ ಅಧಿಕಾರಿಗಳು, ಘಟನಾ ಸ್ಥಳಕ್ಕೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸ್ಥಳೀಯ ಸಿಸಿಟಿವಿಗಳನ್ನು ಪರಿಶೀಲನೆಗೊಳಪಡಿಸಲಾಗಿದ್ದು, ಘಟನೆ ಸಂದರ್ಭದಲ್ಲಿ ರಾಯಭಾರ ಕಚೇರಿಯ ಬಳಿ ಅಳವಡಿಸಲಾಗಿದ್ದ ಸಿಸಿಟಿವಿಗಳು ಕಾರ್ಯನಿರ್ವಹಣೆ ಸ್ಥಗಿತಗೊಂಡಿದ್ದ ವಿಚಾರ ತಿಳಿದುಬಂದಿದೆ. ಅಂತೆಯೇ ಇದಲ್ಲದೇ ಇನ್ನೂ ಸಾಕಷ್ಟು ಸಿಸಿಟಿವಿ ವಿಡಿಯೋಗಳನ್ನು ವಶಕ್ಕೆ ಪಡೆಯಲಾಗಿದ್ದು, ಇವುಗಳ ಪರಿಶೀಲನೆ ಮಾಡಲಾಗುತ್ತಿದೆ. ಪ್ರಮುಖ ರಸ್ತೆಗಳಲ್ಲಿ ಅಳವಡಿಸಲಾಗಿರುವ ಸಿಸಿಟಿವಿಗಳಲ್ಲಿ ಅನುಮಾನಾಸ್ಪದವಾಗಿ ಓಡಾಡಿದ ವಾಹನಗಳ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ.
ಇದಲ್ಲದೆ ಘಟನಾ ಸ್ಥಳದಿಂದ ಸಾಕಷ್ಟು ಮಾಹಿತಿ ಮತ್ತು ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದು, ಈ ಪೈಕಿ ಕೆಲವು ವಸ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಯಲಕ್ಕೆ ಕಳುಹಿಸಲಾಗಿದೆ. ಎಫ್ ಎಸ್ ಎಲ್ ನ 10 ತಜ್ಞರ ತಂಡ ಶುಕ್ರವಾರ ಘಟನಾ ಸ್ಥಳಕ್ಕೆ ಸಾಕ್ಷ್ಯಾಧಾರ ಕಲೆಹಾಕಿದೆ. ಈ ವೇಳೆ ಮಾತನಾಡಿದ ಅಧಿಕಾರಿಗಳು, ಸ್ಫೋಟ ಸ್ಥಳದಿಂದ ಸಂಗ್ರಹಿಸಿದ ಮಾದರಿಗಳನ್ನು ನಾವು ಇನ್ನೂ ವಶಕ್ಕೆ ಪಡೆದಿಲ್ಲ. ತನಿಖಾ ಅಧಿಕಾರಿಗಳು ಮಾದರಿಗಳನ್ನು ನಿರ್ಣಾಯಕವಾಗಿ ತಮಗೆ ಸಲ್ಲಿಸಿದ ನಂತರ, ನಾವು ಅವುಗಳನ್ನು ನಮ್ಮ ಸ್ಫೋಟ ಪರಿಶೀಲನಾ ತಂಡಕ್ಕೆ ಕಳುಹಿಸುತ್ತೇವೆ. ರಾಸಾಯನಿಕ ಪರೀಕ್ಷೆಯಿಂದ ಮಾತ್ರ ಈ ಮಾದರಿಗಳ ನಿಖರವಾದ ಸಂಯೋಜನೆಯನ್ನು ಗುರುತಿಸಲು ನಮಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಸ್ಫೋಟಕ್ಕೆ ಬಳಕೆ ಮಾಡಲಾದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದ್ದು ಅವುಗಳ ಪರಿಶೀಲನೆ ಕೂಡ ಚಾಲ್ತಿಯಲ್ಲಿದೆ. ಸ್ಫೋಟದ ತೀವ್ರತೆಯನ್ನು ಹೆಚ್ಚು ಮಾಡಲು ಬಾಂಬ್ ನಲ್ಲಿ ಬಾಲ್ ಬೇರಿಂಗ್ ಗಳನ್ನು ಅಡಗಿಸಲಾಗಿತ್ತು. ಪರಿಣಾಮ ಸ್ಫೋಟದ ತೀವ್ರತೆ ಸುಮಾರು 20 ರಿಂದ 25 ಮೀಟರ್ ವರೆಗೂ ಇತ್ತು ಎಂದು ಹೇಳಿದರು. ಯಾರಿಗೂ ಅನುಮಾನ ಬಾರದೇ ಇರಲಿ ಎಂದು ಇಸ್ರೇಲ್ ರಾಯಭಾರ ಕಚೇರಿಯ ಹೊರಗಿನ ಎಪಿಜೆ ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಿಂದಾಲ್ ಹೌಸ್ ಬಳಿಯ ಹೂಕುಂಡಗಳಲ್ಲಿ ಬಾಂಬ್ ಅನ್ನು ಹುದುಗಿಸಿಡಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.