ಅತ್ಯಮೂಲ್ಯವಾದ ಕೋವಿಡ್ ಲಸಿಕಾ ದತ್ತಾಂಶ ವ್ಯರ್ಥ ಮಾಡಿದ ಭಾರತ: ಖ್ಯಾತ ವೈರಾಲಜಿಸ್ಟ್ ಗಗನ್ ದೀಪ್ ಕಾಂಗ್

ಭಾರತ ಈ ವರೆಗೂ 30 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿದ್ದು, ಈ ಕುರಿತ ಅತ್ಯಮೂಲ್ಯವಾದ ದತ್ತಾಂಶಗಳನ್ನು ಭಾರತ ವ್ಯರ್ಥ ಮಾಡಿದೆ ಎಂದು ಖ್ಯಾತ ವೈರಾಲಜಿಸ್ಟ್ ಗಗನ್ ದೀಪ್ ಕಾಂಗ್ ಹೇಳಿದ್ದಾರೆ.

Published: 06th July 2021 02:38 PM  |   Last Updated: 06th July 2021 04:00 PM   |  A+A-


Covid first wave-antibiotic misuse

ಸಂಗ್ರಹ ಚಿತ್ರ

The New Indian Express

ಬೆಂಗಳೂರು: ಭಾರತ ಈ ವರೆಗೂ 30 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿದ್ದು, ಈ ಕುರಿತ ಅತ್ಯಮೂಲ್ಯವಾದ ದತ್ತಾಂಶಗಳನ್ನು ಭಾರತ ವ್ಯರ್ಥ ಮಾಡಿದೆ ಎಂದು ಖ್ಯಾತ ವೈರಾಲಜಿಸ್ಟ್ ಗಗನ್ ದೀಪ್ ಕಾಂಗ್ ಹೇಳಿದ್ದಾರೆ.

ಭಾರತದಲ್ಲಿನ ಕೋವಿಡ್ ಪರಿಸ್ಥಿತಿ ಕುರಿತು ಮಾತನಾಡಿರುವ ಸಿಎಮ್‌ಸಿ ವೆಲ್ಲೂರಿನ ಹೆಸರಾಂತ ವೈರಾಲಜಿಸ್ಟ್ ಮತ್ತು ವ್ಯಾಕ್ಸಿನೇಷನ್ ಪ್ರೋಟೋಕಾಲ್‌ಗಳ ಕರ್ನಾಟಕದ ಸಲಹೆಗಾರರೂ ಕೂಡ ಆಗಿರುವ ಡಾ.ಗಗನ್‌ದೀಪ್ ಕಾಂಗ್ ಅವರು, ಭಾರತ ಈ ವರೆಗೂ 30 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿದ್ದು, ಈ  ಕುರಿತ ಅತ್ಯಮೂಲ್ಯವಾದ ದತ್ತಾಂಶಗಳನ್ನು ಭಾರತ ವ್ಯರ್ಥ ಮಾಡಿದೆ ಎಂದು ಹೇಳಿದ್ದಾರೆ.

ಈ ಕುರಿತಂತೆ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಕೋವಿಡ್ ಸೋಂಕು ಪ್ರಕರಣಗಳು ಹೆಚ್ಚಿರುವಾಗ ನಿರ್ಬಂಧಗಳನ್ನು ಹೇರುತ್ತೇವೆ. ಸೋಂಕು ಕಡಿಮೆಯಾದಾಗ ನಿರ್ಬಂಧಗಳನ್ನು ಸಡಿಲಗೊಳಿಸುತ್ತೇವೆ. ನಿರ್ಬಂಧಗಳ ಕುರಿತಾಗಿ ಒಂದು ನಿರ್ಧಿಷ್ಠ ಪ್ರೋಟೋಕಾಲ್ ಅನ್ನು ನಾವು ಬಳಸುತ್ತಿಲ್ಲ. ಹೀಗಾಗಿ  ನಿರ್ಬಂಧಿಗಳನ್ನು ಹೇರಿದಾಗ ಸೋಂಕು ಕಡಿಮೆಯಾಗುತ್ತದೆ. ಸಡಿಲಗೊಳಿಸಿದರೆ ಸೋಂಕು ಹೆಚ್ಚಾಗುತ್ತದೆ. ನಾವು ಇಂತಹ ಬೆಳವಣಿಗೆಯನ್ನು ಕಳೆದ 2 ಅಲೆಗಳಲ್ಲೂ ನೋಡಿದ್ದೇವೆ. ಆದರೆ ಸೋಂಕು ಉಲ್ಬಣ ಸೂಚಕಗಳನ್ನು ಗಮನಿಸಿ ನಾವು ಮಹಾರಾಷ್ಟ್ರದ ತಂತ್ರ ಅಥವಾ ಮಾದರಿಗಳನ್ನು ಅಳವಡಿಸಿಕೊಳ್ಳಬೇಕು.  ಕೇವಲ ಪ್ರಕರಣಗಳ ವಿಷಯದಲ್ಲಿ ಮಾತ್ರವಲ್ಲ, ಐಸಿಯು ಪ್ರವೇಶ ಮತ್ತು ಮರಣಗಳನ್ನೂ ಸಹ ಗಮನಿಸಿ ಮತ್ತು ನಿರ್ಬಂಧಗಳನ್ನು ಪುನಃ ಪರಿಚಯಿಸಬೇಕು ಎಂದು ಹೇಳಿದ್ದಾರೆ.

