ಕೋವಿಡ್ ನಿಂದ ತೀವ್ರಗೊಂಡ ಬಡತನದ ಸಂಕಷ್ಟ ಎದುರಿಸಲು ಕಿಡ್ನಿ ಮಾರಾಟ ಮಾಡಿದ ಅಸ್ಸಾಂ ಗ್ರಾಮಸ್ಥರು!

ಕೊರೋನಾ ಸಾಂಕ್ರಾಮಿಕದಿಂದ ಹಲವರ ಬಡತನದ ಸಂಕಷ್ಟ ತೀವ್ರಗೊಂಡಿದೆ. ಈ ನಡುವೆ ಬಡತನದ ಸಂಕಷ್ಟ ಎದುರಿಸಲು, ಧರಂತುಲ್ ಗ್ರಾಮದ ಹಲವು ಮಂದಿ ತಮ್ಮ ಕಿಡ್ನಿ ಮಾರಾಟ ಮಾಡಿಕೊಂಡಿದ್ದಾರೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಗುವಾಹಟಿ: ಕೊರೋನಾ ಸಾಂಕ್ರಾಮಿಕದಿಂದ ಹಲವರ ಬಡತನದ ಸಂಕಷ್ಟ ತೀವ್ರಗೊಂಡಿದೆ. ಈ ನಡುವೆ ಬಡತನದ ಸಂಕಷ್ಟ ಎದುರಿಸಲು, ಬ್ಯಾಂಕ್ ಸಾಲವನ್ನು ಮರುಪಾವತಿ ಮಾಡಲು, ಚಿಕಿತ್ಸೆ ವೆಚ್ಚಗಳನ್ನು ಭರಿಸಲು ಅಸ್ಸಾಂ ನ ಮೊರಿಗಾಂವ್ ಜಿಲ್ಲೆಯ ದಕ್ಷಿಣ ಧರಂತುಲ್ ಗ್ರಾಮದ ಹಲವು ಮಂದಿ ತಮ್ಮ ಕಿಡ್ನಿಗಳನ್ನು ಮಾರಾಟ ಮಾಡಿಕೊಂಡಿದ್ದಾರೆ. 

ಕಿಡ್ನಿ ಮಾರಾಟ ಜಾಲದ ಏಜೆಂಟ್ ಸೇರಿದಂತೆ ಮೂವರನ್ನು ಗ್ರಾಮದ ಕೆಲವು ಮಂದಿ ಪೊಲೀಸರ ವಶಕ್ಕೆ ಒಪ್ಪಿಸುವ ಮೂಲಕ ಈ ಅಘಾತಕಾರಿ ಮಾಹಿತಿ ಬೆಳಕಿಗೆ ಬಂದಿದೆ. ಈ ವರೆಗೂ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಗ್ರಾಮದ 30 ಮಂದಿ ಕಿಡ್ನಿ ಮಾರಾಟ ಮಾಡಿಕೊಂಡಿದ್ದಾರೆ. 

ವಿಚಾರಣೆ ವೇಳೆ ಅರ್ಧ ಡಜನ್ ಗೂ ಹೆಚ್ಚಿನ ಗ್ರಾಮಸ್ಥರು ತಮ್ಮ ಕಿಡ್ನಿಯನ್ನು ಮಾರಾಟ ಮಾಡಿಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ. ಕೆಲವರು ಸಾಲ ಮರುಪಾವತಿ ಮಾಡಲು, ಇನ್ನೂ ಕೆಲವರು ತಮ್ಮ ಕುಟುಂಬ ಸದಸ್ಯರಿಗೆ ಚಿಕಿತ್ಸೆ ಕೊಡಿಸುವುದಕ್ಕಾಗಿ ಕಿಡ್ನಿ ಮಾರಾಟ ಮಾಡಿದ್ದಾರೆ. ಗ್ರಾಮದಲ್ಲಿರುವ ಬಹುತೇಕ ಮಂದಿ ರೈತರು ಹಾಗೂ ದಿನ ನಿತ್ಯದ ವೇತನ ಪಡೆಯುವ ಕಾರ್ಮಿಕರಾಗಿದ್ದು, ಸಾಂಕ್ರಾಮಿಕದಿಂದ ತೀವ್ರವಾದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಿಡ್ನಿ ಮಾರಾಟ ಮಾಡಿರುವವರು ನೀಡಿರುವ ಮಾಹಿತಿಯ ಪ್ರಕಾರ ಅವರುಗಳನ್ನು ಕೋಲ್ಕತ್ತಾಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಕಿಡ್ನಿ ಮಾರಾಟ ಜಾಲದಲ್ಲಿದ್ದ ಓರ್ವ ಮಹಿಳೆ ಸೇರಿ ಒಟ್ಟು ಇಬ್ಬರನ್ನು ಬಂಧಿಸಲಾಗಿದೆ. ಮಹಿಳೆ ಪೊಲೀಸ್ ಕಸ್ಟಡಿಯಲ್ಲಿದ್ದಾರೆ ಎಂದು ಎಸ್ ಪಿ ಅಪರ್ಣ ನಟರಾಜನ್ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಮಾಹಿತಿ ನೀಡಿದ್ದಾರೆ. 

