ಉತ್ತರಾಖಂಡ ನೂತನ ಸಿಎಂ ಆಗಿ ಬಿಜೆಪಿ ಹಿರಿಯ ನಾಯಕ ಪುಷ್ಕರ್ ಸಿಂಗ್ ಧಮಿ ಆಯ್ಕೆ

ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಪುಷ್ಕರ್ ಸಿಂಗ್ ಧಮಿ ಅವರನ್ನು ಆಯ್ಕೆ ಮಾಡಲಾಗಿದೆ.
ನೂತನ ಸಿಎಂ ಪುಷ್ಕರ್ ಸಿಂಗ್ ಧಮಿ
ನೂತನ ಸಿಎಂ ಪುಷ್ಕರ್ ಸಿಂಗ್ ಧಮಿ

ಡೆಹ್ರಾಡೂನ್: ಉತ್ತರಾಖಂಡ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಿಜೆಪಿ ಹಿರಿಯ ನಾಯಕ ಪುಷ್ಕರ್ ಸಿಂಗ್ ಧಮಿ ಅವರನ್ನು ಆಯ್ಕೆ ಮಾಡಲಾಗಿದೆ.

ಉತ್ತರಾಖಂಡದಲ್ಲಿ ತಿರತ್ ಸಿಂಗ್ ರಾವತ್‍ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಡೆಹ್ರಾಡೂನ್‍ ನಲ್ಲಿ ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್ ಅವರ ನೇತೃತ್ವದಲ್ಲಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಿತು. ಸಭೆಯಲ್ಲಿ ಶಾಸಕರು ಹಿರಿಯ ನಾಯಕ  ಪುಷ್ಕರ್ ಸಿಂಗ್ ಧಮಿ ಅವರನ್ನು ಆಯ್ಕೆ ಮಾಡಿದ್ದಾರೆ. 

ನಿನ್ನೆ ಸಿಎಂ ಸ್ಥಾನಕ್ಕೆ ರಾಜಿನಾಮೆ ನೀಡಿದ್ದ ತಿರತ್ ಸಿಂಗ್ ರಾವತ್‍
ಉತ್ತರಾಖಂಡದ ಮುಖ್ಯಮಂತ್ರಿ ತೀರಥ್ ಸಿಂಗ್ ರಾವತ್ ಅವರು ಶುಕ್ರವಾರ ರಾತ್ರಿ 11 ಗಂಟೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಕೆಲ ದಿನಗಳಿಂದ ಉತ್ತರಾಖಂಡದ ನಾಯಕತ್ವ ಬದಲಾವಣೆ ಕುರಿತ ಚಟುವಟಿಕೆಗಳು ಗರಿಗೆದರಿದ್ದವು. ಮುಖ್ಯಮಂತ್ರಿ ತೀರಥ್‌ ಸಿಂಗ್‌ ಅವರು ಶುಕ್ರವಾರ ಬಿಜೆಪಿ ಅಧ್ಯಕ್ಷ  ಜೆ.ಪಿ. ನಡ್ಡಾ ಅವರನ್ನು ಭೇಟಿಯಾಗಿದ್ದರು. ಪಕ್ಷವು ರಾವತ್‌ ಅವರಿಗೆ ರಾಜೀನಾಮೆ ನೀಡುವಂತೆ ಸೂಚಿಸಿದ ಬೆನ್ನಲ್ಲೆ, ಅವರು ರಾಜ್ಯಪಾಲರಾದ ಬೇಬಿ ರಾಣಿ ಮೌರ್ಯ ಅವರನ್ನು ಭೇಟಿ ಮಾಡಿ ರಾಜೀನಾಮೆ ಸಲ್ಲಿಸಿದರು.

9 ಜನ ಸಿಎಂ, 5 ವರ್ಷ ಅವಧಿ ಪೂರೈಸಿದ್ದು ಒಬ್ಬರೇ
ಕಳೆದ ನಾಲ್ಕು ತಿಂಗಳ ಹಿಂದೆ ಉತ್ತರಾಖಂಡ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದ ತೀರ್ಥ ಸಿಂಗ್ ರಾವತ್ ಅವರು ದಿಢೀರ್ ಆಗಿ ರಾಜೀನಾಮೆ ನೀಡಿದ್ದಾರೆ. ತಾವು ಸಿಎಂ ಸ್ಥಾನದಲ್ಲಿ ಮುಂದುವರೆದರೆ ಸಾಂವಿಧಾನಿಕ ಬಿಕ್ಕಟ್ಟು ಸಂಭವಿಸಬಹುದು ಎಂದು ಅವರು ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ. ವಿಪರ್ಯಾಸವೆಂದರೆ, ಒಬ್ಬ ಮುಖ್ಯಮಂತ್ರಿ ಹೊರತುಪಡಿಸಿ ಬೇರೆ ಯಾರೂ ಕೂಡ ಉತ್ತರಾಖಂಡ ಸಿಎಂ ಆಗಿ ಪೂರ್ಣಾವಧಿಯನ್ನು ಪೂರೈಸಿಲ್ಲ. ಇದುವರೆಗೆ ಉತ್ತರಾಖಂಡ 9 ಮುಖ್ಯಮಂತ್ರಿಗಳನ್ನು ಕಂಡಿದೆ. 2000ರಲ್ಲಿ ಉತ್ತರಾಖಂಡ ರಾಜ್ಯ ರಚನೆಯಾದ ನಂತರ 2002 ರಿಂದ 2007 ರವರೆಗೆ ಎನ್.ಡಿ ತಿವಾರಿ  ಅವರು ಐದು ವರ್ಷಗಳ ಕಾಲ ಕಾಂಗ್ರೆಸ್ ಸರ್ಕಾರವನ್ನು ಯಶಸ್ವಿಯಾಗಿ ಮುನ್ನಡೆಸಿದ್ದರು.