30 ಕೋಟಿಗೂ ಅಧಿಕ ಡೋಸ್ ಲಸಿಕಾ ದತ್ತಾಂಶ ವ್ಯರ್ಥ
ಇದೇ ವೇಳೆ ಭಾರತ ಈ ವರೆಗೂ ಸುಮಾರು 30 ಕೋಟಿಗೂ ಅಧಿಕ ಡೋಸ್ ಲಸಿಕೆ ನೀಡಿದೆ. ಕುರಿತ ಅಮೂಲ್ಯವಾದ ದತ್ತಾಂಶವನ್ನು ಭಾರತ ವ್ಯರ್ಥ ಮಾಡಿದೆ. ಹೊಸ ವೈರಸ್ ಬಂದಾಗಲೆಲ್ಲಾ ನಾವು ಹೊಸ ಲಸಿಕೆಗಳನ್ನು ತರಬೇಕಾಗಿದೆ. ಇದಕ್ಕಾಗಿ, ನಮಗೆ ದತ್ತಾಂಶಗಳು ಬೇಕು. ನಮ್ಮದೇ ಡೇಟಾಬೇಸ್  ಸಾಫ್ಟ್‌ವೇರ್ ಅನ್ನು ಸಿದ್ಧಪಡಿಸಿಕೊಂಡು ನಾವೇಕೆ ಪರಸ್ಪರ ಸಂಪರ್ಕ ಸಾಧಿಸಲು ಸಾಧ್ಯವಿಲ್ಲ? ಎಂದು ಕಾಂಗ್ ಪ್ರಶ್ನಿಸಿದ್ದಾರೆ. 

ದೇಶವು ಕೋವಿಡ್ 2ನೇ ಅಲೆಯ ಹೊಡೆತದಿಂದ ನಿಧಾನಕ್ಕೆ ಹೊರ ಬರುತ್ತಿದ್ದು, ಲಸಿಕೆ ಪ್ರಮಾಣಗಳ ಸಮಯ ಮತ್ತು ವ್ಯಾಕ್ಸಿನೇಷನ್ ತಂತ್ರಗಳನ್ನು ಹೆಚ್ಚಿಸುವ ಅಗತ್ಯತೆಯ ಬಗ್ಗೆ ಪ್ರಶ್ನೆಗಳನ್ನು ಎದುರಿಸುತ್ತಿದೆ. ಈ ಹಂತದಲ್ಲಿ ಡಾ.ಕಾಂಗ್ ಅವರು ಲಸಿಕೆಗಳ ಮಿಶ್ರಣ ಮತ್ತು ಹೊಂದಾಣಿಕೆಯ ಕೆಲವು ಪ್ರಮುಖ  ಅಂಶಗಳ ಕುರಿತು ಮಾತನಾಡಿದ್ದಾರೆ. ಅಲ್ಲದೆ ಮೂರನೆ ಅಲೆಯ ನಿರ್ವಹಣೆ, ಅದರ ಸನ್ನದ್ಧತೆ ಮತ್ತು ಮುಖ್ಯವಾಗಿ ದತ್ತಾಂಶ ಏಕೀಕರಣದ ಕುರಿತು ಅವರು ಸಾಕಷ್ಟು ಅಂಶಗಳನ್ನು ಹಂಚಿಕೊಂಡಿದ್ದಾರೆ.