"ಕಿಡ್ನಿ ಮಾರಾಟ ಮಾಡಿದವರ ನಿಖರ ಮಾಹಿತಿ ಪೊಲೀಸರ ಬಳಿ ಇಲ್ಲ. ಗ್ರಾಮಸ್ಥರನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಯಾವುದೇ ಅಂಗ ಕಸಿ ಮಾಡುವುದಕ್ಕೂ ಅನುಮೋದನೆ ನೀಡಲು ಅಧಿಕಾರ ಹೊಂದಿರುವ ರಾಜ್ಯ ಅಂಗಾಂಗ ಕಸಿಗಾಗಿ ಇರುವ ಅಧಿಕೃತ ಸಮಿತಿಯೊಂದಿಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದೇವೆ, ತನಿಖೆ ಪ್ರಗತಿಯಲ್ಲಿದೆ" ಎಂದು ಎಸ್ ಪಿ ತಿಳಿಸಿದ್ದಾರೆ. 

ಗುವಾಹಟಿ ಮೂಲದ ಏಜೆಂಟ್ ಲಿಲಿಮಾಯ್ ಬೋಡೋ ಕಿಡ್ನಿ ಮಾರಾಟ ಮಾಡಲು ಸಿದ್ಧವಿರುವವರನ್ನು ಹುಡುಕಿ ಗ್ರಾಮಕ್ಕೆ ಬಂದಿದ್ದಾಗ ಆಕೆಯನ್ನು ಬಂಧಿಸಲಾಗಿದೆ. 

ಆಕೆ ಭರವಸೆ ನೀಡಿದ್ದರ ಪ್ರಕಾರ ಹಣವನ್ನು ಪಡೆಯದೇ ಅಸಮಾಧಾನಕ್ಕೆ ಒಳಗಾಗಿದ್ದ ಕುಟುಂಬವೊಂದು ಆಕೆಯನ್ನು ಹಿಡಿದು ಪೊಲೀಸರ ವಶಕ್ಕೆ ಒಪ್ಪಿಸಿದೆ. ಕಿಡ್ನಿಯೊಂದಕ್ಕೆ 4-5 ಲಕ್ಷ ರೂಪಾಯಿ ನೀಡುವುದಾಗಿ ಆಮಿಷವೊಡ್ಡುತ್ತಿದ್ದ ಆಕೆ ಕಮಿಷನ್ ಲೆಕ್ಕದಲ್ಲಿ 1.5 ಲಕ್ಷ ಪಡೆಯುತ್ತಿದ್ದಳು ಎಂದು ಸ್ಥಳೀಯರು ತಿಳಿಸಿದ್ದಾರೆ. 

ಕೃಷ್ಣ ದಾಸ್ ಎಂಬ ಮಹಿಳೆಯ ಪತಿಗೆ ಅನಾರೋಗ್ಯ ಕಾಡುತ್ತಿದ್ದು, ಆಕೆ ಬ್ಯಾಂಕ್ ಸಾಲ ಮರುಪಾವತಿ ಮಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಕಿಡ್ನಿ ಮಾರಾಟಾ ಮಾಡಿದ್ದರು. "ಏಜೆಂಟ್ ನಮಗೆ ಭರವಸೆ ನೀಡಿದ್ದು 4.5 ಲಕ್ಷ ರೂಪಾಯಿ ಆದರೆ ನಮಗೆ ದೊರೆತಿದ್ದು 3.5 ಲಕ್ಷ ರೂಪಾಯಿ" ಎಂದು ಕೃಷ್ಣ ದಾಸ್ ಹೇಳಿದ್ದಾರೆ. 

ಮತ್ತೋರ್ವ ಗ್ರಾಮಸ್ಥ ಶ್ರೀಕಾಂತ್ ದಾಸ್ ಗೆ 5 ಲಕ್ಷ ನೀಡುವುದಾಗಿ ನಂಬಿಸಿದ್ದ ಮಹಿಳೆ ನೀಡಿದ್ದು 3.5 ಲಕ್ಷ ರೂಪಾಯಿಗಳನ್ನಷ್ಟೆ. ನಾನು ಕಿಡ್ನಿ ಮಾರಾಟ ಮಾಡಿದ್ದೆ ಎಂದು ಶ್ರೀಕಾಂತ್ ದಾಸ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com