ಲಡಾಖ್ ನಲ್ಲಿ ಭಾರತ-ಚೀನಾ ನಡುವೆ ಸಂಘರ್ಷ: ಸೇನಾ ಪಡೆ ವರದಿ ನಿರಾಕರಿಸಿದ್ದರೂ, ಘರ್ಷಣೆ ನಡೆದಿದೆ ಎಂದ ರಾಹುಲ್ ಗಾಂಧಿ

ಪೂರ್ವ ಲಡಾಖ್ ನಲ್ಲಿ ಚೀನಾ ಮತ್ತು ಭಾರತ ಸೇನಾಪಡೆಗಳ ನಡುವೆ ಘರ್ಷಣೆ ನಡೆದಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ಸೇನಾಪಡೆ ನಿರಾಕರಿಸಿದ್ದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾತ್ರ ಘರ್ಷಣೆ ನಡೆದಿದೆ ಎಂದು ಹೇಳಿದ್ದಾರೆ. 
ರಾಹುಲ್ ಗಾಂಧಿ
ರಾಹುಲ್ ಗಾಂಧಿ

ನವದೆಹಲಿ: ಪೂರ್ವ ಲಡಾಖ್ ನಲ್ಲಿ ಚೀನಾ ಮತ್ತು ಭಾರತ ಸೇನಾಪಡೆಗಳ ನಡುವೆ ಘರ್ಷಣೆ ನಡೆದಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತೀಯ ಸೇನಾಪಡೆ ನಿರಾಕರಿಸಿದ್ದರೂ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಮಾತ್ರ ಘರ್ಷಣೆ ನಡೆದಿದೆ ಎಂದು ಹೇಳಿದ್ದಾರೆ. 

ಈ ಕುರಿತು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಪೂರ್ವ ಲಡಾಖ್ ನಲ್ಲಿ ಚೀನಾ ಮತ್ತು ಭಾರತ ಸೇನಾಪಡೆಗಳ ನಡುವೆ ಘರ್ಷಣೆ ನಡೆದಿದೆ ಎಂಬ ಸುದ್ದಿ ಪತ್ರಿಕೆಯೊಂದರ ವರದಿಯನ್ನು ಪೋಸ್ಟ್ ಮಾಡಿ, ವಿದೇಶಿ ಮತ್ತು ರಕ್ಷಣಾ ನೀತಿಯನ್ನು ರಾಜಕೀಯ ಗಿಮಿಕ್ ಆಗಿ ಕೇಂದ್ರ ಸರ್ಕಾರ ಬಳಸಿಕೊಳ್ಳುತ್ತಿದ್ದು, ಇದರಿಂದ ನಮ್ಮ ದೇಶವನ್ನು ದುರ್ಬಲಗೊಳಿಸಿದೆ ಎಂದು ಹೇಳಿದ್ದಾರೆ. ಅಲ್ಲದೆ, ಭಾರತ ಎಂದಿಗೂ ಇಷ್ಟು ಮಟ್ಟದಲ್ಲಿ ಅಸುರಕ್ಷಿತವಾಗಿರಲಿಲ್ಲ ಎಂದು ತಿಳಿಸಿದ್ದಾರೆ. 

ಚೀನಾದ ಸೇನೆ ಪೂರ್ವ ಲಡಾಖ್‌ನಲ್ಲಿರುವ ವಾಸ್ತವ ನಿಯಂತ್ರಣ ರೇಖೆಯನ್ನು (ಎಲ್‌ಎಸಿ) ದಾಟಿದೆ ಮತ್ತು ಎರಡು ದೇಶಗಳ ನಡುವೆ ಘರ್ಷಣೆ ನಡೆದಿದೆ ಎಂದು ಮಾಧ್ಯಮದಲ್ಲಿ ಪ್ರಕಟವಾಗಿರುವ ವರದಿಗೆ ಭಾರತೀಯ ಸೇನೆ ಸ್ಪಷ್ಟನೆ ನೀಡಿದ್ದು, ಪೂರ್ವ ಲಡಾಖ್‌ ಪ್ರದೇಶಗಳ ಆಕ್ರಮಣಕ್ಕಾಗಿ ಭಾರತ ಅಥವಾ ಚೀನಾ ಸೇನೆಯಿಂದ ಯಾವುದೇ ರೀತಿಯ ಪ್ರಯತ್ನಗಳೂ ನಡೆದಿಲ್ಲ. ಆ ಪ್ರದೇಶದಲ್ಲಿ ಬಾಕಿ ಉಳಿದಿರುವ ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಉಭಯ ರಾಷ್ಟ್ರಗಳ ನಡುವೆ ಮಾತುಕತೆ ಮುಂದುವರಿದಿರುವುದಾಗಿ ತಿಳಿಸಿದೆ.