*ನಾವು ಎರಡನೇ ಅಲೆಯ ನಡುವೆಯೇ ಮಹಾರಾಷ್ಟ್ರದಲ್ಲಿ ಪ್ರಕರಣಗಳ ಹೆಚ್ಚಳಕ್ಕೆ ಸಾಕ್ಷಿಯಾಗಿದ್ದೇವೆ ಮತ್ತು ಈಗಾಗಲೇ ಮೂರನೇ ಅಲೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮೂರನೇ ಅಲೆ ಯಾವಾಗ ಅಪ್ಪಳಿಸುತ್ತದೆ ಎಂದು ನೀವು ಭಾವಿಸುತ್ತೀರಿ?
ಎರಡನೇ ಅಲೆಯಲ್ಲಿ ಸೋಂಕು ಪ್ರಕರಣಗಳ ಕುಸಿತಕ್ಕೆ ಸರ್ಕಾರಗಳು ಕೈಗೊಂಡ ನಿರ್ಬಂಧಗಳು ಅಂದರೆ, ಲಾಕ್ ಡೌನ್, ಪರೀಕ್ಷೆಗಳ ಸಂಖ್ಯೆ ಏರಿಕೆಯ ಸೂಕ್ತ ಸಮಯದಲ್ಲಿ ಚಿಕಿತ್ಸೆ, ಸೋಂಕಿತರು ಮತ್ತು ಸೋಂಕಿತರ ಸಂಪರ್ಕಿತ ಪತ್ತೆ ಹಚ್ಚುವಿಕೆ, ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ಪ್ರಯಾಣ  ನಿರ್ಬಂಧಗಳಂತಹ ಕ್ರಮಗಳಿಂದಾಗಿ ಸೋಂಕು ಪ್ರಮಾಣ ಮತ್ತು ಮರಣ ಪ್ರಮಾಣ ಇಂದು ಕುಸಿತವಾಗುತ್ತಿದೆ. ಅಲ್ಲದೆ ಇದೀಗ ಕೋವಿಡ್ ನಿರ್ಬಂಧಗಳನ್ನು ಕ್ರಮೇಣ ಸಡಿಲಗೊಳಿಸಲಾಗುತ್ತಿದ್ದು, ಈ ಹಂತದಲ್ಲಿ ಜನ ಹೆಚ್ಚೆಚ್ಚು ತಿರುಗಾಡುತ್ತಿದ್ದಾರೆ. ಈ ಹಂತದಲ್ಲಿ ನಾವು ಕೇವಲ ಪರೀಕ್ಷಾ ಪ್ರಮಾಣಸ ಮತ್ತು  ಸಕಾರಾತ್ಮಕ ದರಗಳನ್ನು ಮಾತ್ರ ಟ್ರಾಕ್ ಮಾಡುವುದಷ್ಟೇ ಅಲ್ಲ.. ಜೊತೆ ಜೊತೆಗೇ ಆಸ್ಪತ್ರೆಗೆ ದಾಖಲಾಗುವ ಸೋಂಕಿತರ ಪ್ರಮಾಣ, ಮರಣ ಪ್ರಮಾಣವನ್ನು ಕೂಡ ಅವಲೋಕಿಸಬೇಕಿದೆ. ಈ ಅಂಶಗಳೇ ನಮಗೆ ಮುಂದಿನ ಅಲೆ ಅಥವಾ ಸೋಂಕಿನ ಭವಿಷ್ಯದ ಮುನ್ಸೂಚನೆ ನೀಡುತ್ತದೆ. ಹೀಗಾಗಿ ಮಹಾರಾಷ್ಟ್ರವು  ಅಭಿವೃದ್ಧಿಪಡಿಸಿದಂತಹ ತಂತ್ರಗಳನ್ನು ನಾವೂ ಸಹ ಹೊಂದಿರಬೇಕು. ನಿರ್ಬಂಧಗಳನ್ನು ಹೇರುವ ಮತ್ತು ಹಿಂತೆಗೆದುಕೊಳ್ಳು ಕುರಿತು ಈ ಇದು ಪ್ರಮುಖವಾಗುತ್ತದೆ ಎಂದು ಕಾಂಗ್ ಹೇಳಿದ್ದಾರೆ.  

