ಇಂದು ಸಂಜೆ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ನಿರೀಕ್ಷೆ: ಸಂಪುಟ ಸಭೆ ರದ್ದು, ದೆಹಲಿ ತಲುಪಿದ ನಾಯಕರು

ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಬುಧವಾರ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಂದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತೀವ್ರ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ.

ಇದಕ್ಕೂ ಮುನ್ನ ಇಂದು ನಡೆಯಬೇಕಿದ್ದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ(ಸಿಸಿಇಎ) ಮತ್ತು ಸಚಿವ ಸಂಪುಟ ಸಭೆಗಳು ಕೊನೆ ಕ್ಷಣದಲ್ಲಿ ರದ್ದಾಗಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. 

ಸಚಿವರ ಕಾರ್ಯದಕ್ಷತೆ ಮತ್ತು ಭವಿಷ್ಯದ ಯೋಜನೆಗಳ ಪ್ರಸ್ತಾವನೆಗಳ ಕುರಿತು ಚರ್ಚಿಸಲು ಈ ಸಭೆ ಆಯೋಜಿಸಲಾಗಿತ್ತು ಎನ್ನಲಾಗಿದೆ. ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಧರ್ಮೇಂದ್ರ ಪ್ರಧಾನ್, ಪಲ್ಹಾದ್ ಜೋಷಿ, ಪಿಯೂಷ್ ಗೋಯಲ್ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆಯಿತ್ತು.

ಪ್ರಧಾನಿ ಮೋದಿ ಸಂಪುಟಕ್ಕೆ ಸೇರ್ಪಡೆಯಾಗುವ ನಿರೀಕ್ಷಿತ ನಾಯಕರು ಈಗಾಗಲೇ ದೆಹಲಿಗೆ ತಲುಪಿದ್ದಾರೆ ಎಂದು ತಿಳಿದುಬಂದಿದೆ. 

ಇಂದು ಸಂಪುಟ ವಿಸ್ತರಣೆ: ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದ ನಂತರ ಮೋದಿ ಸಂಪುಟಕ್ಕೆ ನಡೆಯುತ್ತಿರುವ ಬಹುದೊಡ್ಡ ಸರ್ಜರಿ ಇಂದಾಗಿರುತ್ತದೆ. ಹೀಗಾಗಿ ಇಂದು ಯಾರಿಗೆಲ್ಲಾ ಕೇಂದ್ರ ಸಚಿವ ಸ್ಥಾನ ಸಿಗಲಿದೆ ಎಂಬ ಕುತೂಹಲ ಸಹಜವಾಗಿದೆ.

ಮುಂದಿನ ವರ್ಷ ಹಲವು ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವುದರಿಂದ ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಇಂದು ನಡೆಯುತ್ತಿರುವ ಸಚಿವ ಸಂಪುಟ ವಿಸ್ತರಣೆ ಮೋದಿಯವರಿಗೆ ಸವಾಲಾಗಿದೆ. ಈ ಬಾರಿಯ ಸಂಪುಟಕ್ಕೆ ಸೇರ್ಪಡೆಯಾಗುವ ಸಂಭಾವ್ಯ ನಾಯಕರು ಎಂದು ಹೇಳಲಾಗುತ್ತಿರುವ ಸರ್ಬಾನಂದ ಸೊನೊವಾಲ್, ಜ್ಯೋತಿರಾಧಿತ್ಯ ಸಿಂಧ್ಯಾ, ನಾರಾಯಣ್ ರಾಣೆ, ಕರ್ನಾಟಕದ ನಾಯಕರು ದೆಹಲಿಗೆ ತಲುಪಿದ್ದಾರೆ.

ಇಂದು ಬೆಳಗ್ಗೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ಸಾಧ್ಯತೆಯಿದ್ದು ಸಾಯಂಕಾಲ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮೋದಿ ಸರ್ಕಾರ ಏಳು ವರ್ಷಗಳ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ನಂತರ ಬಹುನಿರೀಕ್ಷಿತ ವಿಸ್ತರಣೆ ಇದಾಗಿದೆ. ಪ್ರಸ್ತುತ, ಕೇಂದ್ರ ಸರ್ಕಾರದಲ್ಲಿ 21 ಸಂಪುಟ ಸಚಿವರು, ಮಂತ್ರಿಗಳು, ಸ್ವತಂತ್ರ ಉಸ್ತುವಾರಿ ಹೊಂದಿರುವ 9 ಮಂತ್ರಿಗಳು ಮತ್ತು 23 ರಾಜ್ಯ ಸಚಿವರ ಇದ್ದಾರೆ. ಇಂದು ವಿಸ್ತರಣೆ ನಂತರ ಸಚಿವರ ಸಂಖ್ಯೆ 81ಕ್ಕೇರಬಹುದು ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com