ಪೂರ್ವ ಲಡಾಖ್ ಪ್ರದೇಶದಲ್ಲಿ ಸೇನೆಯು, ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಸೈನಿಕರ ಚಲನವಲನ ಸೇರಿದಂತೆ, ಎಲ್ಲ ರೀತಿಯ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡುತ್ತಿದೆ. ಪೂರ್ವ ಲಡಾಖ್‌ ಗಡಿ ಪ್ರದೇಶದಲ್ಲಿ ಸೇನೆಗಳನ್ನು ವಾಪಸ್‌ ಕರೆಸಿಕೊಳ್ಳುವ ಕುರಿತು ಈ ವರ್ಷದ ಫೆಬ್ರವರಿಯಲ್ಲಿ ಎರಡೂ ದೇಶಗಳ ನಡುವೆ ಒಪ್ಪಂದ ನಡೆದ ನಂತರ, ಈ ಪ್ರದೇಶಗಳನ್ನು ಆಕ್ರಮಿಸುವಂತಹ ಯಾವುದೇ ಪ್ರಯತ್ನಗಳು ಎರಡೂ ದೇಶಗಳಿಂದಲೂ ನಡೆದಿಲ್ಲ. 

ವರದಿಯಲ್ಲಿ ಉಲ್ಲೇಖವಾಗಿರುವಂತೆ ಗಾಲ್ವನ್ ಅಥವಾ ಇನ್ನಾವುದೇ ಪ್ರದೇಶದಲ್ಲಿ ಯಾವುದೇ ಘರ್ಷಣೆಗಳು ನಡೆದಿಲ್ಲ.  ವರದಿಯಲ್ಲಿ ಉಲ್ಲೇಖಿಸಿರುವ ’ಚೀನಾದೊಂದಿಗಿನ ಒಪ್ಪಂದವೂ ಮುರಿದುಬಿದ್ದಿದೆ’ ಎಂಬ ಅಂಶವೂ ಸುಳ್ಳು ಮತ್ತು ಆಧಾರರಹಿತವಾಗಿದೆ ಎಂದು ಸೇನೆ ತಿಳಿಸಿದೆ.

ಗಡಿ ಪ್ರದೇಶಕ್ಕೆ ಸಂಬಂಧಿಸಿದಂತೆ ಬಾಕಿ ಇರುವ ವಿಷಯಗಳನ್ನು ಇತ್ಯರ್ಥಗೊಳಿಸಲು ಎರಡೂ ಕಡೆ ಮಾತುಕತೆ ನಡೆಯುತ್ತಿದೆ. ಇದರ ಜತೆಗೆ, ತಮ್ಮ ತಮ್ಮ ಪ್ರದೇಶಗಳಲ್ಲಿ ಎರಡೂ ರಾಷ್ಟ್ರಗಳ ಸೈನಿಕರು ಗಸ್ತು ತಿರುಗುವುದು ಮುಂದುವರಿದಿದೆ. ಚೀನಾದ ಸೇನೆಯ ಚಲನವಲನ ಸೇರಿದಂತೆ, ಎಲ್ಲ ರೀತಿಯ ಚಟುವಟಿಕೆಗಳ ಮೇಲೆ ನಿಗಾ ಇಡಲಾಗಿದೆ’ ಎಂದು ಸೇನೆ ಸ್ಪಷ್ಟಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com