*ಕೋವಿಶೀಲ್ಡ್ ನ ಡೋಸಿಂಗ್ ಅಂತರದ ಬಗ್ಗೆ ಗೊಂದಲವಿದ್ದು, ಕಡಿಮೆ ದಿನಗಳ ಅವಧಿಯಲ್ಲಿ ಎರಡು ಡೋಸ್ ಲಸಿಕೆಗಳನ್ನು ಪಡೆದರೆ ಉತ್ತಮ ಪರಿಣಾಮಕಾರಿತ್ವವನ್ನು ನೀಡುತ್ತದೆ ಎಂದು ಲ್ಯಾನ್ಸೆಟ್ ಪ್ರಕಟಣೆ ಸೂಚಿಸುತ್ತದೆ. ಆದಾಗ್ಯೂ, ಆಕ್ಸ್‌ಫರ್ಡ್ ಲಸಿಕೆ ಗುಂಪು, ತಮ್ಮ ಪೂರ್ವ ಮುದ್ರಣ ಪ್ರಕಟಣೆಗಳಲ್ಲಿ, ಉತ್ತಮ  ರೋಗನಿರೋಧಕತ್ವಕ್ಕೆ 10 ತಿಂಗಳ ಮಧ್ಯಂತರ ಅಂತರ ಉತ್ತಮವಾಗಿದೆ ಎಂದು ಹೇಳುತ್ತದೆ. ಇದರ ನಡುವೆ ಭಾರತವು 84 ದಿನಗಳ ಅಂತರವನ್ನು ಆಯ್ಕೆ ಮಾಡಿದೆ. ಕೋವಿಶೀಲ್ಡ್ ನ ಎರಡು ಡೋಸ್ ಗಳಿಗೆ ಸೂಕ್ತವಾದ ಅವಧಿ ಬಗ್ಗೆ ಸರ್ಕಾರಕ್ಕೆ ನಿಮ್ಮ ಸಲಹೆ ಏನು?
ಆದರ್ಶ (Ideal) ಮತ್ತು ಪ್ರಾಯೋಗಿಕ (Practical) ಸನ್ನಿವೇಶದ ನಡುವೆ ವ್ಯತ್ಯಾಸವಿದೆ. ಹೆಚ್ಚಿನ ವ್ಯಾಕ್ಸಿನೇಷನ್‌ಗಳಿಗೆ ಎರಡು ಡೋಸ್‌ಗಳ ನಡುವಿನ ಆದರ್ಶ ಮಧ್ಯಂತರವು 4 ರಿಂದ 6 ತಿಂಗಳುಗಳವರೆಗೆ ಇರುತ್ತದೆ. ಆದರೆ, ನೆನಪಿಡುವ ಒಂದು ವಿಷಯವೆಂದರೆ ಲಸಿಕೆಗಳ ನಡುವೆ ನಿಮಗೆ ಕನಿಷ್ಠ  ಮೂರು ವಾರಗಳ ಅಂತರ ಬೇಕು; ಗರಿಷ್ಠ ಇಲ್ಲ. ಎರಡನೇ ಡೋಸ್ ಅನ್ನು ಗರಿಷ್ಠ ಲಾಭ (ರೋಗ ನಿರೋಧಕ ಸಾಮರ್ಥ್ಯ)ಕ್ಕಾಗಿ ಪಡೆಯಲಾಗುತ್ತದೆ.  ಈ ಪ್ರಯೋಜನವನ್ನು ನೀವು ಎಷ್ಟು ಬೇಗನೆ ಬಯಸುತ್ತೀರಿ ಎಂಬುದು ಪ್ರಶ್ನೆ. ಸಂಪೂರ್ಣ ಅಥವಾ ಪೂರ್ಣ ರಕ್ಷಣೆ ಪಡೆಯಲು ನಿಮಗೆ ಎರಡು ಡೋಸ್ ಗಳು  ಬೇಕಾಗುವಂತಹ ಪರಿಸ್ಥಿತಿ ಇದ್ದರೆ, ನೀವು ಅದನ್ನು ಕಡಿಮೆ ಅವಧಿಯಲ್ಲಿ ಪಡೆಯಲು ಬಯಸಬಹುದು. ನೀವು ಸೋಂಕಿಗೆ ತೆರೆದುಕೊಳ್ಳುವ ಅಪಾಯ ಹೆಚ್ಚಿದ್ದರೆ ಕಡಿಮೆ ಅವಧಿಯಲ್ಲಿ ಎರಡನೇ ಡೋಸ್ ಪಡೆಯಬಹುದು, ಸೋಂಕಿಗೆ ತೆರೆದುಕೊಳ್ಳುವಿಕೆ ಅಪಾಯ ಕಡಿಮೆ ಇದ್ದರೆ 2ನೇ ಡೋಸ್ ಪಡೆಯುವಿಕೆಯನ್ನು  ಮುಂದೂಡಬಹುದು. ಸೋಂಕು ಅಪಾಯ ಹೆಚ್ಚಿದ್ದರ ಮಾತ್ರ ನೀವು ಮೊದಲ ಮತ್ತು 2ನೇ ಡೋಸ್ ಗಳ ನಡುವಿನ ಅಂತರನ್ನು ಸಮತೋಲನಗೊಳಿಸಿಕೊಳ್ಳಬೇಕಾಗುತ್ತದೆ ಎಂದು ಕಾಂಗ್ ಅಭಿಪ್ರಾಯಪಟ್ಟಿದ್ದಾರೆ.