2000ರಲ್ಲಿ ಹಂಗಾಮಿ ವಿಧಾನಸಭೆ ರಚನೆಯಾದಾಗ ಬಿಜೆಪಿ ಸರ್ಕಾರ ರಚಿಸಿತ್ತು. ಆಗ ನಿತ್ಯಾನಂದ ಸ್ವಾಮಿ ಮೊದಲ ಮುಖ್ಯಮಂತ್ರಿಯಾಗಿದ್ದರು. ನಂತರ ಭಗತ್ ಸಿಂಗ್ ಕೋಶಿಯಾರಿ ಸಿಎಂ ಆಗಿದ್ದರು. 2007ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಭುವನ್ ಚಂದ್ರ ಖಂಡೂರಿ , ರಮೇಶ್  ಪೋಕ್ರಿಯಾಲ್ (2ವರ್ಷ 75 ದಿನ) ಮತ್ತೊಮ್ಮೆ ಖಂಡೂರಿ (184 ದಿನ) ಸಿಎಂ ಆಗಿದ್ದರು. 2012 ರಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಅಧಿಕಾರ ಹಿಡಿದಾಗಲೂ ವಿಜಯ್ ಬಹುಗುಣ (1 ವರ್ಷ 324 ದಿನ), ಮತ್ತು ಹರೀಶ್ ರಾವತ್ (2 ವರ್ಷ 55 ದಿನ) ಸಿಎಂ ಆಗಿದ್ದರು. ಈ ಅವಧಿಯಲ್ಲಿ ಕೆಲಕಾಲ ರಾಷ್ಟ್ರಪತಿ  ಆಡಳಿತವೂ ಜಾರಿಯಲ್ಲಿತ್ತು. ನಾಲ್ಕನೇ ವಿಧಾನಸಭೆಗೆ ನಡೆದ (2017 ರಿಂದ 2022) ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೇರಿದಾಗ ತ್ರಿವೇಂದ್ರ ಸಿಂಗ್ ರಾವತ್ ಸುಮಾರು 4 ವರ್ಷ ಸಿಎಂ ಆಗಿದ್ದರು. ಕಳೆದ ನಾಲ್ಕು ತಿಂಗಳ ಹಿಂದೆ ಬಿಜೆಪಿ ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ  ನೀಡಿದ್ದರಿಂದ ತೀರ್ಥ ಸಿಂಗ್ ರಾವತ್ 114 ದಿನ ಆಡಳಿತ ನಡೆಸಿ ಅವಧಿಗೂ ಮುನ್ನವೇ ನಿರ್ಗಮಿಸಿದ್ದಾರೆ.

ಶಾಸಕರಾಗಿ ಆಯ್ಕೆಯಾಗುವಲ್ಲಿ ತೀರತ್ ಸಿಂಗ್ ವಿಫಲ
ತೀರತ್ ಸಿಂಗ್ ಅವರು ಶಾಸಕರಾಗಿರಲಿಲ್ಲ. ಹೀಗಾಗಿ ಅವರು ಮುಂದಿನ ಎರಡು ತಿಂಗಳು ಒಳಗೆ ಚುನಾವಣೆಗೆ ಸ್ಪರ್ಧಿಸಬೇಕಾಗಿತ್ತು. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದು ಸಾಧ್ಯವಾಗಿರಲಿಲ್ಲ ಎಂದು ಚುನಾವಣೆ ಆಯೋಗ ಹೇಳಿತ್ತು. ಅಲ್ಲದೇ ಚುನಾವಣೆ ನಡೆಸಬೇಕಾದರೆ ಅವಧಿ ಕನಿಷ್ಠ 1 ವರ್ಷ ಇರಬೇಕು ಎಂಬ ನಿಯಮ ಕೂಡ ಇದೆ. ಹೀಗಾಗಿ ಅವರು ಸಿಎಂ ಆಗಿ ಮುಂದುವರೆಯಲು ಸಾಧ್ಯವಾಗಲಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com