ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಂಗ್ ಸಿಧು ನೇಮಕ ಸಾಧ್ಯತೆ
ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದು, ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ.
Published: 15th July 2021 08:13 PM | Last Updated: 15th July 2021 08:13 PM | A+A A-

ನವಜೋತ್ ಸಿಂಗ್ ಸಿಧು
ನವದೆಹಲಿ: ಪಂಜಾಬ್ ನಲ್ಲಿ ಶಾಂತಿಯುತವಾಗಿ ಬಿಕ್ಕಟ್ಟು ಬಗೆಹರಿಸಲು ಕಾಂಗ್ರೆಸ್ ಹೈ ಕಮಾಂಡ್ ಎದುರು ನೋಡುತ್ತಿದೆ. ಮುಂಬರುವ ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್, ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದು, ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗುವ ಸಾಧ್ಯತೆಯಿರುವುದಾಗಿ ಮೂಲಗಳು ತಿಳಿಸಿವೆ.
ಉಭಯ ನಾಯಕರ ನಡುವಣ ಭಿನ್ನಾಭಿಪ್ರಾಯ ಶಮನಕ್ಕೆ ಸೂತ್ರವೊಂದನ್ನು ರೂಪಿಸಲಾಗಿದ್ದು, ಶೀಘ್ರದಲ್ಲಿಯೇ ಘೋಷಣೆಯಾಗುವ ಸಾಧ್ಯತೆಯಿದೆ. ಈ ಸೂತ್ರದನ್ವಯ ಮುಖ್ಯಮಂತ್ರಿ ಹಾಗೂ ಸಿಧು ಒಟ್ಟಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಅಮರೀಂದರ್ ಸಿಂಗ್ , ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾದರೆ, ಸಿಧುಗೆ ಪ್ರಮುಖ ಹುದ್ದೆ ಸಿಗಲಿದೆ ಎಂದು ಪಂಜಾಬ್ ಎಐಸಿಸಿ ಉಸ್ತುವಾರಿ ಹರೀಶ್ ರಾವತ್ ತಿಳಿಸಿದರು.
ಕ್ಯಾಪ್ಟನ್ ಅಮರೀಂದರ್ ಸಿಂಗ್ ಹಾಗೂ ಬಹುತೇಕ ಶಾಸಕರು, ಸಂಸದರು ಹಾಗೂ ಪಂಜಾಬ್ ಮುಖಂಡರ ತೀವ್ರ ವಿರೋಧದ ನಡುವೆಯೂ ಸಿಧು ಉನ್ನತ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಒಂದು ವೇಳೆ ಆ ಸ್ಥಾನ ದೊರೆಯದಿದ್ದರೆ ಎಎಪಿಗೆ ಸೇರ್ಪಡೆಯಾಗುವುದಾಗಿ ಬೆದರಿಕೆ ಹಾಕಿದ್ದಾರೆ. ಸಿಧುಗೆ ಪ್ರಿಯಾಂಕಾ ಗಾಂಧಿ ಅವರ ಬೆಂಬಲವಿದ್ದು, ಈ ತಿಂಗಳ ಆರಂಭದಲ್ಲಿ ಸಿಧು ಜೊತೆಗೆ ಮಾತುಕತೆ ನಡೆಸುವಂತೆ ರಾಹುಲ್ ಗಾಂಧಿ ಅವರ ಮನವೊಲಿಸಿದ್ದರು ಎಂದು ಮೂಲಗಳು ಹೇಳಿವೆ.
ಪಂಜಾಬಿನಲ್ಲಿ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇಬ್ಬರು ಕಾರ್ಯಾಧ್ಯಕ್ಷರನ್ನು ಪಕ್ಷ ನೇಮಕ ಮಾಡುವ ಸಾಧ್ಯತೆಯಿದೆ. ಈ ಹುದ್ದೆಗಳಿಗೆ ವಿಜಯ್ ಇಂದರ್ ಸಿಂಗ್ಲಾ ಮತ್ತು ಸಂತೋಖ್ ಸಿಂಗ್ ಚೌಧರಿ ಹೆಸರು ಕೇಳಿಬರುತ್ತಿದೆ. ಸಿಂಗ್ಲಾ ಪಂಜಾಬ್ ಸರ್ಕಾರದಲ್ಲಿ ಸಚಿವರಾಗಿದ್ದರೆ, ಚೌದರಿ ಜಲಾಂದರ್ ನ ಸಂಸದರಾಗಿದ್ದು, ದಲಿತ ಮುಖಂಡರಾಗಿ ಹೆಸರುವಾಸಿಯಾಗಿದ್ದಾರೆ. ಅಮರೀಂದರ್ ಸಿಂಗ್ ಪ್ರಚಾರ ಸಮಿತಿ ಅಧ್ಯಕ್ಷರಾಗಲಿದ್ದು, ಪ್ರತಾಪ್ ಸಿಂಗ್ ಬಾಜ್ವಾ ಪ್ರಣಾಳಿಕೆ ಸಮಿತಿ ಮುಖ್ಯಸ್ಥರಾಗುವ ಸಾಧ್ಯತೆಯಿದೆ.