ಜಮ್ಮು ಮತ್ತು ಕಾಶ್ಮೀರ: ಉಗ್ರರೊಂದಿಗೆ ಸಂಪರ್ಕ ಆರೋಪ 11 ಸರ್ಕಾರಿ ನೌಕರರು ವಜಾ; ಮೃತ ಉಗ್ರರ ಸಂಖ್ಯೆ 3ಕ್ಕೆ ಏರಿಕೆ

ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ 11 ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಉಗ್ರರೊಂದಿಗೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಜಮ್ಮು ಮತ್ತು ಕಾಶ್ಮೀರ 11 ಸರ್ಕಾರಿ ನೌಕರರನ್ನು ಸೇವೆಯಿಂದ ವಜಾಗೊಳಿಸಿದೆ ಎಂದು ತಿಳಿದುಬಂದಿದೆ.

ಈಗಾಗಲೇ ಕಣಿವೆ ರಾಜ್ಯದಲ್ಲಿ ಕಳೆದೊಂದು ವಾರದಿಂದ ನಿರಂತರವಾಗಿ ಉಗ್ರ ನಿಗ್ರಹ ಕಾರ್ಯಾಚರಣೆ ನಡೆಯುತ್ತಿದ್ದು, ಈ ವರೆಗೂ ಸುಮಾರು 9 ಉಗ್ರರರನ್ನು ಹೊಡೆದುರುಳಿಸುವಲ್ಲಿ ಸೇನಾಪಡೆಗಳು ಯಶಸ್ವಿಯಾಗಿವೆ. ಅಂತೆಯೇ ಇಬ್ಬರು ಸೇನಾಧಿಕಾರಿಗಳು ಹುತಾತ್ಮರಾಗಿದ್ದು, ಹಲವು ಸೈನಿಕರು  ಗಾಯಗೊಂಡಿದ್ದಾರೆ. ಈ ಕಾರ್ಯಾಚರಣೆ ಚಾಲ್ತಿಯಲ್ಲಿರುವಂತೆಯೇ ಇತ್ತ ಉಗ್ರರೊಂದಿಗೆ ಸಂಪರ್ಕ ಹೊಂದಿದ ಮತ್ತು ಉಗ್ರರಿಗೆ ನೆರವು ನೀಡಿದ ಆರೋಪದ ಮೇರೆಗೆ 11 ಸರ್ಕಾರಿ ನೌಕರರನ್ನು ಕೆಲಸದಿಂದ ವಜಾ ಮಾಡಲಾಗಿದೆ.

ಈ 11 ಸರ್ಕಾರಿ ನೌಕರರು ರಾಷ್ಟ್ರ ವಿರೋಧಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಕೆಲಸದಿಂದ ವಜಾ ಮಾಡಲಾಗಿದ್ದು, 11 ಮಂದಿಯ ಪೈಕಿ ಅನಂತ್‌ ನಾಗ್‌ನ ಇಬ್ಬರು ಶಿಕ್ಷಕರು, ಭಯೋತ್ಪಾದಕರಿಗೆ ಮಾಹಿತಿಯನ್ನು ಒದಗಿಸಲು ಬೆಂಬಲಿಸಿದ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳು ಸೇರಿದ್ದಾರೆ  ಎನ್ನಲಾಗಿದೆ. 

ವಜಾಗೊಂಡ 11 ಉದ್ಯೋಗಿಗಳಲ್ಲಿ 4 ಮಂದಿ ಅನಂತ್‌ನಾಗ್, 3 ಬದ್ಗಾಮ್, ಬಾರಾಮುಲ್ಲಾ, ಶ್ರೀನಗರ, ಪುಲ್ವಾಮಾ ಮತ್ತು ಕುಪ್ವಾರಾದ ತಲಾ ಒಬ್ಬರು ಸೇರಿದ್ದಾರೆ ಎನ್ನಲಾಗಿದೆ. ಈ ಪೈಕಿ 4 ಮಂದಿ ಶಿಕ್ಷಣ ಇಲಾಖೆಯಲ್ಲಿ, 2 ಮಂದಿ ಜೆ & ಕೆ ಪೊಲೀಸ್ ಇಲಾಖೆಯಲ್ಲಿ ಮತ್ತು ಕೃಷಿ, ಕೌಶಲ್ಯ ಅಭಿವೃದ್ಧಿ, ವಿದ್ಯುತ್,  ಸ್ಕೀಮ್ಸ್ ಮತ್ತು ಆರೋಗ್ಯ ಇಲಾಖೆಗಳಲ್ಲಿ ತಲಾ ಒಬ್ಬರು ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 

ಮೃತ ಉಗ್ರರ ಸಂಖ್ಯೆ 3ಕ್ಕೆ ಏರಿಕೆ
ಏತನ್ಮಧ್ಯೆ ಇಂದು ಅನಂತ್ ನಾಗ್ ನಲ್ಲಿ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರ ಸಂಖ್ಯೆ 3ಕ್ಕೆ ಏರಿಕೆಯಾಗಿದೆ. ದಕ್ಷಿಣ ಕಾಶ್ಮೀರ ಜಿಲ್ಲೆಯ ರಾಣಿಪೋರಾ ಪ್ರದೇಶದ ಕ್ವಾರಿಗಂನಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಈ ಮೂವರು ಉಗ್ರರು ಹತರಾಗಿದ್ದು, ಇನ್ನೂ ಸಾಕಷ್ಟು ಉಗ್ರರು ಅವಿತಿರುವ ಕುರಿತು  ಮಾಹಿತಿ ಲಭ್ಯವಾಗಿದ್ದು ಘಟನಾ ಪ್ರದೇಶದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ. ಭಯೋತ್ಪಾದಕರ ಗುರುತು ಮತ್ತು ಸಂಪರ್ಕ ಪತ್ತೆ ಮಾಡಲಾಗುತ್ತಿದೆ ಎಂದು ಐಜಿಪಿ ವಿಜಯ್ ಕುಮಾರ್ ಅವರು ಮಾಹಿತಿ ನೀಡಿದ್ದಾರೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com