*ಬ್ರಿಟನ್ ನಲ್ಲಿ ನಡೆದ ಅಧ್ಯಯನವೊಂದರಲ್ಲಿ ಲಸಿಕೆಗಳ ಪರ್ಯಾಯ ಪ್ರಮಾಣ SARS-CoV2 ವೈರಸ್ ನ IgG ಪ್ರೋಟೀನ್ ವಿರುದ್ಧ ದೃಢವಾದ ರೋಗನಿರೋಧಕ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಲಾಗಿದೆ. ಈ ರೀತಿಯ ಲಸಿಕೆ ಮಿಶ್ರಣ ಮತ್ತು ಹೊಂದಾಣಿಕೆಯನ್ನು ನೀವು ಶಿಫಾರಸು  ಮಾಡುತ್ತೀರಾ? ಈ ನಿಟ್ಟಿನಲ್ಲಿ ಭಾರತದಲ್ಲಿ ಯಾವುದೇ ಅಧ್ಯಯನ ನಡೆಯುತ್ತಿದೆಯೇ?
ನಾವು ಈ ರೀತಿಯ ಅಧ್ಯಯನಗಳನ್ನು ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ ನಮ್ಮಲ್ಲಿರುವ ಲಸಿಕೆಗಳು ಜಗತ್ತಿನ ಬೇರೆ ದೇಶಗಳಲ್ಲಿ ಲಭ್ಯವಿಲ್ಲ. ಒಂದು ವೇಳೆ ಅವರು ಲಸಿಕೆಗಳನ್ನು ರಫ್ತು ಮಾಡುವುದಾದರೆ ಆಗ ಖಂಡಿತಾ ಇಂತಹ ಅಧ್ಯಯನಗಳನ್ನು ಮಾಡಬೇಕು. ಇದರಿಂದಾಗಿ ಪ್ರಪಂಚದ ಉಳಿದ  ಭಾಗಗಳಿಗೆ ಅದರ ಅನುಕೂಲಗಳ ಬಗ್ಗೆ ಮಾಹಿತಿ ನೀಡಲು ನಮಗೆ ಮಾಹಿತಿ ಇರುತ್ತದೆ ಎಂದು ಹೇಳಿದ್ದಾರೆ.

*ಭಾರತದಲ್ಲಿ ಅಧ್ಯಯನ ಮಾಡಬಹುದಾದ ಲಸಿಕೆಗಳು ಯಾವುವು?
ಸ್ಪುಟ್ನಿಕ್ ಈಗಾಗಲೇ ಅಸ್ಟ್ರಾಜೆನೆಕಾದ ಒಂದು ಡೋಸ್ ಮತ್ತು ಸ್ಪುಟ್ನಿಕ್ ಒಂದು ಡೋಸ್ನೊಂದಿಗೆ ಮಿಶ್ರಣ ಮತ್ತು ಹೊಂದಾಣಿಕೆಯ ಅಧ್ಯಯನವನ್ನು ಹೊಂದಿದೆ. ನಾವು ವಿಭಿನ್ನ ಕ್ರಮಪಲ್ಲಟನೆಗಳ ಬಗ್ಗೆ ಯೋಚಿಸಬೇಕು ಮತ್ತು ಅವೆಲ್ಲವನ್ನೂ ಮೌಲ್ಯಮಾಪನ ಮಾಡಬೇಕು. ನಾವು ಪರಿಣಾಮಕಾರಿತ್ವವನ್ನು  ಹುಡುಕುತ್ತಿಲ್ಲವಾದ್ದರಿಂದ ಇದು ಹೆಚ್ಚಿನ ಸಂಖ್ಯೆಯಲ್ಲಿ ಇರಬೇಕಾಗಿಲ್ಲ, ನಾವು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಹುಡುಕುತ್ತಿದ್ದೇವೆ ಮತ್ತು ಪ್ರತಿಕಾಯಗಳ ಪ್ರತಿಕ್ರಿಯೆ ಅಥವಾ ಟಿ-ಸೆಲ್ ಪ್ರತಿಕ್ರಿಯೆಯನ್ನು ಅಳೆಯುತ್ತೇವೆ. ಇದು ಪರಿಣಾಮಕಾರಿತ್ವವನ್ನು ಹೇಗೆ ವರ್ಗಾಯಿಸುತ್ತದೆ ಎಂದು ನಮಗೆ ತಿಳಿದಿಲ್ಲ, ಆದರೆ ಅಲ್ಲಿ  ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಲು ಖಂಡಿತವಾಗಿಯೂ ಒಂದು ಪ್ರಯೋಜನವಾಗಿರುತ್ತದೆ ಎಂದು ಕಾಂಗ್ ಅಭಿಪ್ರಾಯಪಟ್ಟಿದ್ದಾರೆ. 

