ಕಾನೂನು ಜಾರಿಯಿಂದ ಜನಸಂಖ್ಯೆ ನಿಯಂತ್ರಣ ಅಸಾಧ್ಯ: ಬಿಜೆಪಿ ನೀತಿಗೆ ನಿತೀಶ್ ಕುಮಾರ್ ಟೀಕೆ
ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಅಸ್ಸಾಂ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನು ಜಾರಿಗೆ ಮುಂದಾಗುತ್ತಿದ್ದಂತೆ , ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಸ್ನೇಹಿತ ನಿತೀಶ್ ಕುಮಾರ್ ಮತ್ತೊಮ್ಮೆ ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
Published: 13th July 2021 10:25 AM | Last Updated: 13th July 2021 12:43 PM | A+A A-

ನಿತೀಶ್ ಕುಮಾರ್
ಪಾಟ್ನಾ: ಬಿಜೆಪಿ ಆಡಳಿತ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಅಸ್ಸಾಂ ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನು ಜಾರಿಗೆ ಮುಂದಾಗುತ್ತಿದ್ದಂತೆ, ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಸ್ನೇಹಿತ ನಿತೀಶ್ ಕುಮಾರ್ ಮತ್ತೊಮ್ಮೆ ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.
"ರಾಜ್ಯಗಳು ತಮಗೆ ಬೇಕಾದುದನ್ನು ಮಾಡಬಹುದು. ಆದರೆ ಕಾನೂನಿನಿಂದ ಜನಸಂಖ್ಯಾ ನಿಯಂತ್ರಣ ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬುತ್ತೇನೆ. ಚೀನಾ ಅಥವಾ ಇನ್ನಾವುದೇ ರಾಷ್ಟ್ರದ ಉದಾಹರಣೆಯನ್ನು ಇದಕ್ಕಾಗಿ ತೆಗೆದುಕೊಳ್ಳಬಹುದು" ನಿತೀಶ್ ಕುಮಾರ್ ಹೇಳಿದರು.
ಬಿಹಾರ ಮುಖ್ಯಮಂತ್ರಿ ಪ್ರಕಾರ ಕುಟುಂಬದ ಮಹಿಳೆ ಹೆಚ್ಚು ವಿದ್ಯಾವಂತಳಾದರೆ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಅಂಕಿಅಂಶವು ಒಂದು "ಅಚ್ಚರಿಯ ಸತ್ಯ". "ಮಹಿಳೆಯರಿಗೆ ಅರಿವು ಮತ್ತು ಶಿಕ್ಷಣ ದೊರೆತಾಗ, ಜನಸಂಖ್ಯೆ ಬೆಳವಣಿಗೆ ದರ ಕುಸಿಯುತ್ತದೆ" ಎಂದು ಅವರು ಹೇಳಿದ್ದಾರೆ.
"2040 ರ ವೇಳೆಗೆ ಜನಸಂಖ್ಯೆಯು ಕುಸಿಯಲು ಪ್ರಾರಂಭವಾಗುತ್ತದೆ. ನಾವು ಈ ಮಾರ್ಗದಲ್ಲಿದ್ದೇವೆ. ಇದನ್ನು ಕಾನೂನಿನ ಜಾರಿ ಮೂಲಕ ಮಾಡಬಹುದೆಂದು ಕೆಲವರು ನಂಬಿದರೆ ಅದು ಅವರ ಆಲೋಚನೆ. ನಾವು ಇದನ್ನು ಹೇಗೆ ಮಾಡಬಹುದು ಎಂಬುದರ ಕುರಿತು ನನ್ನ ಆಲೋಚನೆ ಸ್ಪಷ್ಟವಾಗಿದೆ. ಇದು ಕೇವಲ ಒಂದು ಸಮುದಾಯದ ಸಮಸ್ಯೆಯಲ್ಲ, ಆದರೆ ಮಹಿಳೆಯರಿಗೆ ಶಿಕ್ಷಣ ನೀಡಿದರೆ ಎಲ್ಲರಿಗೂ ಲಾಭವಾಗುತ್ತದೆ. ಬಿಹಾರದಲ್ಲಿ ಫಲವತ್ತತೆ ಪ್ರಮಾಣ ಎಷ್ಟು ಕಡಿಮೆಯಾಗುತ್ತಿದೆ ಎಂಬುದನ್ನು ನೀವೇ ಗಮನಿಸಿ" ಎಂದು ಸಿಎಂ ಹೇಳಿದರು.
ಬಿಜೆಪಿಯ ಹಿರಿಯ ಮುಖಂಡರೊಬ್ಬರು ಅದೇ ತರ್ಕದಿಂದ, ನಿತೀಶ್ ಕುಮಾರ್ ಮದ್ಯ ನಿಷೇಧ ಮಾಡಿದರೂ ಇದೀಗ ಮದ್ಯವು ಉಚಿತವಾಗಿ ಲಭ್ಯವಾಗುತ್ತಿದೆ, ಅಲ್ಲದೆ ಹೋಂ ಡೆಲಿವರಿ ಕೂಡಾ ಇದೆ. ಆದ ಕಾರಣ ಅವರೇನು ಉಪದೇಶಿಸುತ್ತಾರೋ ಅದನ್ನು ಅಭ್ಯಾಸ ಮಾಡಬೇಕಿದೆ" ಎಂದು ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ಇದು ನಿತೀಶ್ ಕುಮಾರ್ ಅವರ ಜತೆಗೆ ಭಿನ್ನಾಭಿಪ್ರಾಯ ಹೊಂದಿರುವ ಬಿಜೆಪಿ ನೀತಿಗಳ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯಾಗಿದೆ. 370ನೇ ವಿಧಿ, ಸಿಎಎ-ಎನ್ಆರ್ಸಿ ವಿಚಾರದಲ್ಲಿ ಸಹ ನಿತೀಶ್ ಇದೇ ಬಗೆಯ ಭಿನ್ನಾಭಿಪ್ರಾಯ ತಾಳಿದ್ದರು.