ದೇಶದ ಶ್ರೀಮಂತ ಸಹಕಾರಿ ವಲಯದ ಮೇಲೆ ಹಿಡಿತ ಸಾಧಿಸಲು ಪ್ರತ್ಯೇಕ ಸಹಕಾರಿ ಸಚಿವಾಲಯ ಸ್ಥಾಪನೆ: ಖರ್ಗೆ ಆರೋಪ

ದೇಶದಲ್ಲಿರುವ ಶ್ರೀಮಂತ ಸಹಕಾರಿ ವಲಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ರಚಿಸಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ

ಮುಂಬಯಿ: ದೇಶದಲ್ಲಿರುವ ಶ್ರೀಮಂತ ಸಹಕಾರಿ ವಲಯವನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಸಹಕಾರ ಸಚಿವಾಲಯವನ್ನು ರಚಿಸಿದೆ ಎಂದು ಕಾಂಗ್ರೆಸ್ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.

ಈ ಮೊದಲು ಹಣಕಾಸು ಸಂಬಂಧಿತ ಸಮಸ್ಯೆಗಳನ್ನು ಹಣಕಾಸು ಸಚಿವರು ನಿರ್ವಹಿಸುತ್ತಿದ್ದರು, ಆದರೆ ಗೃಹ ಸಚಿವರಾಗಿರುವ ಅಮಿತ್ ಶಾ ಅವರು ಜಾರಿ ನಿರ್ದೇಶನಾಲಯವನ್ನು ತಮ್ಮ ಬಳಿ ಇಟ್ಟುಕೊಂಡಿದ್ದಾರೆ ಎಂದು ಅವರು ಹೇಳಿದರು.

ಇದರರ್ಥ ಅಮಿತ್ ಶಾ ತಮ್ಮ ರಾಜಕೀಯ ವಿರೋಧಿಗಳನ್ನು ಗುರಿಯಾಗಿಸಲು ಮತ್ತು ಅವರ ಸದ್ದಡಗಿಸಲು ಇಡಿ ಬಳಸಿಕೊಳ್ಳುತ್ತಿದ್ದಾರೆ. ಸಹಕಾರ ಇಲಾಖೆಯ ವಿಷಯದಲ್ಲೂ ಅದೇ ಆಗುತ್ತದೆ ಎಂದು ಖರ್ಗೆ ದೂರಿದ್ದಾರೆ.

ಈ ಮೊದಲು ಸಹಕಾರ ಸಚಿವಾಲಯ ಕೃಷಿ ಜೊತೆಯಲ್ಲಿತ್ತು. ಆದರೆ ಸದ್ಯ ಕೇಂದ್ರ ಸರ್ಕಾರ ಅದನ್ನು ಪ್ರತ್ಯೇಕಗೊಳಿಸಿದೆ. ಇದರ ಜೊತೆಗೆ ಅಮಿತ್ ಶಾ ಅವರಿಗೆ ಅದರ ಹೊಣೆಗಾರಿಕೆ ನೀಡಿದ್ದಾರೆ. ಇದರಿಂದ ಬಿಜೆಪಿ ಉದ್ದೇಶ ಸ್ಪಷ್ಟವಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನಾವು ಸರ್ಕಾರದ ಈ ನಿರ್ಧಾರವನ್ನು ವಿರೋಧಿಸುತ್ತೇವೆ. ಸರ್ಕಾರವು ಗ್ರಾಮೀಣ ಆರ್ಥಿಕತೆಯ ಅಭಿವೃದ್ಧಿ ಹೊಂದುತ್ತಿರುವ ವಲಯವನ್ನು ರಕ್ಷಿಸುವ ಅಗತ್ಯವಿದೆ ಎಂದು ಖರ್ಗೆ ತಿಳಿಸಿದ್ದಾರೆ.

ಮೋದಿ ಸರ್ಕಾರ ಇತ್ತೀಚೆಗೆ ಹೊಸ ಸಹಕಾರ ಸಚಿವಾಲಯವನ್ನು ರಚಿಸಿದೆ. ಈ ಮಧ್ಯೆ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರು ಸಹಕಾರಿ ವಲಯವನ್ನು ನಿಯಂತ್ರಿಸುವ ಹಕ್ಕನ್ನು ಕೇಂದ್ರಕ್ಕೆ ಹೊಂದಿಲ್ಲ ಎಂದು ಹೇಳಿದ್ದಾರೆ.

ಕೇಂದ್ರವು ಬಹು-ರಾಜ್ಯಗಳ ಸಹಕಾರಿ ವಲಯವನ್ನು ನಿಯಂತ್ರಿಸಬಲ್ಲದು, ರಾಜ್ಯಗಳ ಸಹಕಾರಿ ವಲಯವನ್ನಲ್ಲ. ಅವರು ಅದನ್ನು ಮಾಡಲು ಪ್ರಯತ್ನಿಸಿದರೆ, ಅದು ಒಕ್ಕೂಟ ವ್ಯವಸ್ಥೆ ಮೇಲಿನ ಆಕ್ರಮಣವಾಗಿರುತ್ತದೆ ಎಂದಿದ್ದಾರೆ. ಮಹಾರಾಷ್ಟ್ರದಲ್ಲಿ ಮಾತ್ರ 200 ಕ್ಕೂ ಹೆಚ್ಚು ಸಹಕಾರಿ ಸಕ್ಕರೆ ಕಾರ್ಖಾನೆಗಳಿವೆ, ಅವರ ವಾರ್ಷಿಕ ವಹಿವಾಟು ಸುಮಾರು 35,000 ಕೋಟಿ ರೂ. ಆದರೆ ಸಹಕಾರಿ ಹಾಲು ಒಕ್ಕೂಟ ಮತ್ತು ಸಂಬಂಧಿತ ಉದ್ಯಮಗಳ ವಹಿವಾಟುಗಳು ಒಟ್ಟಾರೆಯಾಗಿ 40,000 ಕೋಟಿ ರೂ ಇದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com