*ಲಸಿಕಾ ಅಭಿಯಾನದ ಪ್ರೋಟೋಕಾಲ್ ಸಿದ್ಧತೆ ಮತ್ತು ಲಸಿಕೆ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಲು ನಿಮ್ಮನ್ನು ಕರ್ನಾಟಕ ಸರ್ಕಾರದ ಸಲಹೆಗಾರರಾಗಿ ನೇಮಿಸಲಾಗಿದೆ. ನೀವು ಸೂಚಿಸಿದ ಕೆಲವು ತಂತ್ರಗಳು ಯಾವುವು?
ನಾನು ಹಲವಾರು ಸಭೆಗಳನ್ನು ನಡೆಸಿ, ಹಲವು ತಂತ್ರಗಳನ್ನು ಸೂಚಿಸಿದ್ದೇನೆ. ಈ ಪೈಕಿ ಹಲವು ನೆರವಾಗಿದೆ ಎಂದು ಸರ್ಕಾರ ಹೇಳಿದೆ. ಇದು ಹೆಚ್ಚಿನ ಅಪಾಯದ ಜನಸಂಖ್ಯೆಯನ್ನು ಗುರುತಿಸುವಂತಹ ಕೆಲವು ಮೂಲಭೂತ ತತ್ವಗಳನ್ನು ಸೂಚಿಸಿದ್ದು, ತೀವ್ರ ರೋಗ ಹೊಂದಿರುವವರು ಅಥವಾ ಹರಡುವಿಕೆಯ  ಹೆಚ್ಚಿನ ಅಪಾಯದಲ್ಲಿರುವ ಜನರು, ನಾವು ಈ ಗುಂಪುಗಳಿಗೆ ಆದ್ಯತೆ ನೀಡುತ್ತೇವೆ ಎಂದು ಖಚಿತಪಡಿಸಿಕೊಳ್ಳಬೇಕು. ನೀವು ಸೀಮಿತ ಸಂಖ್ಯೆಯ ಡೋಸ್ ಗಳನ್ನು ಹೊಂದಿರುವಾಗ, ತಂತ್ರಗಾರಿಕೆ ಹೊಂದುವ ಮೂಲಕ ನೀವು ಆ ಡೋಸ್ ಗಳ ಮೌಲ್ಯವನ್ನು ಗರಿಷ್ಠಗೊಳಿಸುತ್ತೀರಿ. ಅದನ್ನು ರಾಜ್ಯಾದ್ಯಂತ ವ್ಯಾಪಕವಾಗಿ  ವಿತರಿಸುವುದು ಇರಬಾರದು, ಬದಲಿಗೆ ಪ್ರಯತ್ನಗಳನ್ನು ಕೇಂದ್ರೀಕರಿಸಲು ಪ್ರಯತ್ನಿಸಿ ಇದರಿಂದ ನೀವು ಸಾರ್ವಜನಿಕರಿಗೆ ಗರಿಷ್ಠ ಸಮಯವನ್ನು ನೀಡಿದಂತಾಗುತ್ತದೆ ಎಂದು ಹೇಳಿದರು.

*ರೂಪಾಂತರಗಳನ್ನು ವೇಗವಾಗಿ ಪತ್ತೆ ಮಾಡಲು ದತ್ತಾಂಶವನ್ನು ಸಂಯೋಜಿಸುವ ಅಗತ್ಯವಿದೆಯೇ? ದತ್ತಾಂಶ ಈಗ ಎಲ್ಲೆಡೆ ಇದೆ: ಉದಾಹರಣೆಗೆ, INSACOG, ಆರೋಗ್ಯಾ ಸೇತು, ಕೋ-ವಿನ್, ಇವಿನ್, NDHM, NCDIR, ಇತ್ಯಾದಿ.
ಇದನ್ನು ಸರ್ಕಾರಕ್ಕೆ ಅನಂತವಾಗಿ ಸೂಚಿಸಲಾಗಿದೆ. ಜನರು ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ದತ್ತಾಂಶ ವ್ಯವಸ್ಥೆಗಳನ್ನು ನಿರ್ಮಿಸಿದಾಗ, ಮತ್ತು ನೀವು ಅದನ್ನು ಬೇರೆ ಯಾವುದನ್ನಾದರೂ ಬಳಸಲು ಬಯಸಿದರೆ, ದತ್ತಾಂಶವು ಪರಸ್ಪರ ಸಂಪರ್ಕಿಸಲು, ಸಂಯೋಜನೆಗೊಳ್ಳಲು ಸಾಧ್ಯವಾಗಬೇಕು ಎಂಬುದನ್ನು  ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಈಗ, ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ, ವೈರಸ್ ಕಾಣಿಸಿಕೊಂಡಾಗ, ನಿಮಗೆ ಕ್ಲಿನಿಕಲ್ ಮಾಹಿತಿ, ಭೌಗೋಳಿಕ ಮಾಹಿತಿ ಇತ್ಯಾದಿಗಳ ಅಗತ್ಯವಿರುವ ಲಸಿಕೆ ಔಷಧಿಯನ್ನು ತಯಾರಿಸುವ ಪ್ರಯತ್ನಬೇಕಿದೆ ಎಂದು ನಿಮಗೆ ತಿಳಿದಿದೆ.

