ಜಮ್ಮು-ಕಾಶ್ಮೀರ: ಅಂತರಾಷ್ಟ್ರೀಯ ಗಡಿ ಪ್ರದೇಶದಲ್ಲಿ ಡ್ರೋಣ್ ಹಾರಾಟ, ಸೇನಾಪಡೆಯಿಂದ ಗುಂಡಿನ ದಾಳಿ

ಜಮ್ಮು-ಕಾಶ್ಮೀರ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋಣ್ ಪತ್ತೆಯಾಗಿದೆ. ಮಂಗಳವಾರ ತಡರಾತ್ರಿ ಪತ್ತೆಯಾದ ಡ್ರೋಣ್ ಮೇಲೆ ಬಿಎಸ್ಎಫ್ ಪಡೆಗಳೂ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಶ್ರೀನಗರ: ಜಮ್ಮು-ಕಾಶ್ಮೀರ ಅರ್ನಿಯಾ ಸೆಕ್ಟರ್‌ನ ಅಂತರರಾಷ್ಟ್ರೀಯ ಗಡಿ ಬಳಿ ಡ್ರೋಣ್ ಪತ್ತೆಯಾಗಿದೆ. ಮಂಗಳವಾರ ತಡರಾತ್ರಿ ಪತ್ತೆಯಾದ ಡ್ರೋಣ್ ಮೇಲೆ ಬಿಎಸ್ಎಫ್ ಪಡೆಗಳೂ ಗುಂಡಿನ ದಾಳಿ ನಡೆಸಿದ್ದಾರೆಂದು ತಿಳಿದುಬಂದಿದೆ. 

ಅದು ಜುಲೈ 13ರ ರಾತ್ರಿ ಸಮಯ 9.52, ಅರ್ನಿಯಾ ಸೆಕ್ಟರ್‌ನಲ್ಲಿ ಮಿಣುಕುವ ಕೆಂಪು ಬಣ್ಣದ ದೀಪವನ್ನು ನಮ್ಮ ಸೇನಾ ಯೋಧರು ಗಮನಿಸಿದರು. ಅದು ನಮ್ಮ ಗಡಿಯ 200 ಮೀಟರ್ ಒಳಗೆ ಪ್ರವೇಶಿಸಿದ್ದು, ತಕ್ಷಣ ಎಚ್ಚೆತ್ತುಕೊಂಡ ಯೋಧರು ಆ ಕೆಂಪು ದೀಪದ ಕಡೆಯಲ್ಲಿ ಗುಂಡಿನ ದಾಳಿ ಶುರು ಮಾಡಿದರು.

ಈ ವೇಳೆ ಕೆಂಪು ದೀಪ ಹಿಮ್ಮುಖವಾಗಿ ಸಂಚರಿಸಿದ್ದು, ಅದೇ ಪ್ರದೇಶದಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಆದರೆ ಈವರೆಗೂ ಯಾವುದೇ ಡ್ರೋಣ್ ಪತ್ತೆಯಾಗಿಲ್ಲ," ಎಂದು ಬಿಎಸ್ಎಫ್ ಸ್ಪಷ್ಟಪಡಿಸಿದೆ.

ಕಳೆದ ಜೂನ್ 27ರ ಭಾನುವಾರ ಭಾರತೀಯ ವಾಯುಸೇನೆ ನಿಯಂತ್ರಣದಲ್ಲಿರುವ ಜಮ್ಮು ವಿಮಾನ ನಿಲ್ದಾಣದಲ್ಲಿ ಡ್ರೋಣ್ ದಾಳಿ ನಡೆಸಲಾಗಿತ್ತು. ಬೆಳಗಿನ ಜಾವ 2 ಗಂಟೆ ಸುಮಾರಿಗೆ ಐದು ನಿಮಿಷಗಳ ಅಂತರದಲ್ಲಿ ಎರಡು ಸ್ಫೋಟ ಸಂಭವಿಸಿದ್ದು, ಇಬ್ಬರು ಭಾರತೀಯ ಸೇನಾ ಪಡೆ ಸಿಬ್ಬಂದಿ ಗಾಯಗೊಂಡಿದ್ದಾರೆ.

ಬೆಳಗಿನ ಜಾವ 1.37ರ ಹೊತ್ತಿಗೆ ಮೊದಲ ಸ್ಫೋಟ ಸಂಭವಿಸಿದ್ದು, ಕಟ್ಟಡದ ತಾಂತ್ರಿಕ ವಿಭಾಗದಲ್ಲಿನ ಮೇಲ್ಛಾವಣಿಗೆ ಹಾನಿಯಾಗಿತ್ತು. ಬೆಳಗಿನ ಜಾವ 1.43ರ ಹೊತ್ತಿಗೆ ಒಂದೇ ಕಿಲೋ ಮೀಟರ್ ದೂರದಲ್ಲಿ ಇರುವ ಬಯಲು ಪ್ರದೇಶದಲ್ಲಿ ಎರಡನೇ ಸ್ಫೋಟ ಸಂಭವಿಸಿತ್ತು.

"ಭಾರತೀಯ ವಾಯು ನೆಲೆ ನಿಯಂತ್ರಣದ ಜಮ್ಮು ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಎರಡು ಲಘುಸ್ಫೋಟವು ಉಗ್ರರ ದಾಳಿಯಾಗಿದೆ," ಎಂದು ಜಮ್ಮು ಕಾಶ್ಮೀರ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಸಿಂಗ್ ಸ್ಪಷ್ಟಪಡಿಸಿದ್ದಾರೆ. 

ಈ ಪ್ರಕರಣದಿಂದ ಉಗ್ರರು ದಾಳಿ ನಡೆಸಲು ಮೊದಲ ಬಾರಿಗೆ ಡ್ರೋಣ್ ಬಳಕೆ ಮಾಡಿರುವುದು ತಿಳಿದುಬಂದಿತ್ತು. ಅಲ್ಲದೇ, ಈ ದಾಳಿ ಹಿಂದೆ ಪಾಕಿಸ್ತಾನ ಉಗ್ರ ಸಂಘಟನೆ ಕೈವಾಡವಿರುವ ಬಗ್ಗೆ ಶಂಕೆ ವ್ಯಕ್ತವಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com