ನೀವು ಪ್ರಾರಂಭದಲ್ಲಿಯೇ ಡೇಟಾಬೇಸ್ ಅನ್ನು ನಿರ್ಮಿಸಿದಾಗ ಅದು ಅರ್ಥಪೂರ್ಣವಾಗಿರುತ್ತದೆ. ಇದರಿಂದ ನಾವು ಇದನ್ನು ಮಾಡಬಹುದು. ದುರದೃಷ್ಟವಶಾತ್, ಅದು ಸಂಭವಿಸಲಿಲ್ಲ. ನಾವು ಈ ದೇಶದಲ್ಲಿ 330 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡಿದ್ದೇವೆ ಮತ್ತು ಲಸಿಕೆಗಳು ಎಷ್ಟು ಚೆನ್ನಾಗಿ ಅಥವಾ ಕೆಟ್ಟದಾಗಿ  ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ನಮಗೆ ಯಾವುದೇ ಕಲ್ಪನೆ ಇಲ್ಲ. 10 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ಅವಲಂಬಿಸಿರುವ ಸಿಎಮ್‌ಸಿ ವೆಲ್ಲೂರು ಪ್ರಕಟಿಸಿದ ಒಂದು ಪ್ರಕಟಣೆ ಇದೆ. ನಾವು ಇತರ ಸ್ಥಳಗಳಿಂದ ಇದೇ ರೀತಿಯ ದತ್ತಾಂಶವನ್ನು ವರದಿ ಮಾಡಿದ್ದೇವೆ, ಆದರೆ ಇನ್ನೂ ಅದು  ಪ್ರಕಟಗೊಂಡಿಲ್ಲ. 330 ಮಿಲಿಯನ್ ಡೋಸ್ ಗಳ ಪೈಕಿ 10 ಸಾವಿರ ಲಸಿಕೆ ಪ್ರಮಾಣದ ದತ್ತಾಂಶ ಮಾತ್ರ ನಮ್ಮ ಬಳಿ ಇದೆ. ನಿಜಕ್ಕೂ ನಾವು 30 ಕೋಟಿಗೂ ಅಧಿಕ ದತ್ತಾಂಶಗಳನ್ನು ವ್ಯರ್ಥ ಮಾಡಿದ್ದೇವೆ. ನಮಗೆ ಅಥವಾ ಜಗತ್ತಿಗೆ ಒಳ್ಳೆಯದಾದ ಮಾಹಿತಿಯನ್ನು ನಾವು ವ್ಯರ್ಥ ಮಾಡುತ್ತಿದ್ದೇವೆ ಎಂದು ನಾನು  ಭಾವಿಸುತ್ತೇನೆ ಎಂದು ಕಾಂಗ್ ಅಭಿಪ್ರಾಯ ಪಟ್ಟಿದ್ದಾರೆ. 

*ಇದನ್ನು ಮಾಡುವುದು ಕಷ್ಟವೇ?
ಇದು ರಾಕೆಟ್ ವಿಜ್ಞಾನವಲ್ಲ. ಇದಕ್ಕೆ ಇತ್ತೀಚಿನ ಉದಾಹರಣೆ ಎಂದರೆ ಇಸ್ರೇಲ್.. ಜೀವಂತ ಪ್ರಯೋಗಾಲಯವಾಗಿ ಮಾರ್ಪಟ್ಟಿತು. ಇಸ್ರೇಲ್ ಬಹಳ ಸೀಮಿತ ಸಂಖ್ಯೆಯ ಜನರನ್ನು ಹೊಂದಿದೆ ಮತ್ತು ಅವರು ವ್ಯಾಕ್ಸಿನೇಷನ್ ಪ್ರಾರಂಭಿಸಿದ ಒಂದು ತಿಂಗಳ ನಂತರ ದತ್ತಾಂಶವನ್ನು ಪ್ರಕಟಿಸಲು ಸಾಧ್ಯವಾಯಿತು.  ನಾವು ಕೂಡ ಐದಾರು ತಿಂಗಳುಗಳನ್ನು ಕಂಡಿದ್ದೇವೆ. ಈ ವಾಸ್ತವಾಂಶದ ಹೊರತಾಗಿಯೂ ನಮ್ಮ ಡೇಟಾವನ್ನು ಅಲ್ಲಿಗೆ ಹಾಕಲು ನಮಗೆ ಸಾಧ್ಯವಾಗಲಿಲ್ಲ.

*ಒಟ್ಟಾರೆಯಾಗಿ ಹೇಳುವುದಾದರೆ, ಮೂರನೇ ಅಲೆಯನ್ನು ಹಿಮ್ಮೆಟಿಸಲು ಮಾಡಬೇಕಾದ ಕೆಲಸಗಳು ಯಾವುವು?
ಕೋವಿಡ್ ಪ್ರೋಟೋಕಾಲ್ಗಳ ಹೊರತಾಗಿ, ನಾವು ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸುವುದು ಮಾತ್ರವಲ್ಲ, ಸೋಂಕು ಪ್ರಕರಣಗಳು ಸಂಭವಿಸಿದಾಗ ಅವುಗಳನ್ನು ನಿರ್ವಹಿಸಲು ನಮ್ಮ ಕ್ಲಿನಿಕಲ್ ಸಾಮರ್ಥ್ಯವನ್ನು ಹೆಚ್ಚಿಸಲು ನಾವು ಸಿದ್ಧರಾಗಬೇಕು. ನಾವು ದೀರ್ಘ ಕೋವಿಡ್ ಸಾಂಕ್ರಾಮಿಕವನ್ನು ನೋಡಲಿದ್ದೇವೆ ಮತ್ತು ಜನರ  ಚಿಕಿತ್ಸೆಗಾಗಿ ನಾವು ಉತ್ತಮವಾಗಿ ಸಿದ್ಧರಾಗಿರಬೇಕು ಮತ್ತು ಅವರ ಬಗ್ಗೆ ಸಂಶೋಧನೆ ನಡೆಸಬೇಕು ಎಂದು ನಾವು ಭಾವಿಸುತ್ತೇವೆ ಇದರಿಂದ ನಾವು ಉತ್ತಮ ಚಿಕಿತ್ಸೆಯ ವಿಧಾನಗಳನ್ನು ಅಭಿವೃದ್ಧಿಪಡಿಸಬಹುದು. 

ಇನ್ನು ಕಣ್ಗಾವಲು ವಿಷಯದಲ್ಲಿ, ನಮ್ಮ ದೊಡ್ಡ ಅಪಾಯವೆಂದರೆ ರೂಪಾಂತರಗಳು. ಎಲ್ಲಿಯವರೆಗೆ ಹೆಚ್ಚಿನ ದರದಲ್ಲಿ ಸೋಂಕು ಪುನರಾವರ್ತನೆ ಸಂಭವಿಸುತ್ತದೆಯೋ ಅಲ್ಲಿಯವರೆಗೆ ರೂಪಾಂತರಗಳು ಹೊರಹೊಮ್ಮುತ್ತಲೇ ಇರುತ್ತವೆ. ಅವುಗಳನ್ನು ನಿಯಂತ್ರಿಸುವ ನಮ್ಮ ಉತ್ತಮ ಅವಕಾಶವೆಂದರೆ ಅವುಗಳನ್ನು  ಬೇಗನೆ ಸಮಸ್ಯೆಯೆಂದು ಗುರುತಿಸಲು ಸಾಧ್ಯವಾಗುತ್ತದೆ. ಶೀಘ್ರದಲ್ಲೇ ನಾವು ವೈರಸ್ ನ ನೈಜ-ಸಮಯದ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಪಡೆಯಲಿದ್ದೇವೆ ಎಂದು ಕಾಂಗ್ ಹೇಳಿದರು. 


Stay up to date on all the latest ರಾಷ್ಟ್ರೀಯ news
Poll
Nitish_Kumar1

2024 ರ ಲೋಕಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಅವರು ಸಂಯುಕ್ತ ವಿರೋಧ ಪಕ್ಷಗಳ ಪ್ರಧಾನಿ ಅಭ್ಯರ್ಥಿಯಾಗಬಹುದೇ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp